ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ: ಪೊಲೀಸರು ಮತ್ತು ಕೆಆರ್‌ಎಸ್ ಪಕ್ಷದ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ

Last Updated 31 ಜನವರಿ 2022, 11:54 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ (ವಿಜಯನಗರ): ಪಟ್ಟಣದ ಪೊಲೀಸರು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಹರಕುಣಿ ಗಣೇಶ್ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷ ಎಚ್.ವೀರನಗೌಡ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಬಂಧಿಸಿದ್ದಾರೆ ಎಂದು ಆರೋಪಿಸಿ ಸೋಮವಾರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮತ್ತು ಪದಾಧಿಕಾರಿಗಳು ಸಿಪಿಐ ಟಿ.ಮಂಜಣ್ಣ ಅವರೊಂದಿಗೆ ವಾಗ್ವಾದ ನಡೆಸಿದರು.

ಪಟ್ಟಣದ ಪೊಲೀಸ್ ಠಾಣೆ ಮುಂದೆ ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿ, ಪಟ್ಟಣದ ಪಿಎಸ್‌ಐ ಪಿ.ಸರಳಾ ಅವರು ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಿ ಸವಾರರಿಗೆ ದಂಡ ಹಾಕುತ್ತಿರುವುದನ್ನು ಪ್ರಶ್ನಿಸಿದ ಪಕ್ಷದ ಮುಖಂಡರನ್ನು ಅಕ್ರಮವಾಗಿ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ. ಪೊಲೀಸರು ಕಲಂ ೩೫೩ ಅನ್ನು ಇತ್ತೀಚೆಗೆ ಯಥೇಚ್ಛವಾಗಿ ಬಳಸುವ ಮೂಲಕ ಹೋರಾಟಗಾರರನ್ನು ಅನ್ಯಾಯಗಳ ವಿರುದ್ಧದ ಹೋರಾಟಗಳಿಂದ ವಿಮುಖರಾಗುವಂತೆ ಮಾಡುತ್ತಿದ್ದಾರೆ. ಯಾವ ಅಪರಾಧ ಮಾಡಿದರೆ ಸೆಕ್ಷೆನ್ ಹಾಕಬೇಕು ಎಂದು ಗೊತ್ತಿಲ್ಲದ ಪೊಲೀಸರು ಧಾರಾಳವಾಗಿ ಈ ಸೆಕ್ಷೆನ್ ೩೫೩ ಬಳಕೆ ಮಾಡಿ ಹೋರಾಟಗಾರ ಧ್ವನಿ ಅಡಗಿಸುವ ಕಾರ್ಯತಂತ್ರಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಲ್ ಇನ್ ಸ್‌ ಪೆಕ್ಟರ್ ಟಿ.ಮಂಜಣ್ಣ, ಕೆಆರ್‌ಎಸ್ ಪಕ್ಷದ ಮುಖಂಡರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ, ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿದೆ ಪ್ರಯಾಣಿಸುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾಗ ಪೊಲೀಸರ ಕೈಯಲ್ಲಿದ್ದ ಪ್ಯಾಡ್ ಕಸಿದುಕೊಂಡಿದ್ದಾರೆ. ಈ ಕಾರಣದಿಂದಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆಗ ಪರಸ್ಪರ ವಾಗ್ವಾದ ನಡೆಯಿತು. ಪೊಲೀಸರು ಅಮಾಯಕರಿಗೆ ತೊಂದರೆ ನೀಡಬಾರದು, ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕೆಂದು ರವಿಕೃಷ್ಣರೆಡ್ಡಿ ಹೇಳಿದರು. ಕೋವಿಡ್ ನಿಯಮಾವಳಿಗಳು ಜಾರಿಯಲ್ಲಿರುವುದರಿಂದ ಮುಂದಿನ ದಿನಗಳಲ್ಲಿ ಕೋವಿಡ್ ನಿರ್ಬಂಧಗಳು ತೆರವಾದ ಬಳಿಕ ಪೊಲೀಸ್ ಠಾಣೆ ಮುಂದೆ ಪಕ್ಷದಿಂದ ಧರಣಿ ನಡೆಸಲಾಗುವುದು ಎಂದರು.

ಮುಂಜಾಗ್ರತ ಕ್ರಮವಾಗಿ ಇಬ್ಬರು ಸಿಪಿಐ, ಮೂವರು ಪಿಎಸ್‌ಐ, ೫೦ಕ್ಕೂ ಹೆಚ್ಚು ಪೊಲೀಸರು, ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ದೊಡ್ಮನಿ, ಪ್ರಧಾನ ಕಾರ್ಯದರ್ಶಿ ಪ.ಯ.ಗಣೇಶ್ ಸೇರಿದಂತೆ ೨೫ಕ್ಕೂ ಹೆಚ್ಚು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT