ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ| ವಿಜೃಂಭಣೆಯಿಂದ ಜರುಗಿದ ಉಜ್ಜಯಿನಿ ಮರುಳಸಿದ್ದೇಶ್ವರಸ್ವಾಮಿ ರಥೋತ್ಸವ

Published 25 ಏಪ್ರಿಲ್ 2023, 15:06 IST
Last Updated 25 ಏಪ್ರಿಲ್ 2023, 15:06 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ ಜಿಲ್ಲೆ) : ಪಂಚಪೀಠಗಳಲ್ಲೊಂದಾದ ಉಜ್ಜಯಿನಿ ಸದ್ಧರ್ಮ ಪೀಠದ ಮುರುಳಸಿದ್ದೇಶ್ವರ ಸ್ವಾಮಿ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಬೆಳಗಿನ ಜಾವದಿಂದ ದೇವಸ್ಥಾನದಲ್ಲಿ ಅರ್ಚಕರ ಬಳಗವು ವಿವಿಧ ಬಗೆಯ ಪುಷ್ಪಗಳಿಂದ ಸ್ವಾಮಿಯನ್ನು ಅಲಂಕರಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಭಕ್ತರು ಸರತಿ ಸಾಲಿನಲ್ಲಿ ಸ್ವಾಮಿಯ ದರ್ಶನ ಪಡೆದರು.

ದಾರುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ರಥೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಹೋಮ ಹವನ, ಪೂಜಾ ವಿಧಿ ವಿಧಾನಗಳು ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿತು. ಪೀಠದ ಪರಂಪರೆಯಂತೆ ಭಾವೈಕ್ಯತೆಯ ಪ್ರತೀಕವಾಗಿ ಪೀಠಾಧೀಶರಾದ ಸಿದ್ಧಲಿಂಗ ಶಿವಾಚಾರ್ಯರು ಭಕ್ತರೊಂದಿಗೆ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ದರ್ಗಾಕ್ಕೆ ಭೇಟಿ ನೀಡಿದರು.

ಸಂಜೆ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಕಲ ಮಂಗಳವಾದ್ಯದೊಂದಿಗೆ ತೇರು ಬಯಲಿಗೆ ತರಲಾಯಿತು.

ಪಲ್ಲಕ್ಕಿ ಉತ್ಸವವು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಅರ್ಚಕರು ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ರಥವನ್ನೇರಿ ಸ್ವಾಮಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಿದರು. ಪಟಾಕ್ಷಿ ಸವಾಲಿನಲ್ಲಿ ಹಂಪನೂರು ಗ್ರಾಮದ ರೇವಣಸಿದ್ಧಯ್ಯ ₹3.60 ಲಕ್ಷಕ್ಕೆ ತಮ್ಮದಾಗಿಸಿಕೊಂಡರು.

ನಂತರ ಭಕ್ತರು ಮರುಳಸಿದ್ದೇಶ್ವರ ಮಹಾರಾಜರಿಗೆ ಜೈ ಎಂದು ಜೈಕಾರ ಹಾಕುತ್ತ ರಥವನ್ನು ಭಕ್ತಿಯಿಂದ ಎಳೆಯಲು ಪ್ರಾರಂಭಿಸುತ್ತಿದ್ದಂತೆ ನೆರದ ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದರು. ಬಾಳೆಹಣ್ಣು, ಉತ್ತತ್ತಿ ಮತ್ತು ದವನವನ್ನು ತೂರಿ ಭಕ್ತಿ ಸಮರ್ಪಿಸಿದರು.

ರಥವು ಪಾದಗಟ್ಟೆ ತಲುಪಿ ಗೊದೂಳಿ ಸಮಯದಲ್ಲಿ ಮೂಲ ನೆಲೆ ತಲುಪುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಅಸಂಖ್ಯ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT