ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲೆಯ ಮೂರು ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ

Last Updated 8 ಡಿಸೆಂಬರ್ 2021, 7:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆ,ಹೊಸಪೇಟೆತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ವಿಜಯನಗರಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆಗೆ ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ಬುಧವಾರ ಅಧಿಸೂಚನೆ ಹೊರಡಿಸಿದರು.

‘ನಗರಸಭೆಯ 35 ವಾರ್ಡ್, ಪಟ್ಟಣ ಪಂಚಾಯಿತಿಯ 18 ವಾರ್ಡ್‌ ಹಾಗೂ ಪುರಸಭೆಯ 23 ವಾರ್ಡ್‌ಗಳಿಗೆ ಬುಧವಾರದಿಂದ ಡಿ. 15ರ ವರೆಗೆ ನಾಮಪತ್ರ ಸಲ್ಲಿಸಬಹುದು. ಅಭ್ಯರ್ಥಿ ಸೇರಿದಂತೆ ಐವರಿಗಷ್ಟೇ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬುಧವಾರದಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅದರ ಕಟ್ಟುನಿಟ್ಟಿನ ಜಾರಿಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಇಡೀ ಜಿಲ್ಲೆಗೆ ಅನ್ವಯಿಸದು. ಚುನಾವಣೆ ನಡೆಯಲಿರುವ ನಗರ, ಪಟ್ಟಣಗಳಿಗೆ ಮಾತ್ರ ಅನ್ವಯಿಸುತ್ತದೆ’ ಎಂದು ಜಿಲ್ಲಾಧಿಕಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಯಾರು ಕೂಡ ಯಾವುದೇ ಜಾತಿ, ಧರ್ಮದ ಹೆಸರಿನಲ್ಲಿ ಪ್ರಚಾರ ನಡೆಸುವಂತಿಲ್ಲ. ಈ ಕುರಿತು ಸಾರ್ವಜನಿಕರು ಕೂಡ ದೂರು ಸಲ್ಲಿಸಬಹುದು. ಅಭ್ಯರ್ಥಿಗಳ ಖರ್ಚಿನ ಮೇಲೆ ನಿಗಾ ಇಡಲು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ನಗರಸಭೆ ಚುನಾವಣೆಗೆ ಸ್ಪರ್ಧಿಸುವವರು ₹2 ಲಕ್ಷ, ಪುರಸಭೆಗೆ ₹1.5 ಲಕ್ಷ, ಪಟ್ಟಣ ಪಂಚಾಯಿತಿಗೆ ₹1 ಲಕ್ಷ ವೆಚ್ಚದ ಮಿತಿ ನಿಗದಿಗೊಳಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

‘ವಾರ್ಡ್‌ವಾರು ಮೀಸಲಾತಿಗೆ ಸಂಬಂಧಿಸಿದಂತೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ, ಹೈಕೋರ್ಟ್‌ ಆದೇಶದ ಮೇರೆಗೆ ಚುನಾವಣೆ ನಡೆಸಲಾಗುತ್ತಿದೆ. ಮುಂದೆ ನ್ಯಾಯಾಲಯ ಯಾವ ಆದೇಶ ಕೊಡುತ್ತದೆಯೋ ಅದನ್ನು ಕೂಡ ಪಾಲಿಸಲಾಗುವುದು. ಮತದಾನದ ದಿನ ಮತದಾರರ ಯಾವ ಬೆರಳಿಗೆ ಶಾಯಿ ಹಾಕಬೇಕು ಎನ್ನುವುದರ ಬಗ್ಗೆ ಇನ್ನಷ್ಟೇ ತೀರ್ಮಾನಕ್ಕೆ ಬರಲಾಗುವುದು’ ಎಂದು ವಿವರಿಸಿದರು.

ಆಫ್ರಿಕಾದಿಂದ ಬಂದವರ ವರದಿ ನೆಗೆಟಿವ್‌
‘ಪಶ್ಚಿಮ ಆಫ್ರಿಕಾದ ಗಿನಿ ದೇಶದಿಂದ ನಗರಕ್ಕೆ ಬಂದಿರುವ ಇಬ್ಬರನ್ನು ಎರಡು ಸಲ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎರಡೂ ಸಲ ಅವರ ವರದಿ ನೆಗೆಟಿವ್‌ ಬಂದಿದೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸುವುದರ ಬಗ್ಗೆ ಒಂದು ವಾರ ಜಾಗೃತಿ ಮೂಡಿಸಲಾಗುವುದು. ಅದರ ಬಳಿಕ ಮಾಸ್ಕ್‌ ಧರಿಸದಿದ್ದರೆ ದಂಡ ಹೇರಲಾಗುವುದು’ ಎಂದು ತಿಳಿಸಿದರು.

‘ಶಾಲಾ, ಕಾಲೇಜು, ಹೋಟೆಲ್‌ನವರ ಸಭೆ ನಡೆಸಿ ಕೋವಿಡ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ನಿತ್ಯ ಜಿಲ್ಲೆಯಲ್ಲಿ ಸಾವಿರ ಜನರ ಪರೀಕ್ಷೆ ನಡೆಸಲಾಗುತ್ತಿದೆ. ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರದಲ್ಲಿ ಸದ್ಯ 40 ಸಕ್ರಿಯ ಪ್ರಕರಣಗಳಿವೆ. ಬುಲೆಟಿನ್‌ನಲ್ಲಿ 120 ಸಂಖ್ಯೆ ತೋರಿಸಲಾಗುತ್ತಿದ್ದು, ಅದನ್ನು ಸರಿಪಡಿಸಲು ಸೂಚಿಸಲಾಗಿದೆ’ ಎಂದರು.

‘ವಿಜಯನಗರ ಜಿಲ್ಲೆಯಲ್ಲಿ ಶೇ 97ರಷ್ಟು ಜನರಿಗೆ ಮೊದಲ ಡೋಸ್‌ ಲಸಿಕೆ ಹಾಕಿದರೆ, ಶೇ 70ರಷ್ಟು ಮಂದಿಗೆ ಎರಡನೇ ಡೋಸ್‌ ಕೊಡಲಾಗಿದೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಹಾಗೂ ಹರಪನಹಳ್ಳಿಯಲ್ಲಿ ಲಸಿಕೆ ಪ್ರಮಾಣ ಕಡಿಮೆ ಆಗಿದೆ. ಜನರ ಮನವೊಲಿಸಿ ಲಸಿಕೆ ಕೊಡಲಾಗುತ್ತಿದೆ. ರಜಾ ದಿನಗಳಲ್ಲೂ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಬೇಡವೇ ಬೇಡ ಎಂದು ಹೇಳುವವರು ಬಹಳ ಕಮ್ಮಿ ಜನ ಇದ್ದಾರೆ. ಆದರೆ, ಆರೋಗ್ಯ ಇಲಾಖೆಯವರು ಅವರ ಮನವೊಲಿಸಿ ಲಸಿಕೆ ಕೊಡಿಸುತ್ತಿದ್ದಾರೆ’ ಎಂದು ಹೇಳಿದರು.

₹10.97 ಕೋಟಿ ಬೆಳೆ ನಷ್ಟ
‘ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ₹10.97 ಕೋಟಿ ಬೆಳೆ ನಷ್ಟವಾಗಿದೆ. ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗಿದೆ. 993 ಹೆಕ್ಟೇರ್‌ ಭತ್ತ, 407 ಹೆಕ್ಟೇರ್‌ ರಾಗಿ, 358 ಹೆಕ್ಟೇರ್‌ ಮುಸುಕಿನ ಜೋಳ, 411 ಹೆಕ್ಟೇರ್‌ ಶೇಂಗಾ, 167 ಹೆಕ್ಟೇರ್‌ ಟೊಮೆಟೊ, 5,667 ಹೆಕ್ಟೇರ್‌ ಮೆಣಸಿನಕಾಯಿ, 727 ಹೆಕ್ಟೇರ್‌ ಈರುಳ್ಳಿ, 1,403 ಹೆಕ್ಟೇರ್‌ ಇತರೆ ತರಕಾರಿ ಬೆಳೆ ನಷ್ಟವಾಗಿದೆ. ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಗಮನ ಹರಿಸಬೇಕು’ ಎಂದು ಸಲಹೆ ಮಾಡಿದರು.

ಸ್ಥಳೀಯ ಸಂಸ್ಥೆ ಹೆಸರು;ವಾರ್ಡ್‌;ಮತಗಟ್ಟೆ;ಪುರುಷ ಮತದಾರರು;ಮಹಿಳಾ ಮತದಾರರು;ಇತರೆ;ಒಟ್ಟು
ಹೊಸಪೇಟೆ ನಗರಸಭೆ;35;167;82522;86546;44;169112
ಹಗರಿಬೊಮ್ಮನಹಳ್ಳಿ ಪುರಸಭೆ;23;31;14972;15909;04;30885
ಮರಿಯಮ್ಮನಹಳ್ಳಿ ಪ.ಪಂ.;18;18;7070;7744; 3;14817

ಚುನಾವಣೆ ವೇಳಾಪಟ್ಟಿ
ಡಿ. 8– 15 ನಾಮಪತ್ರ ಸಲ್ಲಿಕೆ
ಡಿ. 16–ನಾಮಪತ್ರ ಪರಿಶೀಲನೆ
ಡಿ. 17–ನಾಮಪತ್ರ ಹಿಂಪಡೆಯುವ ದಿನ
ಡಿ.27–ಮತದಾನ
ಡಿ. 30–ಮತ ಎಣಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT