ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್. 2ರಂದು ವಿಜಯನಗರ ಜಿಲ್ಲೆ ಉದ್ಘಾಟನೆ; ಸಚಿವ ಆನಂದ್‌ ಸಿಂಗ್‌

ಕೋವಿಡ್‌ ನಿಯಮ ಪಾಲಿಸಿಯೇ ವಿಜೃಂಭಣೆಯ ಕಾರ್ಯಕ್ರಮ
Last Updated 30 ಸೆಪ್ಟೆಂಬರ್ 2021, 10:02 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅಕ್ಟೋಬರ್ 2, 3ರಂದು ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭವನ್ನು ಕೋವಿಡ್‌ ನಿಯಮ ಪಾಲಿಸಿಯೇ ವಿಜೃಂಭಣೆಯಿಂದ ಆಚರಿಸಲಾಗುವುದು’ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

‘ಯಾವುದೇ ಕಾರಣಕ್ಕೂ ಕೋವಿಡ್‌ ನಿಯಮ ಉಲ್ಲಂಘನೆ ಆಗಲು ಬಿಡುವುದಿಲ್ಲ. ಕಾರ್ಯಕ್ರಮಕ್ಕೆ ಬರುವವರು ಮಾಸ್ಕ್‌ ಧರಿಸುವುದು ಕಡ್ಡಾಯ ಮಾಡಲಾಗಿದೆ. ಪ್ರಧಾನ ಕಾರ್ಯಕ್ರಮ ನಡೆಯಲಿರುವ ನಗರದ ಕ್ರೀಡಾಂಗಣದ ಸುತ್ತಮುತ್ತ ಎಂಟು ಬೃಹತ್‌ ಎಲ್‌ಇಡಿ ಪರದೆ ಅಳವಡಿಸಲಾಗುವುದು. ನಗರದ ಎಲ್ಲಾ ಮೈದಾನಗಳಲ್ಲೂ ಎಲ್‌ಇಡಿ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಎಲ್‌ಇಡಿ ಪರದೆ, ಕುರ್ಚಿಗಳು, ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುವುದು. ಕೋವಿಡ್‌ ಇರುವುದರಿಂದ ಜನ ಸಹಕರಿಸುತ್ತಾರೆ ಎಂಬ ಸಂಪೂರ್ಣ ಭರವಸೆ ಇದೆ. ಅ. 2ರಂದು ಸಂಜೆ 4ಕ್ಕೆ ನಗರದ ವಡಕರಾಯ ದೇವಸ್ಥಾನದಿಂದ ಕಾರ್ಯಕ್ರಮ ನಡೆಯಲಿರುವ ಕ್ರೀಡಾಂಗಣದ ವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಸ್ಥಳೀಯ ಮತ್ತು ರಾಜ್ಯದ ನಾನಾ ಭಾಗಗಳ 80 ಕಲಾ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಅಲಂಕರಿಸಿದ ವಾಹನದಲ್ಲಿ ಭುವನೇಶ್ವರಿ ದೇವಿ ಮೂರ್ತಿಯ ಮೆರವಣಿಗೆ ನಡೆಯಲಿದೆ’ ಎಂದು ವಿವರಿಸಿದರು.

‘ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ಜಿಲ್ಲೆ ಉದ್ಘಾಟಿಸುವರು. ಜಿಲ್ಲೆ ರಚನೆಗೆ ಕಾರಣೀಕರ್ತರಾದ ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಕೂಡ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಇದೇ ವೇದಿಕೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್‌ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನ ಆಚರಿಸಲಾಗುವುದು. ಸರ್ವಧರ್ಮ ಪ್ರಾರ್ಥನೆಯೂ ಜರುಗಲಿದೆ. ಇದೇ ವೇಳೆ ಸಿ.ಎಂ. ₹350 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡುವರು’ ಎಂದು ತಿಳಿಸಿದರು.

‘ಉದ್ಘಾಟನಾ ಸಮಾರಂಭದ ನಂತರ ಗಾಯಕರಾದ ಸವಿತಾ, ಎಂ.ಡಿ. ಪಲ್ಲವಿ, ಅನನ್ಯ ಭಟ್‌, ಕಲಾವತಿ ದಯಾನಂದ್‌, ಶಹನಾಜ್‌ ಅಕ್ತರ್‌, ಶಿವಮಣಿ, ರಾಜೇಶ್‌ ವೈದ್ಯ, ಪ್ರವೀಣ್‌ ಗೋಡ್ಖಿಂಡಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡುವರು’ ಎಂದು ಮಾಹಿತಿ ನೀಡಿದರು.

‘ಅ. 3ರಂದು ಸಂಜೆ 4ಕ್ಕೆ ತಾಲ್ಲೂಕಿನ ಗಾಳೆಮ್ಮನ ಗುಡಿಯಿಂದ ಎತ್ತಿನ ಬಂಡಿಗಳ ಮೆರವಣಿಗೆ ನಡೆಯಲಿದೆ. ಕೃಷಿ ಸಚಿವ ಬಿ.ಸಿ. ಪಾಟೀಲ ಚಾಲನೆ ಕೊಡುವರು. ಮೂರು ಅತ್ಯುತ್ತಮ ಎತ್ತಿನ ಬಂಡಿಗಳಿಗೆ ಬಹುಮಾನ ಕೊಡಲಾಗುವುದು. ಸಂಜೆ 6ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಕೌಶಲ ಅಬಿವೃದ್ಧಿ, ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌, ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್‌ ಖೂಬಾ ಸೇರಿದಂತೆ ರಾಜ್ಯದ ಜನಪ್ರತಿನಿಧಿಗಳು ಪಾಲ್ಗೊಳ್ಳುವರು’ ಎಂದು ತಿಳಿಸಿದರು.

‘ಸಮಾರೋಪದ ನಂತರ ಲಕ್ಷ್ಮಿ ದುಬೆ, ಮಂಜುಳಾ ಪರಮೇಶ್‌, ಮಂಗ್ಲಿ, ಅನುರಾಧಾ ಭಟ್‌, ಶಮಿತಾ ಮಲ್ನಾಡ್‌ ಹಾಗೂ ವಿಜಯ್‌ ಪ್ರಕಾಶ್‌, ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಬಳಿಕ ಸಿಡಿಮದ್ದು ಸುಡುವು ಕಾರ್ಯಕ್ರಮ ಜರುಗಲಿದೆ’ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ಡಿವೈಎಸ್ಪಿ ವಿಶ್ವನಾಥ್‌ ರಾವ್‌ ಕುಲಕರ್ಣಿ ಇದ್ದರು.

ವೇದಿಕೆಗೆ ವಿದ್ಯಾರಣ್ಯರ ಹೆಸರು

‘180X80 ಅಡಿ ಅಗಲದ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಅದಕ್ಕೆ ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದ ಗುರು ವಿದ್ಯಾರಣ್ಯರ ಹೆಸರಿಡಲಾಗಿದೆ. ಅದೇ ರೀತಿ ಮುಖ್ಯ ದ್ವಾರಗಳಿಗೆ ಹಕ್ಕ–ಬುಕ್ಕರ ಹೆಸರು ಇಡಲಾಗಿದೆ. ವೇದಿಕೆಯ ಎರಡೂ ಬದಿಯಲ್ಲಿ 30 ಮಳಿಗೆಗಳು ತಲೆ ಎತ್ತಲಿವೆ. ಸ್ವಸಹಾಯ ಸಂಘ, ಗುಡಿ ಕೈಗಾರಿಕೆ, ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಯೋಜನೆಗಳ ಕುರಿತು ಅರಿವು ಮೂಡಿಸಲಾಗುವುದು’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

‘₹5 ಕೋಟಿ ಖರ್ಚು’

‘ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭ ನಿಮಿತ್ತ ಎರಡು ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಒಟ್ಟು ₹5 ಕೋಟಿ ವರೆಗೆ ಖರ್ಚು ಬರುವ ಸಾಧ್ಯತೆ ಇದೆ’ ಎಂದು ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದರು.

‘ರಾಜ್ಯ ಸರ್ಕಾರವು ಕಾರ್ಯಕ್ರಮಕ್ಕೆ ₹4 ಕೋಟಿ ನೀಡಿದೆ. ಉದ್ಯಮಿಗಳು, ಸಂಘ ಸಂಸ್ಥೆಗಳು ಸಿಎಸ್‌ಆರ್‌ ಅಡಿ ನೆರವಿಗೆ ಮುಂದೆ ಬಂದಿವೆ. ‘ಹಂಪಿ ಉತ್ಸವ’ಕ್ಕಿಂತ ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ಜರುಗಲಿದೆ. ಪ್ರತಿಯೊಂದರ ಲೆಕ್ಕ ಇಡಲಾಗುತ್ತದೆ’ ಎಂದು ಹೇಳಿದರು.

‘ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಕಲಾವಿದರ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಯಾರಿಗಾದರೂ ಪಾಸಿಟಿವ್‌ ಬಂದರೆ ಅಂತಹವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವುದಿಲ್ಲ. ಕೋವಿಡ್‌ ಲಾಕ್‌ಡೌನ್‌ನಿಂದ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಅವರಲ್ಲಿ ಹುರುಪು ತುಂಬಲಾಗುತ್ತದೆ. ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಪ್ರವಾಸೋದ್ಯಮ ಉತ್ತೇಜನದ ದೃಷ್ಟಿಯಿಂದಲೂ ಕಾರ್ಯಕ್ರಮ ಸಹಕಾರಿಯಾಗಲಿದೆ’ ಎಂದು ವಿವರಿಸಿದರು.

‘ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಒಟ್ಟು ಎರಡು ಸಾವಿರ ಆಸನಗಳಿಗೆ ವ್ಯವಸ್ಥೆ ಮಾಡಲಾಗುತ್ತದೆ. ಗಣ್ಯರಿಗೆ ಈಗಾಗಲೇ ಪಾಸ್‌ಗಳನ್ನು ವಿತರಿಸಲಾಗಿದೆ. ಜನದಟ್ಟಣೆ ನೋಡಿಕೊಂಡು ಸಾರ್ವಜನಿಕರಿಗೆ ಪ್ರವೇಶ ಪಾಸ್‌ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT