ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಇದ್ದ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಯಶಸ್ವಿಯಾದ ಬಳಿಕ ಎಲ್ಲಾ ಗೇಟ್‌ಗಳನ್ನು ಬಂದ್ ಮಾಡಿ ನೀರು ಸಂಗ್ರಹಿಸಲಾಗುತ್ತಿದ್ದು, ಎರಡು ದಿನಗಳಲ್ಲಿ ನಾಲ್ಕು ಟಿಎಂಸಿ ಅಡಿಯಷ್ಟು ಹೆಚ್ಚಳವಾಗಿದೆ.
ಈ ಮಧ್ಯೆ, 19ನೇ ತಾತ್ಕಾಲಿಕ ಗೇಟ್‌ನಲ್ಲಿ ಆಗುತ್ತಿದ್ದ ಸೋರಿಕೆಯನ್ನು ಭಾನುವಾರ ಸಂಜೆಯ ವೇಳೆಗೆ ಸಂಪೂರ್ಣ ಬಂದ್ ಮಾಡಲಾಗಿದೆ. ಇದೀಗ ತುಂತುರು ಹನಿಯಂತೆ ಮಾತ್ರ ನೀರು ಸೋರುತ್ತಿದೆ.
ಶನಿವಾರ ರಾತ್ರಿ 9 ಗಂಟೆಗೆ ಗೇಟ್ ಬಂದ್ ಮಾಡುವ ಕಾರ್ಯ ಕೊನೆಗೊಂಡಾಗ ಅಣೆಕಟ್ಟೆಯ ನೀರಿನ ಮಟ್ಟ 1,623.54 ಅಡಿ (ಗರಿಷ್ಠ 1,633 ಅಡಿ) ಇತ್ತು. ಸೋಮವಾರ ಅದು 1,624.58 ಅಡಿಗೆ ಏರಿಕೆಯಾಗಿದೆ. ನೀರು ಸಂಗ್ರಹ ಪ್ರಮಾಣ 71.82 ಟಿಎಂಸಿ ಅಡಿ ಇತ್ತು. ಸೋಮವಾರ ಅದು 75.12 ಟಿಎಂಸಿ ಅಡಿಗೆ ಹೆಚ್ಚಳವಾಗಿದೆ.
ಜಲಾಶಯದ ಸದ್ಯದ ಒಳಹರಿವಿನ ಪ್ರಮಾಣ 37,687 ಕ್ಯುಸೆಕ್ ಇದ್ದು, ಹೊರಹರಿವಿನ ಪ್ರಮಾಣ 10,275 ಕ್ಯುಸೆಕ್ ಇದೆ. ಇದೇ ರೀತಿ ಒಳಹರಿವಿನ ಪ್ರಮಾಣ ಮುಂದುವರಿದರೆ 10ರಿಂದ 15 ದಿನದೊಳಗೆ 90 ಟಿಎಂಸಿ ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಲಿದೆ ಎಂದು ತಜ್ಞರು ಹೇಳಿದ್ದಾರೆ.