ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ರಾಣಿಪೇಟೆ ಮಹಿಳೆಯ ಕೊಲೆ ಪ್ರಕರಣದ ತನಿಖೆಗೆ ಮೂರು‌ ತಂಡ ರಚನೆ

Last Updated 23 ಅಕ್ಟೋಬರ್ 2021, 5:46 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆಯಲ್ಲಿ ಶುಕ್ರವಾರ ಸಂಜೆ ನಡೆದ ಮಹಿಳೆಯ ಕೊಲೆ ಪ್ರಕರಣದ ತನಿಖೆಗೆ‌ ಮೂರು ತಂಡಗಳನ್ನು ರಚಿಸಲಾಗಿದ್ದು, ಆರಂಭಿಕ ಮುನ್ನಡೆ ಕೂಡ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದರು.

ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ನೇತೃತ್ವದಲ್ಲಿ ಪಟ್ಟಣ ಠಾಣೆಯ ಸಿಪಿಐ ಶ್ರೀನಿವಾಸ್ ಮನ್ನೆ, ಗ್ರಾಮೀಣ ಠಾಣೆಯ ಸಿಪಿಐ ಶ್ರೀನಿವಾಸ್ ಮೇಟಿ ಹಾಗೂ ಚಿತ್ತವಾಡ್ಗಿ ಠಾಣೆಯ ಜಯಪ್ರಕಾಶ್ ಅವರನ್ನು ಒಳಗೊಂಡ ಮೂರು ತಂಡಗಳು ತನಿಖೆ ನಡೆಸಲಿವೆ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭುವನೇಶ್ವರಿ ಹಾಗೂ ಶಿವಭೂಷಣ ಎಂಬ ಇಬ್ಬರು ಮಹಿಳೆಯರು ಸುಮಾರು 40 ವರ್ಷಗಳಿಂದ ರಾಣಿಪೇಟೆಯ ಅವರ‌ ಮನೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಶಿವಭೂಷಣ ಕೊಟ್ಟಿರುವ ದೂರಿನ ಪ್ರಕಾರ, ಗುರುವಾರ ಇಬ್ಬರು ಬಟ್ಟೆ ಖರೀದಿಗೆಂದು ಬಂದಿದ್ದಾರೆ. ಹೆಚ್ಚಿನ ಬಟ್ಟೆ ಖರೀದಿಗೆ ಮರುದಿನ ಬರುವುದಾಗಿ ಹೇಳಿ ಶುಕ್ರವಾರ ಸಂಜೆ ಐದು ಜನ ಬಂದಿದ್ದಾರೆ. ಬಾಗಿಲು ಮುಚ್ಚಿ, ಇಬ್ಬರ ಬಾಯಿಗೆ ಬಟ್ಟೆ ಹಾಕಿ, ₹3 ಲಕ್ಷ ನಗದು, ನೂರು ಗ್ರಾಂ ಚಿನ್ನಾಭರಣ ದೋಚಿಕೊಂಡು ಹಿಂಬಾಗಿಲಿನಿಂದ ಓಡಿ ಹೋಗಿದ್ದಾರೆ ಎಂದರು.

ಘಟನೆಯಲ್ಲಿ ಉಸಿರುಗಟ್ಟಿ ಭುವನೇಶ್ವರಿ (68) ಎಂಬುವರು ನಿಧನರಾಗಿದ್ದಾರೆ. ಶಿವಭೂಷಣ ಅವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಒಟ್ಟು ಐದು ಜನ ಬಂದು ಕೃತ್ಯ ಎಸಗಿದ್ದಾರೆ. ಎಲ್ಲರ ವಿರುದ್ಧ ಡಕಾಯಿತಿ, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಜನವಸತಿ ಪ್ರದೇಶದಲ್ಲಿ ಕೊಲೆ ನಡೆದಿರುವುದರಿಂದ ಜನ ಸಹಜವಾಗಿಯೇ ಆತಂಕಗೊಂಡಿದ್ದಾರೆ. ಆದರೆ, ಯಾರೂ ಆತಂಕಗೊಳ್ಳಬೇಕಿಲ್ಲ. ಎಲ್ಲ ಜನವಸತಿ ಪ್ರದೇಶಗಳಲ್ಲಿ ಪೊಲೀಸ್ ಬೀಟ್ ಹೆಚ್ಚಿಸಲಾಗುವುದು. ಜನ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಡಬಾರದು. ಅವುಗಳನ್ನು ಬ್ಯಾಂಕಿನ ಲಾಕರ್ ನಲ್ಲಿ ಇಡಬೇಕು ಎಂದು ಮನವಿ ಮಾಡಿದರು.

ಮುಂದಿನ ವರ್ಷ ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆರಂಭವಾಗಲಿದೆ. ನವೆಂಬರ್ ಒಂದರಿಂದ ಬಾಬು ಜಗಜೀವನರಾಮ್ ಭವನದಲ್ಲಿ ತಾತ್ಕಾಲಿವಾಗಿ ಎಸ್ಪಿ ಕಚೇರಿ ಆರಂಭವಾಗಲಿದೆ ಎಂದು ತಿಳಿಸಿದರು. ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT