ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನಹಡಗಲಿ: ಚರಂಡಿ ನೀರು ಇಂಗಿತು, ಅಂತರ್ಜಲ ಹೆಚ್ಚಿತು

ನೀರಿನ ಕೊರತೆ ನೀಗಿಸಿಕೊಂಡ ಹೂವಿನಹಡಗಲಿಯ ಪ್ರಯೋಗಶೀಲ ಕೃಷಿಕ
Last Updated 21 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ: ಚರಂಡಿ ತ್ಯಾಜ್ಯದ ನೀರನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲ ವೃದ್ಧಿಸುವಲ್ಲಿ ಯಶ ಕಂಡಿದ್ದಾರೆ ಮಲ್ಲಿಗೆ ನಾಡಿನ ಯುವ ಕೃಷಿಕ ಚಂದ್ರಶೇಖರ ಚಲವಾದಿ.

ಪಟ್ಟಣದಿಂದ ಕೂಗಳತೆ ದೂರದಲ್ಲೇ ಇವರ ಮೂರು ಎಕರೆ ಜಮೀನಿದೆ. ಕೊಳವೆ ಬಾವಿ ಪಕ್ಕದಲ್ಲಿ ವೈಜ್ಞಾನಿಕವಾಗಿ ಇಂಗು ಗುಂಡಿ ನಿರ್ಮಿಸಿಕೊಂಡಿದ್ದಾರೆ. ಮದಲಗಟ್ಟಿ ಮುಖ್ಯ ರಸ್ತೆಯ ಒಂದು ಬದಿಯಲ್ಲಿ ಹರಿಯುವ ಚರಂಡಿ ತ್ಯಾಜ್ಯದ ನೀರು ಇಂಗು ಗುಂಡಿಗೆ ಸೇರುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿಯೂ ನೀರು ಯಥೇಚ್ಛವಾಗಿ ಇಂಗು ಗುಂಡಿ ಸೇರುತ್ತದೆ. ಇದರ ಪರಿಣಾಮ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಹೆಚ್ಚಾಗಿದೆ.

ಚಂದ್ರಶೇಖರ ಅವರ ತಂದೆ ದೇವೇಂದ್ರಪ್ಪ 15 ವರ್ಷಗಳ ಹಿಂದೆ ಬೋರ್ ವೆಲ್ ಕೊರೆಯಿಸಿದಾಗ ಸಿಕ್ಕಿದ್ದು ಬರೀ ಒಂದೂವರೆ ಇಂಚು ನೀರು. ಮಳೆಗಾಲದಲ್ಲಿ ಹೇಗೋ ನಿಭಾಯಿಸಿ ಮೂರು ಎಕರೆಗೂ ನೀರುಣಿಸಿ ಬೆಳೆ ಬೆಳೆಯುತ್ತಿದ್ದರು. ಬೇಸಿಗೆಯ ದಿನಗಳಲ್ಲಿ ಒಂದು ಎಕರೆಗೂ ನೀರು ಸಾಲುತ್ತಿರಲಿಲ್ಲ. ಅಂತರ್ಜಲ ಕುಸಿತದಿಂದ ವರ್ಷದಿಂದ ವರ್ಷಕ್ಕೆ ಬೋರ್ ವೆಲ್ ನಲ್ಲಿ ನೀರಿನ ಇಳುವರಿ ಕಡಿಮೆಯಾಗಿದ್ದರಿಂದ ಈ ಕುಟುಂಬ ಚಿಂತೆಗೀಡಾಗಿತ್ತು. ತಂದೆಗೆ ವಯಸ್ಸಾದ್ದರಿಂದ ಕೃಷಿಯ ಜವಾಬ್ದಾರಿ ಹೊತ್ತ ಚಂದ್ರಶೇಖರ ಕಳೆದ ಒಂದೂವರೆ ವರ್ಷದ ಹಿಂದೆ ಇಂಗು ಗುಂಡಿ ನಿರ್ಮಿಸಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ರಾಯಚೂರು ಕೃಷಿ ವಿಶ್ವವಿದ್ಯಾಯದಲ್ಲಿ ನಡೆದ ಕೃಷಿ ಮೇಳದಲ್ಲಿ ಭಾಗವಹಿಸಿದ್ದ ಇವರು ಇಂಗು ಗುಂಡಿ ಪ್ರಾತ್ಯಕ್ಷಿಕೆ ನೋಡಿ ಅದೇ ಮಾದರಿಯಲ್ಲಿ ತಮ್ಮ ಜಮೀನಿನಲ್ಲಿ ಇಂಗು ಗುಂಡಿ ನಿರ್ಮಿಸಿದ್ದಾರೆ. ವೈಜ್ಞಾನಿಕ ವಿಧಾನದಲ್ಲಿ ನೀರನ್ನು ಭೂಮಿಯಲ್ಲಿ ಇಂಗಿಸಿ ಕೊಳವೆಬಾವಿಯಿಂದ ನಿರಂತರ ನೀರು ಪಡೆದು ಜಲ ಸ್ವಾವಲಂಬನೆ ಸಾಧಿಸಿದ್ದಾರೆ.

ಹೀಗಿದೆ ಇಂಗು ಗುಂಡಿ: ಕೊಳವೆಬಾವಿ ಸುತ್ತ 10x10 ಅಡಿ ವಿಸ್ತೀರ್ಣದಲ್ಲಿ 15 ಅಡಿ ಆಳ ಗುಂಡಿ ತೋಡಿಸಿದ್ದಾರೆ. ‘ವೈಜ್ಞಾನಿಕ ವಿಧಾನದಲ್ಲಿ ನೀರು ಬಸಿಯುವಿಕೆಗೆ ಪೂರಕವಾಗಿ ತಳದಲ್ಲಿ 4 ಅಡಿ ಬುನಾದಿ ಕಲ್ಲು, 2 ಅಡಿ ಬೋಲ್ಡರ್ಸ್ ಕಲ್ಲು, ಒಂದುವರೆ ಟ್ರಿಪ್ ಬೆಣಚು ಕಲ್ಲು ತುಂಬಿ ಮೇಲೆ ಮೆಸ್ ಹಾಕಲಾಗಿದೆ. ಚರಂಡಿ ತ್ಯಾಜ್ಯ ಮತ್ತು ಮಳೆಯ ನೀರು ಸೋಸಿಕೊಂಡು ತಳ ಸೇರಲು ಇದ್ದಿಲು, ಮರಳಿನ ಪದರು ಹಾಕಿದ್ದೇವೆ. ಇಂಗು ಗುಂಡಿ ನಿರ್ಮಿಸಿ ವರ್ಷವಾದ ಬಳಿಕ ನೀರಿನ ಇಳುವರಿ ಹೆಚ್ಚಾದ ಬಗ್ಗೆ ಅರಿವಿಗೆ ಬಂತು. ಬೇಸಿಗೆಯಲ್ಲೂ ಈಗ ನೀರಿನ ಕೊರತೆ ಆಗುವುದಿಲ್ಲ’ ಎಂದು ಚಂದ್ರಶೇಖರ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT