ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಮಣದ ಸಂಭ್ರಮ ಕಸಿದ ಕೊರೊನಾ

ನಿಷೇಧಾಜ್ಞೆಯಿಂದ ಹಂಪಿಯತ್ತ ಸುಳಿಯದ ಭಕ್ತರು; ರಸ್ತೆಯಲ್ಲಿ ಜನಸಂಚಾರ ವಿರಳ
Last Updated 15 ಜನವರಿ 2022, 15:56 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಯಲು ಜಿಲ್ಲಾಡಳಿತ ವೀಕೆಂಡ್‌ ಕರ್ಫ್ಯೂ ಘೋಷಿಸಿದ್ದರಿಂದ ಶನಿವಾರ ಮಕರ ಸಂಕ್ರಮಣದ ಸಂಭ್ರಮ ಕಂಡು ಬರಲಿಲ್ಲ.

ಸಂಕ್ರಾಂತಿಗೆ ಭಕ್ತರು ಹಂಪಿ, ಮೈಲಾರ ಸೇರಿದಂತೆ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ಹೋಗಿ ದೇವರ ದರ್ಶನ ಪಡೆಯುತ್ತಾರೆ. ತುಂಗಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಪ್ರತಿವರ್ಷ ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆ ಭಕ್ತರು ಬರುತ್ತಾರೆ. ಈ ಜನಸಂದಣಿ ತಡೆಯುವುದಕ್ಕಾಗಿಯೇ ಜಿಲ್ಲಾಡಳಿತ ಪ್ರಮುಖ ದೇವಸ್ಥಾನಗಳನ್ನು ಬಂದ್‌ ಮಾಡಿದೆ. ಪ್ರವಾಸಿ ತಾಣಗಳಿಗೆ ಜನರ ಭೇಟಿ ನಿರ್ಬಂಧಿಸಿದೆ.

ವೀಕೆಂಡ್‌ ಕರ್ಫ್ಯೂ ಕೂಡ ಇದ್ದದ್ದರಿಂದ ಜನ ಮನೆ ಬಿಟ್ಟು ಹೊರಬರಲಿಲ್ಲ. ಮನೆಯಲ್ಲೇ ಕುಟುಂಬ ಸದಸ್ಯರೊಂದಿಗೆ ಎಳ್ಳು, ಬೆಲ್ಲ ವಿನಿಮಯ ಮಾಡಿಕೊಂಡರು. ಸಾಮಾಜಿಕ ಜಾಲತಾಣ, ಕರೆ ಮಾಡಿ ಸಂಬಂಧಿಕರು, ಸ್ನೇಹಿತರಿಗೆ ಶುಭ ಕೋರಿದರು. ಜನರೆಲ್ಲ ಮನೆಯಲ್ಲಿ ಇದ್ದದ್ದರಿಂದ ಹಂಪಿ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಭಕ್ತರಿಂದ ತುಂಬಿ ತುಳುಕುತ್ತಿದ್ದ ಹಂಪಿ ಸ್ನಾನಘಟ್ಟದಲ್ಲಿ ಮೌನ ಆವರಿಸಿಕೊಂಡಿತ್ತು. ಹಂಪಿ ಬಜಾರ್‌ನಲ್ಲಿ ಅಂಗಡಿಗಳು ಬಾಗಿಲು ಮುಚ್ಚಿದ್ದವು. ರಥಬೀದಿ ನಿರ್ಜನವಾಗಿತ್ತು. ಹಂಪಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್‌ ಹಾಕಿ, ಪೊಲೀಸರನ್ನು ನಿಯೋಜಿಸಲಾಗಿತ್ತು. ನಗರ ಸೇರಿದಂತೆ ಜಿಲ್ಲೆಯ ಇತರೆ ಕಡೆಗಳಲ್ಲೂ ಇದೇ ಪರಿಸ್ಥಿತಿ ಇತ್ತು.

ಶುಕ್ರವಾರ ರಾತ್ರಿ ಹತ್ತು ಗಂಟೆಯಿಂದಲೇ ಪೊಲೀಸರು ನಗರದಲ್ಲಿ ಗಸ್ತು ತಿರುಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಿದರು. ಶನಿವಾರ ಬೆಳಿಗ್ಗೆ ಎಂದಿನಂತೆ ದಿನಪತ್ರಿಕೆ, ಹಾಲು ಪೂರೈಕೆಯಾಯಿತು. ಆಸ್ಪತ್ರೆ, ಮೆಡಿಕಲ್‌ ತೆರೆದಿದ್ದವು. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿತ್ತು. ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಪೊಲೀಸರು ನಿಂತು ತಪಾಸಣೆ ನಡೆಸಿದರು. ಮಾಸ್ಕ್‌ ಧರಿಸದೇ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು. ಸಕಾರಣ ಕೊಡದೇ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದರು.

ಹಿಂದಿನ ವಾರಕ್ಕಿಂತ ಈ ಸಲ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಹೆಚ್ಚಿನ ಜನ ಅನಗತ್ಯವಾಗಿ ಹೊರಗೆ ಸಂಚರಿಸಲಿಲ್ಲ. ಬಹುತೇಕ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿತ್ತು. ಹೋದ ವಾರ ಜನ ಬೇಕಾಬಿಟ್ಟಿ ಹೊರಗೆ ಓಡಾಡಿದ್ದರು. ಪೊಲೀಸರು ದಂಡ ವಿಧಿಸಿ, ವಾಹನ ವಶಪಡಿಸಿಕೊಳ್ಳಲು ಆರಂಭಿಸಿದ ನಂತರ ಜನ ಹೊರಗೆ ಓಡಾಡುವುದು ತಗ್ಗಿದೆ. ಭಾನುವಾರ ರಜಾ ದಿನವಾಗಿರುವುದರಿಂದ ಜನಸಂಚಾರ ಇನ್ನಷ್ಟು ತಗ್ಗಬಹುದು.

827 ಪ್ರಕರಣ; 160 ವಾಹನ ವಶ

ವೀಕೆಂಡ್‌ ಕರ್ಫ್ಯೂ ಉಲ್ಲಂಘಿಸಿ ಮಾಸ್ಕ್‌ ಧರಿಸದೇ ಓಡಾಡುತ್ತಿದ್ದವರ ವಿರುದ್ಧ ಜಿಲ್ಲೆಯ ಪೊಲೀಸರು ಶನಿವಾರ ₹82,700 ದಂಡ ಹಾಕಿದ್ದಾರೆ. ಮಾಸ್ಕ್‌ ಹಾಕದೇ ತಿರುಗಾಡುತ್ತಿದ್ದ 827 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

‘ಸಕಾರಣವಿಲ್ಲದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ 160 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾನುವಾರ ಕೂಡ ಕರ್ಫ್ಯೂ ಇರಲಿದ್ದು, ತುರ್ತು ಕಾರಣ ಬಿಟ್ಟು ಅನಗತ್ಯ ಹೊರಗೆ ಓಡಾಡಿದರೆ ಕ್ರಮ ಜರುಗಿಸಲಾಗುವುದು‘ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT