ಸೋಮವಾರ, ಸೆಪ್ಟೆಂಬರ್ 20, 2021
20 °C
ಮದಲಗಟ್ಟಿ ದೇವಸ್ಥಾನ ಜಲಾವೃತ : ಹೊಲ ಗದ್ದೆ ಮುಳುಗಡೆ

ಒಳ ಹರಿವು ಹೆಚ್ಚಳ : ಮೈದುಂಬಿ ಹರಿಯುತ್ತಿರುವ ತುಂಗಭದ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ : ಪಶ್ಚಿಮ ಘಟ್ಟ, ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ಭಾನುವಾರವೂ ಒಳಹರಿವು ಹೆಚ್ಚಾಗಿದೆ.

ತಾಲ್ಲೂಕಿನ ನದಿ ತೀರ ಗ್ರಾಮಗಳಾದ ಮಕರಬ್ಬಿ–ಬ್ಯಾಲಹುಣ್ಸಿ ರಸ್ತೆ ಸಂಪರ್ಕ ಎರಡು ದಿನದಿಂದ ಕಡಿತವಾಗಿದೆ.  ಹರವಿ, ಕುರುವತ್ತಿ, ಲಿಂಗನಾಯಕನಹಳ್ಳಿ, ಕೋಟಿಹಾಳ, ಅಂಗೂರು, ಮರಕಬ್ಬಿ, ಬ್ಯಾಲಹುಣ್ಸಿ, ನಂದಿಗಾವಿ, ಬನ್ನಿಮಟ್ಟಿ ಗ್ರಾಮಗಳ ನದಿ ತೀರದ ಹೊಲ, ಗದ್ದೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಭತ್ತ, ಮೆಕ್ಕೆಜೋಳ, ಕಬ್ಬ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಕುರುವತ್ತಿ ಗ್ರಾಮದ ಜನವಸತಿ ಸಮೀಪ ನೀರು ಬಂದಿದ್ದರಿಂದ ಅಪಾಯದ ಭೀತಿಯಲ್ಲಿದ್ದ ಮೂರು ಕುಟುಂಬಗಳನ್ನು ಅಧಿಕಾರಿಗಳು ರಂಗ ಮಂದಿರಕ್ಕೆ ಸ್ಥಳಾಂತರಿಸಿದ್ದಾರೆ. ತಹಶೀಲ್ದಾರ್ ಎ.ಎಚ್. ಮಹೇಂದ್ರ ನದಿ ತೀರದಲ್ಲೇ ಗಸ್ತು ತಿರುಗುತ್ತಾ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.

‘ನದಿಯ ಒಳ ಹರಿವು ಕ್ರಮೇಣ ಕಡಿಮೆಯಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಸದ್ಯದ ಮಟ್ಟಿಗೆ ಪ್ರವಾಹದಿಂದ ತೊಂದರೆ ಕಾಣಿಸಿಲ್ಲ. ನದಿ ತೀರದ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಅವಶ್ಯಕತೆ ಇದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ತಹಶೀಲ್ದಾರ್ ಮಹೇಂದ್ರ ತಿಳಿಸಿದರು.

‘ಪ್ರವಾಹ ನುಗ್ಗಿ ಹೊಲ ಗದ್ದೆಗಳು ಮುಳುಗಡೆಯಾಗಿವೆ. ನೀರು ಕಡಿಮೆಯಾದ ಬಳಿಕ ಕೃಷಿ ಇಲಾಖೆಯವರು ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ. ನಂತರ ಹಾನಿಯಾದ ಬೆಳೆಗಳಿಗೆ ಸರ್ಕಾರ ಪರಿಹಾರ ನೀಡಲಿದೆ. ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುವುದರಿಂದ ನದಿ ತೀರದ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು