ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣ ಹಂಪಿಯ ಲಕ್ಷ್ಮಿನರಸಿಂಹ (ಉಗ್ರ ನರಸಿಂಹ), ಬಡವಿಲಿಂಗ ಹಾಗೂ ರಾಣಿ ಸ್ನಾನಗೃಹ ಸಮೀಪ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಗೋಡೆ ನಿರ್ಮಾಣ ಕಾರ್ಯ ಪುನಃ ಆರಂಭವಾಗಿದೆ. ಈ ಹಿಂದೆ ಕೆಲಸ ನಡೆದಾಗ, ಇತಿಹಾಸಕಾರರು ಮತ್ತು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.
‘ಸ್ಮಾರಕದ ಎದುರು ಮತ್ತೊಂದು ಸಾಧ್ಯತೆ ಇರುತ್ತದೆ. ಗೋಡೆ ನಿರ್ಮಿಸುವ ಇಚ್ಛೆಯಿದ್ದರೆ, ಸ್ಮಾರಕಗಳಿಂದ 100 ಮೀಟರ್ ದೂರದಲ್ಲಿ ನಿರ್ಮಿಸಲಿ. ಸ್ಮಾರಕಗಳ ಸಹಜ ಸೌಂದರ್ಯಕ್ಕೆ ಧಕ್ಕೆ ತರಬಾರದು’ಸ ಎಂದು ಇತಿಹಾಸಕಾರ ಹಾಗೂ ಕಮಲಾಪುರದ ಮಾನವೀಯ ಸಹಾಯ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕೆಂಗೇರಿ ಹೇಳಿದರು.
‘ಸ್ಮಾರಕಗಳಿಂದ 300 ಮೀಟರ್ ದೂರದಲ್ಲಿ ನಿರ್ಮಾಣ ಕಾರ್ಯ ಮಾಡಬಾರದು ಎಂಬ ನಿಯಮ ಜನರಿಗೆ ಇದೆ. ನಾವು ಸ್ಮಾರಕಗಳನ್ನು ರಕ್ಷಿಸುತ್ತೇವೆ. ಅದಕ್ಕೆ ಸ್ಮಾರಕಗಳ ಬಳಿ ರಕ್ಷಣೆಗಾಗಿ ಗೋಡೆ ನಿರ್ಮಿಸುತ್ತಿದ್ದೇವೆ. ಸ್ಮಾರಕಗಳ ಬಳಿ ಗೋಡೆ ನಿರ್ಮಿಸಬಾರದು ಎಂಬ ನಿಯಮವಿಲ್ಲ’ ಎಂದು ಕಾಮಗಾರಿಯ ಉಸ್ತುವಾರಿ ವಹಿಸಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ವೃತ್ತದ ಅಧೀಕ್ಷಕ ನಿಹಿಲ್‌ದಾಸ್ ’ಪ್ರಜಾವಾಣಿ‘ಗೆ ತಿಳಿಸಿದರು.
‘ಈ ಹಿಂದೆಯು ಸಹ ಇದೇ ವಿಚಾರದಲ್ಲಿ ಸುಳ್ಳು ಮಾಹಿತಿ ಬಿತ್ತರಿಸಲಾಗಿತ್ತು. ಕಾಂಪೌಂಡ್ ನಿರ್ಮಿಸಬಾರದು ಎಂಬ ನಿಯಮ ಇದ್ದರೆ ತೋರಿಸಿ ಎಂದು ಕೇಳಿದಾಗ ಯಾರೂ ಮುಂದೆ ಬರಲಿಲ್ಲ. ಸ್ಮಾರಕಗಳ ರಕ್ಷಣೆ ನಮ್ಮ ಹೊಣೆಯಾಗಿದ್ದು, ಕಾಮಗಾರಿ ಮುಂದುವರಿಯಲಿದೆ‘ ಎಂದರು.
Quote - ಸ್ಮಾರಕಗಳ ರಕ್ಷಣೆಗಾಗಿಯೇ ಗೋಡೆ ನಿರ್ಮಿಸಲಾಗುತ್ತಿದೆ. ಎಲ್ಲಾ ನಿಯಮಗಳನ್ನು ಪಾಲಿಸಿಯೇ ಈ ಕಾಮಗಾರಿ ನಡೆಯುತ್ತಿದೆ ಸಿದ್ದರಾಮೇಶ್ವರ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.