ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನತಾದ ಕಾನ್‌ಸ್ಟೆಬಲ್ ಪರವಾಗಿ ಸುಳ್ಳು; ‌ಕೊಟ್ಟೂರು ಠಾಣೆ ಐವರು ಪೊಲೀಸರು ಅಮಾನತು

Last Updated 5 ಜೂನ್ 2022, 12:20 IST
ಅಕ್ಷರ ಗಾತ್ರ

ಕೊಟ್ಟೂರು (ವಿಜಯನಗರ ಜಿಲ್ಲೆ): ಅಮಾನತಾದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಸಹಕಾರಿಯಾಗುವಂತೆ ಇಲಾಖಾ ತನಿಖಾ ವಿಚಾರಣೆ ವೇಳೆ ಸುಳ್ಳು ಹೇಳಿದ್ದರಿಂದ ಐವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೊಟ್ಟೂರು ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ಗಳಾದ ಕುಮಾರ ಪತ್ರಿ, ಹ್ಯಾಟಿ ಬಸವರಾಜ್, ಕವಿತಾಬಾಯಿ, ತಿಪ್ಪಣ್ಣ ಹಾಗೂ ಬಸವರಾಜ ಅಮಾನತುಗೊಂಡವರು.

ಘಟನೆ ಹಿನ್ನೆಲೆ:

ಮೇ 14ರಂದು ನಡೆದ ಸಭೆಯಲ್ಲಿ ಪಿಎಸ್‌ಐ ವಿಜಯಕೃಷ್ಣ ಅವರು ಅಕ್ರಮ ಮರಳು ಸಾಗಾಣಿಕೆ ಸಂಬಂಧ ಹೆಚ್ಚಿನ ದೂರುಗಳು ಬಂದಿದ್ದು, ಆ ಪ್ರದೇಶಕ್ಕೆ ನಿಮ್ಮನ್ನು ನಿಯೋಜಿಸಲಾಗಿದ್ದು, ಗಸ್ತು ತಿರುಗಬೇಕೆಂದು ಕಾನ್‌ಸ್ಟೆಬಲ್‌ ಉತ್ತಂಗಿ ಕೊಟ್ರಗೌಡ ಅವರಿಗೆ ಸೂಚಿಸಿದ್ದರು. ಆದರೆ, ಕಾನ್‌ಸ್ಟೆಬಲ್‌ ಉತ್ತಂಗಿ ಕೊಟ್ರಗೌಡ, ‘ಆ ಬೀಟ್‌ ನನ್ನದಲ್ಲ, ನಾನು ಅಲ್ಲಿಗೆ ಹೋಗುವುದಿಲ್ಲ’ ಎಂದು ಪಿಎಸ್‌ಐ ವಿರುದ್ಧ ಏಕವಚನದಲ್ಲಿ ಮಾತನಾಡಿ, ಅವರಿಗೆ ಬೆದರಿಕೆಯೊಡ್ಡಿದ್ದರು.

ಠಾಣಾಧಿಕಾರಿ ಮಾಹಿತಿ ಮೇರೆಗೆ ಎಸ್ಪಿ ಡಾ. ಅರುಣ್‌ ಕೆ. ಅವರು ಮೇ 17ರಂದು ಉತ್ತಂಗಿ ಕೊಟ್ರಗೌಡ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದರು. ಬಳಿಕ ಇಲಾಖಾ ತನಿಖಾ ವಿಚಾರಣೆಗೆ ಆದೇಶಿಸಿದ್ದರು.

ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್‌ ವಿ.ಎಸ್‌. ಅವರು ಕೈಗೊಂಡಿದ್ದ ತನಿಖೆ ವೇಳೆ ಐವರು ಪೊಲೀಸರು, ಉತ್ತಂಗಿ ಕೊಟ್ರಗೌಡ ಅವರಿಗೆ ಸಹಕಾರಿಯಾಗುವಂತೆ ಸುಳ್ಳು ಹೇಳಿದ್ದರು. ಬಳಿಕ ತನಿಖಾಧಿಕಾರಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಸಭೆಯ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಉತ್ತಂಗಿ ಕೊಟ್ರಗೌಡ ದುರ್ವರ್ತನೆ ತೋರಿರುವುದು ಗೊತ್ತಾಗಿದೆ. ಸತ್ಯ ಗೊತ್ತಿದ್ದರೂ ಸುಳ್ಳು ಹೇಳಿ ದುರ್ವರ್ತನೆ, ಅಶಿಸ್ತು ತೋರಿದ್ದರಿಂದ ಐವರನ್ನು ಎಸ್ಪಿ ಮೇ 4ರಂದು ಅಮಾನತುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT