ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ನಡುವೆ ಹಂಪಿಗೆ ಪ್ರವಾಸಿಗರು

ಜಿಲ್ಲಾಡಳಿತದ ಆದೇಶದಲ್ಲೇ ಗೊಂದಲ; ಪುರಾತತ್ವ ಇಲಾಖೆಗಿಲ್ಲ ಯಾವುದೇ ಸೂಚನೆ
Last Updated 14 ಜನವರಿ 2022, 7:51 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಮಕರ ಸಂಕ್ರಮಣದಲ್ಲಿ ಹೆಚ್ಚಿನ ಸಂಖ್ಯೆಯ ಜನ ಸೇರುವ ನಿರೀಕ್ಷೆ ಇದ್ದಿದ್ದರಿಂದ ಜಿಲ್ಲಾಡಳಿತವು ಹಂಪಿಯಲ್ಲಿ ಗುರುವಾರದಿಂದ ಜಾರಿಗೆ ಬರುವಂತೆ ನಿಷೇಧಾಜ್ಞೆ ಹೇರಿದೆ. ಆದರೆ, ನಿಷೇಧಾಜ್ಞೆ ನಡುವೆ ಪ್ರವಾಸಿಗರು ಹಂಪಿಯಲ್ಲಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಬುಧವಾರ ಹೊರಡಿಸಿರುವ ಆದೇಶದಲ್ಲಿ ಹಂಪಿ ಪುಣ್ಯ ಕ್ಷೇತ್ರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದಷ್ಟೇ ಇದೆ. ಆದರೆ, ಎಲ್ಲೂ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸ್ಮಾರಕಗಳು ವೀಕ್ಷಣೆಗೆ ತೆರೆದಿರುತ್ತವೆಯೋ ಅಥವಾ ಇಲ್ಲವೇ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ.

ಈ ಕುರಿತು ಸ್ಪಷ್ಟವಾಗಿ ಏನನ್ನೂ ತಿಳಿಸದ ಕಾರಣ ಪುರಾತತ್ವ ಇಲಾಖೆಯವರು ಎಂದಿನಂತೆ ಸ್ಮಾರಕಗಳ ಬಾಗಿಲು ತೆರೆದಿದ್ದಾರೆ. ಎಲ್ಲ ಕೌಂಟರ್‌ಗಳಲ್ಲಿ ಪ್ರವಾಸಿಗರಿಗೆ ಟಿಕೆಟ್‌ ನೀಡುತ್ತಿದ್ದಾರೆ. ಹಂಪಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಆದರೆ, ಅಲ್ಲಿ ಯಾರೊಬ್ಬರೂ ತಪಾಸಣೆ ನಡೆಸುತ್ತಿಲ್ಲ. ಹೊರಗಿನಿಂದ ಬರುವ ಪ್ರವಾಸಿಗರು ದೂರದಲ್ಲಿ ವಾಹನಗಳನ್ನು ನಿಲ್ಲಿಸಿ, ಕಾಲ್ನಡಿಗೆಯಲ್ಲಿ ಓಡಾಡಿಕೊಂಡು ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಅಂದಹಾಗೆ, ಪ್ರವಾಸಿಗರ ಪಾಲಿಗೆ ಇಡೀ ಹಂಪಿ ಕ್ಷೇತ್ರ ಪುಣ್ಯವಾದುದು. ಸ್ಮಾರಕಗಳಿಗೆ ಹೊಂದಿಕೊಂಡಂತೆ ಹಲವು ದೇವಸ್ಥಾನಗಳು, ದೇವರ ಮೂರ್ತಿಗಳಿವೆ. ಗುರುವಾರ ವಿರೂಪಾಕ್ಷೇಶ್ವರ ದೇವಸ್ಥಾನದ ಮುಖ್ಯ ಪ್ರವೇಶ ದ್ವಾರ ಮುಚ್ಚಲಾಗಿತ್ತು. ಅನೇಕರು ದೇವಸ್ಥಾನಕ್ಕೆ ಬಂದು ಹಿಂತಿರುಗಿದರು. ಆದರೆ, ಸ್ಮಾರಕಗಳನ್ನು ನೋಡಿಕೊಂಡು ತೆರಳುತ್ತಿರುವುದು ಕಂಡು ಬಂತು.

ಇಷ್ಟೇ ಅಲ್ಲ; ವಿವಿಧ ಕಡೆಯ ಪ್ರವಾಸಿಗರು, ಕಾಲೇಜಿನ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಹಂಪಿಗೆ ಬಂದು, ಕೋವಿಡ್‌ ನಿಯಮ ಉಲ್ಲಂಘಿಸಿ ಎಲ್ಲೆಡೆ ಓಡಾಡುತ್ತಿದ್ದಾರೆ. ಅವರನ್ನು ಯಾರೂ ತಡೆಯುವವರು ಇಲ್ಲದಂತಾಗಿದೆ. ಗುರುವಾರ ನಿಷೇಧಾಜ್ಞೆ ನಡುವೆಯೇಗಂಗಾವತಿಯ ಕೊಟ್ಟೂರೇಶ್ವರ ಮಹಿಳಾ ಕಾಲೇಜು ಸೇರಿದಂತೆ ಇತರೆ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳದೆ ಸ್ಮಾರಕಗಳ ಬಳಿ ಸುತ್ತಾಡಿ, ವೀಕ್ಷಿಸಿದರು. ಅಲ್ಲಿದ್ದ ಭದ್ರತಾ ಸಿಬ್ಬಂದಿ ಕನಿಷ್ಠ ಅವರನ್ನು ನಿಯಮ ಪಾಲಿಸುವ ಕುರಿತು ಎಚ್ಚರಿಸುವ ಕೆಲಸವೂ ಮಾಡಲಿಲ್ಲ.

ಸ್ಥಳೀಯರ ವಿರೋಧ:

ಜಿಲ್ಲಾಡಳಿತವು ಇದುವರೆಗೆ ವೀಕೆಂಡ್‌ ಕರ್ಫ್ಯೂ ಹೇರಿತ್ತು. ಇದೀಗ ಹಬ್ಬದ ಸಂದರ್ಭದಲ್ಲಿ ನಿಷೇಧಾಜ್ಞೆ ಹೇರಿದೆ. ಕೋವಿಡ್‌ ತಡೆಯಲು ಇದು ಒಳ್ಳೆಯ ನಿರ್ಧಾರ. ಆದರೆ, ಅದರ ಆದೇಶದಲ್ಲಿ ಗೊಂದಲವಿರುವುದರಿಂದ ಪ್ರವಾಸಿಗರು ಬಂದು ಹೋಗುವುದು ನಿಂತಿಲ್ಲ ಎನ್ನುತ್ತಾರೆ ಸ್ಥಳೀಯರು.

’ಜಿಲ್ಲಾಡಳಿತದ ಆದೇಶ ನೋಡಿದರೆ ಹಬ್ಬಕ್ಕೆ ಬರುವ ಭಕ್ತರಿಂದ ಕೋವಿಡ್‌ ಬರುತ್ತದೆ. ಪ್ರವಾಸಿಗರಿಂದ ಬರುವುದಿಲ್ಲ ಎಂಬರ್ಥದಲ್ಲಿದೆ. ಹಂಪಿಗೆ ಹೊರಗಿನಿಂದ ಬರುವ ಎಲ್ಲರ ಪ್ರವೇಶ ನಿಷೇಧಿಸಬೇಕು. ಕೆಲವರನ್ನು ತಡೆದು, ಕೆಲವರಿಗೆ ಬಿಟ್ಟರೆ ನಿಷೇಧಾಜ್ಞೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ‘ ಎಂದು ಸ್ಥಳೀಯರಾದ ರಾಜು, ರಮೇಶ, ಹುಲುಗಪ್ಪ ಹೇಳಿದರು.

’ಮಕರ ಸಂಕ್ರಮಣದ ಪುಣ್ಯ ಸ್ನಾನಕ್ಕೆ ಅನೇಕ ರಾಜ್ಯಗಳಿಂದ ಭಕ್ತರು ಪ್ರತಿವರ್ಷ ಹಂಪಿಗೆ ಬರುವುದು ನಿಜ. ಆದರೆ, ಸ್ಮಾರಕಗಳ ವೀಕ್ಷಣೆಯ ನೆಪದಲ್ಲಿ ಹಂಪಿಗೆ ಬಂದು ಹೋಗಬಹುದು. ಭಕ್ತರು, ಪ್ರವಾಸಿಗರನ್ನು ವಿಂಗಡಿಸಲು ಸಾಧ್ಯವಿಲ್ಲ‘ ಎಂದರು.

ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಅನಿರುದ್ಧ್‌ ದೇಸಾಯಿ, ’ವಾರಾಂತ್ಯದಲ್ಲಿ ಮಾತ್ರ ಸ್ಮಾರಕಗಳ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲು ಕೇಂದ್ರ ಕಚೇರಿಯ ಸೂಚನೆ ಇದೆ. ಆದರೆ, ಈಗ ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬಂದಿಲ್ಲ. ಪ್ರವಾಸಿಗರಿಗೆ ನಿರ್ಬಂಧ ಹೇರಿಲ್ಲ‘ ಎಂದು ತಿಳಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT