ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಕಳೆದರೂ ಮುಗಿಯದ ಕಾಮಗಾರಿ: ಮೋಕಾ ರಸ್ತೆಗೆ ಮೋಕ್ಷವೇ ಇಲ್ಲವೇ?

ವರ್ಷ ಕಳೆದರೂ ಮುಗಿಯದ ಕಾಮಗಾರಿ; ವಾಹನ ಚಾಲಕರಿಗೆ ತಪ್ಪದ ಕಿರಿಕಿರಿ...
Last Updated 27 ಮಾರ್ಚ್ 2023, 11:05 IST
ಅಕ್ಷರ ಗಾತ್ರ

ಬಳ್ಳಾರಿ/ವಿಜಯನಗರ: ನಗರದ ಮೋಕಾ ರಸ್ತೆಗೆ ವರ್ಷ ಕಳೆಯುತ್ತಾ ಬಂದರೂ ಮೋಕ್ಷವೇ ಸಿಕ್ಕಿಲ್ಲ. ರಸ್ತೆ ತೋಡುವುದು, ಮುಚ್ಚುವುದು... ಈ ಕೆಲಸ ನಾಲ್ಕೈದು ತಿಂಗಳಿಂದ ನಡೆಯುತ್ತಲೇ ಇದೆ. ಕನಕ ದುರ್ಗಮ್ಮ ದೇವಸ್ಥಾನದಿಂದ ಗಾಂಧಿನಗರ ವಾಟರ್‌ ಬೂಸ್ಟರ್‌ ವರೆಗಿನ ರಸ್ತೆಯನ್ನು ಅದೆಷ್ಟು ಸಲ ಅಗೆದಿದ್ದಾರೋ ಆ ದೇವಿಗೇ ಗೊತ್ತು...

ಬಹುಶಃ ಪ್ರತಿನಿತ್ಯ ಈ ರಸ್ತೆಯಲ್ಲಿ ಓಡಾಡುವವರಿಗೆ ರೇಜಿಗೆ ಬಂದಿರಬಹುದು. ಭಾರಿ ವಾಹನಗಳು ಮುಂದೆ ಹೋದರೆ ಬಾನೆತ್ತರಕ್ಕೆ ಏಳುವ ದೂಳು ಹಿಂದಿದ್ದವರ ಮೈಕೈಗೆ ತುಂಬಿಕೊಳ್ಳುತ್ತದೆ. ಉಸಿರಾಡುವ ಗಾಳಿಯಿಂದ ಅದೆಷ್ಟು ದೂಳಿನ ಕಣಗಳು ಶ್ವಾಸಕೋಶಕ್ಕೆ ಹೊಕ್ಕಿದೆಯೋ... ಪದೇ ಪದೇ ಆ ರಸ್ತೆಯನ್ನು ಬಳಸುವ ಜನ ಎಷ್ಟು ಹಿಡಿಶಾಪ ಹಾಕಿದ್ದಾರೋ... ಪತ್ರಿಕಾ ಮಾಧ್ಯಮಗಳು ಅದೆಷ್ಟು ಸಲ ಈ ರಸ್ತೆ ಬಗ್ಗೆ ಬರೆದಿದ್ದಾವೊ?

ಕರ್ನಾಟಕ ಹಾಗೂ ಆಂಧ್ರದ ನಡುವೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಒಂದರ ಹಿಂದೆ ಮತ್ತೊಂದರಂತೆ ನೂರಾರು ಟ್ರಕ್‌ಗಳು ಸಂಚರಿಸುತ್ತವೆ. ಲೆಕ್ಕವಿಲ್ಲದಷ್ಟು ಅಂತರರಾಜ್ಯ, ಸ್ಥಳೀಯ ಬಸ್‌ಗಳು, ಕಾರುಗಳು, ದ್ವಿಚಕ್ರ ವಾಹನಗಳು ಓಡಾಡುತ್ತವೆ. ರಸ್ತೆ ಅಗೆದಾಗ ಸರಕು ತುಂಬಿದ ಅದೆಷ್ಟೊ ಲಾರಿಗಳ ಚಕ್ರಗಳು ಗುಂಡಿಯಲ್ಲಿ ಸಿಲುಕಿವೆ. ಜನ ಇವೆಲ್ಲವನ್ನು ಹೇಗೆ ಸಹಿಸಿಕೊಂಡಿದ್ದಾರೊ ಎಂದು ಅಚ್ಚರಿಯಾಗುತ್ತದೆ.

ಮಹಾನಗರ ಪಾಲಿಕೆ ಕಮಿಷನರ್‌ ರಸ್ತೆ ಕುಸಿದಾಗಲೆಲ್ಲಾ ಬಂದು ಹೋಗಿದ್ದಾರೆ. ಗುತ್ತಿಗೆದಾರರನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ಜಿ. ಸೋಮಶೇಖರ ರೆಡ್ಡಿ ಅವರೂ ಭೇಟಿ ಕೊಡುತ್ತಿರುತ್ತಾರೆ. ಏನೇ ಆದರೂ, ಯಾರೇ ಬಂದರೂ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಲೋಪ ಎಲ್ಲಿದೆ? ರಸ್ತೆ ಲೋಪವೋ ಅಥವಾ ಗುತ್ತಿಗೆಗಾರರ ಲೋಪವೋಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಮೂರ್ನಾಲ್ಕು ದಿನಗಳ ಬಳಿಕ ಕೆಲಸ ಸ್ಥಗಿತಗೊಳ್ಳುತ್ತದೆ.

ಈ ರಸ್ತೆಯಲ್ಲಿ ತಿರುಗಾಡಲು ಕಿರಿಕಿರಿ ಆಗುತ್ತಿರುವ ಕೆಲವರು ಪರ್ಯಾಯ ರಸ್ತೆಗಳನ್ನು ಆರಿಸಿಕೊಂಡಿದ್ದಾರೆ. ಸಿದ್ಧಾರ್ಥ ಕಾಲೊನಿ ಮೂಲಕ ಕಪ್ಪಗಲ್‌ ರಸ್ತೆ ಸಂಪರ್ಕಿಸಿ, ಕನಕ ದುರ್ಗಮ್ಮ ಗುಡಿ ಬಳಿಯಿಂದ ಮುಂದಿನ ರಸ್ತೆ ಹಿಡಿಯುತ್ತಾರೆ. ಇನ್ನೂ ಕೆಲವರು ಕೆಇಬಿ ಸರ್ಕಲ್‌, ರಸ್ತೆ ಮೇಲ್ಸೆತುವೆ ಮುಖಾಂತರ ಸಂಗಂ ಸರ್ಕಲ್‌ ಮೂಲಕ ಮುಂದುವರಿಯುತ್ತಾರೆ.

ಗಾಂಧಿನಗರ ರಸ್ತೆಯ ಎರಡೂ ಬದಿಗಳಲ್ಲಿ ನೂರಾರು ಅಂಗಡಿಗಳಿವೆ. ಅತೀ ಹೆಚ್ಚು ಅಂದರೆ, ಹತ್ತಾರು ಸಂಖ್ಯೆಯಲ್ಲಿ ನರ್ಸಿಂಗ್‌ ಹೊಂ ಹಾಗೂ ಆಸ್ಪತ್ರೆಗಳಿವೆ. ಅಂಗಡಿಗಳು, ನರ್ಸಿಂಗ್‌ ಹೊಂಗಳಿಗೆ ಪ್ರತಿದಿನ ದೂಳಿನ ಅಭ್ಯಂಜನವಾಗುತ್ತದೆ.

ಕುಡಿಯುವ ನೀರು ಪೈಪ್‌ ಅಳವಡಿಸಿ, ಮೋಕಾ ರಸ್ತೆ ಕಾಮಗಾರಿ ನಡೆಸಲು ₹1.50ಕೋಟಿ ಗುತ್ತಿಗೆ ನೀಡಲಾಗಿದೆ. ಪೈಪ್‌ಗಳನ್ನು ಅಳವಡಿಸಿ 6 ಕೆ.ಜಿ ನೀರಿನ ಪ್ರೆಷರ್ ಬಿಟ್ಟು ಪರೀಕ್ಷಿಸಲಾಗಿದೆ. ಪೈಪ್‌ಗಳನ್ನು ಯಶಸ್ವಿಯಾಗಿ ಅಳವಡಿಸಲಾಗಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವನ್ನು ಪಾಲಿಕೆ ಕಮಿಷನರ್‌ ಎಸ್.ಎನ್‌. ರುದ್ರೇಶ್‌ ಮೂರ್ನಾಲ್ಕು ತಿಂಗಳ ಹಿಂದೆಯೇ ವ್ಯಕ್ತಪಡಿಸಿದ್ದರು. ಇದುವರೆಗೂ ಕೊಟ್ಟ ಮಾತು ಕೈಗೂಡಿಲ್ಲ.

ಮೋಕಾ ರಸ್ತೆ ಅವ್ಯವಸ್ಥೆ ಅಂತ್ಯ ಕಾಣದ ಸಮಸ್ಯೆ. ಹಾಗೆಂದ ಮಾತ್ರಕ್ಕೆ ಉಳಿದ ರಸ್ತೆಗಳು ಚೆನ್ನಾಗಿವೆ ಎಂಬ ಭಾವನೆ ಸಲ್ಲ. ಎಲ್ಲ ಕಡೆ ಬಾಯ್ತೆರದ ಗುಂಡಿಗಳು; ಅವೈಜ್ಞಾನಿಕವಾಗಿ ಹಾಕಿರುವ ಹಂಪ್ಸ್‌ಗಳು; ಕತ್ತಲೆಯ ಸಮಯದಲ್ಲಿ ಅವು ಕಾಣುವುದೇ ಇಲ್ಲ! ದಾರಿ ಹೋಕರಿಗೆ ಹಂಪ್ಸ್‌ಗಳು ಕಾಣುವಂತೆ ಪ್ರತಿಫಲನ (ರಿಫ್ಲೆಕ್ಟರ್) ಹಾಕಬೇಕು. ಅದು ಸಾಧ್ಯವಾಗದಿದ್ದರೆ ಬಿಳಿ ಬಣ್ಣವಾದರೂ ಬಳಿಬೇಕು. ಅದ್ಯಾವುದೂ ಕಂಡು ಬರುವುದಿಲ್ಲ.

ನಗರದ ಅಭಿವೃದ್ಧಿಗೆ ಹಣದ ಕೊರತೆಯೇನಿಲ್ಲ. ಬೇರೆ ಬೇರೆ ಮೂಲಗಳಿಂದ ಬೇಕಾದಷ್ಟು ಹಣ ಬರುತ್ತದೆ. ಕೆಎಂಇಆರ್‌ಸಿ, ಡಿಎಂಎಫ್‌, ಕೆಕೆಆರ್‌ಡಿಬಿ, ಎಂಎಲ್‌ಎ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹೀಗೆ ಬೇಕಾದಷ್ಟು ಹಣದ ಮೂಲಗಳಿವೆ. ನಿಜಕ್ಕೂ ಹಣದ ಕೊರತೆ ಇಲ್ಲ; ಕೊರತೆ ಇರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ.

ಮೋಕಾ ರಸ್ತೆಯ ಕಾಮಗಾರಿ ನಡೆದೇ ಇಲ್ಲ ಎಂದು ಹೇಳಲಾಗದು. ಬಹಳಷ್ಟು ಕೆಲಸ ಆಗಿದೆ. ಆಗಬೇಕಾದ್ದು ಇನ್ನೂ ಇದೆ. ಸಾರ್ವಜನಿಕರ ತಕರಾರಿರುವುದು ಮಂದಗತಿ ಕಾಮಗಾರಿ ಬಗ್ಗೆ. ಇಂದಿರಾ ಸರ್ಕಲ್‌ನಿಂದ (ಜಿಲ್ಲಾ ಆಸ್ಪತ್ರೆ ತುದಿ) ಆಯುರ್ವೇದಿಕ್‌ ಕಾಲೇಜ್‌ವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಆರಂಭವಾಗಿದ್ದು ಮೋಕಾ ರಸ್ತೆ ಕೆಲಸ ಶುರುವಾದ ಬಳಿಕ. ಆ ರಸ್ತೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಲವರು ಅದೇ ನಿಧಾನಗತಿಯಲ್ಲಿ ಸಾಗಿದೆ ಎಂದು ಟೀಕಿಸುತ್ತಿದ್ದಾರೆ. ಇನ್ನೂ ಮೋಕಾ ರಸ್ತೆ ವಿಳಂಬದ ಬಗ್ಗೆ ಏನೆನ್ನಬಹುದು.

ಹೊಸಪೇಟೆ– ಶಿವಮೊಗ್ಗ ಹೆದ್ದಾರಿ ವಿಸ್ತರಣೆ ಯಾವಾಗ?:

ಹೊಸಪೇಟೆ (ವಿಜಯನಗರ): ಹೊಸಪೇಟೆ–ಶಿವಮೊಗ್ಗ ರಾಜ್ಯ ಹೆದ್ದಾರಿ–25 ವಿಸ್ತರಣೆ ಯಾವಾಗ?

ಈ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿರುವುದು ಹಲವು ವರ್ಷಗಳಿಂದ. ಆದರೆ, ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಇದರತ್ತ ಗಮನಹರಿಸಿಲ್ಲ. ಇದರ ಪರಿಣಾಮ ಅಪಘಾತಗಳು ಸರ್ವೇ ಸಾಮಾನ್ಯ ಎಂಬಂತಾಗಿದೆ. ಇಷ್ಟೇ ಅಲ್ಲ, ರಸ್ತೆ ಕಿರಿದಾಗಿರುವುದರಿಂದ ದೂರದ ಊರುಗಳಿಗೆ ಕ್ರಮಿಸಲು ಸಾಕಷ್ಟು ಸಮಯ ವ್ಯಯವಾಗುತ್ತಿದೆ. ಅಲ್ಲಲ್ಲಿ ಗುಂಡಿಗಳು ಬಿದ್ದಿರುವುದರಿಂದ ಪ್ರಯಾಣ ಕಷ್ಟಕರವಾಗಿದೆ.

ಹೊಸಪೇಟೆಯಿಂದ ಮರಿಯಮ್ಮನಹಳ್ಳಿ ಕ್ರಾಸ್‌ ವರೆಗೆ ‘ಹಂಪಿ ಎಕ್ಸ್‌ಪ್ರೆಸ್‌’ ಚತುಷ್ಪಥ ಇರುವುದರಿಂದ 12ರಿಂದ 15 ನಿಮಿಷಗಳಲ್ಲಿ ಅಲ್ಲಿಯ ವರೆಗೆ ತಲುಪಬಹುದು. ಆದರೆ, ಮರಿಯಮ್ಮನಹಳ್ಳಿಯಿಂದ ಹಗರಿಬೊಮ್ಮನಹಳ್ಳಿ–ಇಟ್ಟಿಗಿ–ಹರಪನಹಳ್ಳಿ, ಹರಿಹರದ ವರೆಗೆ ಪ್ರಯಾಣಿಸಬೇಕಾದರೆ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ.

ಹೊಸಪೇಟೆ–ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಹಗಲು–ರಾತ್ರಿ ವಾಹನಗಳು ಸದಾ ಸಂಚರಿಸುತ್ತವೆ. ಒಂದು ಬದಿಯಲ್ಲಿ ಮಂಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆಯಂತಹ ಪ್ರಮುಖ ಜಿಲ್ಲೆಗಳಿದ್ದರೆ ಇನ್ನೊಂದು ಬದಿಗೆ ರಾಯಚೂರು, ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಿಗೆ ಈ ಹೆದ್ದಾರಿ ಸಂಪರ್ಕ ಬೆಸೆಯುತ್ತದೆ. ವಾಣಿಜ್ಯ ದೃಷ್ಟಿಯಿಂದಲೂ ಇದು ಮಹತ್ವದ ಹೆದ್ದಾರಿ. ಆದರೆ, ಲೋಕೋಪಯೋಗಿ ಇಲಾಖೆ ಇದನ್ನು ಮೇಲ್ದರ್ಜೆಗೇರಿಸಲು ಮುಂದಾಗುತ್ತಿಲ್ಲ.

ಈ ಹೆದ್ದಾರಿಯ ಗೊಡವೆಯೇ ಬೇಡವೆಂದು ಹಲವು ವಾಹನ ಮಾಲೀಕರು ಈಗ ‘ಹಂಪಿ ಎಕ್ಸ್‌ಪ್ರೆಸ್‌’ ಮೂಲಕ ಪ್ರಯಾಣಿಸುತ್ತಿದ್ದಾರೆ. ಕ್ರಮಿಸಲು ಸ್ವಲ್ಪ ದೂರವಾದರೂ ಚತುಷ್ಪಥ ರಸ್ತೆಯಿರುವುದರಿಂದ ಹೆಚ್ಚಿನವರು ಈ ಮಾರ್ಗ ಬಳಸುತ್ತಿದ್ದಾರೆ.

ಹೊಸಪೇಟೆಯಿಂದ ಹರಪನಹಳ್ಳಿ 80 ಕಿ.ಮೀ ದೂರದಲ್ಲಿದೆ. ಆದರೆ, ಈ ದೂರ ಕ್ರಮಿಸಲು ಎರಡು ಗಂಟೆಗೂ ಅಧಿಕ ಸಮಯ ಬೇಕಾಗುತ್ತಿದೆ. ಒಂದುವೇಳೆ ಈ ಮಾರ್ಗ ಚತುಷ್ಪಥವಾಗಿ ಅಭಿವೃದ್ಧಿ ಪಡಿಸಿದರೆ ಗಂಟೆಯೊಳಗೆ ತಲುಪಬಹುದು. ಆದರೆ, ಪಿಡಬ್ಲ್ಯೂಡಿ ಇಲಾಖೆ ಇದರ ಬಗ್ಗೆ ಗಂಭೀರವಾಗಿಲ್ಲ ಎನ್ನುತ್ತಾರೆ ಈ ಮಾರ್ಗದಲ್ಲಿ ನಿತ್ಯ ಓಡಾಡುವರು. ಅಲ್ಲದೇ ಈ ಮಾರ್ಗ ಹಿಂದುಳಿದ ತಾಲ್ಲೂಕುಗಳ ಮೂಲಕ ಹಾದು ಹೋಗುತ್ತದೆ. ರಸ್ತೆ ಮೇಲ್ದರ್ಜೆಗೇರಿದರೆ ಈ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೂ ಪೂರಕವಾಗಲಿದೆ ಎನ್ನುತ್ತಾರೆ ಸ್ಥಳೀಯರು.

ಈ ಕುರಿತು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದರೆ ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT