ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿ–ಸಿಂಡಿಕೇಟ್‌ ಸದಸ್ಯರ ಮಾತಿನ ಚಕಮಕಿ

ದಿನವಿಡೀ ಹೈಡ್ರಾಮಾ; ಭ್ರಷ್ಟಾಚಾರದ ಆರೋಪಗಳ ಕುರಿತು ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ನಿರ್ಧಾರ
Last Updated 7 ಡಿಸೆಂಬರ್ 2021, 11:04 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಸಿಂಡಿಕೇಟ್‌ ಸಭೆಯಲ್ಲಿ ‘ಹೈ ಡ್ರಾಮಾ’ ನಡೆಯಿತು. ಒಂದು ಹಂತದಲ್ಲಿ ಸಭೆಯು ಕುಲಪತಿ ಹಾಗೂ ಸದಸ್ಯರ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.

ಸದಸ್ಯರಾದ ಸಮೀವುಲ್ಲಾ ಖಾನ್‌, ಜೈಭೀಮ್‌ ಕಟ್ಟಿ ಸಭೆಯಲ್ಲಿ ಮಾತನಾಡಿ, ‘ಸಹ ಪ್ರಾಧ್ಯಾಪಕ ಮಲ್ಲಿಕಾರ್ಜುನಗೌಡ ವಿರುದ್ಧ ಠಾಣೆಗೆ ದೂರು ಕೊಟ್ಟು, ಅವರ ಕಚೇರಿಗೆ ಪೊಲೀಸರನ್ನು ಕರೆಸಿರುವುದು ಸರಿಯಲ್ಲ. ನಿತ್ಯವೂ ಪತ್ರಿಕೆಗಳಲ್ಲಿ ವಿಶ್ವವಿದ್ಯಾಲಯದ ವಿಚಾರಗಳು ಬರುತ್ತಿವೆ. ಇದು ಶೋಭೆ ತರುವ ವಿಚಾರವಲ್ಲ’ ಎಂದು ಏರಿದ ಧ್ವನಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ಕುಲಪತಿ ಪ್ರೊ. ಸ.ಚಿ. ರಮೇಶ ಪ್ರತಿಕ್ರಿಯಿಸಿ, ‘ಮಲ್ಲಿಕಾರ್ಜುನಗೌಡ ವರ್ಗಾವಣೆ ಆದೇಶ ರದ್ದುಪಡಿಸುವುದಿಲ್ಲ. ಠಾಣೆಗೆ ಕೊಟ್ಟಿರುವ ದೂರು ವಾಪಸ್‌ ಪಡೆಯುವುದಿಲ್ಲ’ ಎಂದರು. ಇದಕ್ಕೆ ಇಬ್ಬರೂ ಸದಸ್ಯರು ಸಿಟ್ಟಿಗೆದ್ದರು. ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಇತರೆ ಸದಸ್ಯರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ‘ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ, ಸದಸ್ಯ ಜೈಭೀಮ್‌ ಕಟ್ಟಿ, ಪ್ರಾಧ್ಯಾಪಕ ಕೆ.ಎಂ. ಮೇತ್ರಿ ಅವರನ್ನು ಒಳಗೊಂಡ ಸಮಿತಿ ರಚಿಸಿ, ತನಿಖೆ ನಡೆಸಲು ಸಭೆ ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.

ವಿ.ವಿ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಕುರಿತು ಗಂಭೀರ ಚರ್ಚೆ ನಡೆಯಿತು. ಹಾಲಿ ಕುಲಪತಿ ಅವಧಿಯಲ್ಲಾದ ಖರ್ಚು ವೆಚ್ಚದ ಬಗ್ಗೆ ತನಿಖೆ ಆಗಬೇಕೆಂದು ಸದಸ್ಯರು ಒತ್ತಾಯಿಸಿದರು. ಆಗ ಕುಲಪತಿ, ‘ನನ್ನ ಹಾಗೂ ಹಿಂದಿನ ಕುಲಪತಿ ಅವಧಿಯ ತನಿಖೆ ನಡೆಸಬೇಕು’ ಎಂದರು. ಅದಕ್ಕೆ ಸಭೆ ಒಪ್ಪಿಗೆ ನೀಡಿ, ‘ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಿ, 3 ತಿಂಗಳೊಳಗೆ ವರದಿ ಪಡೆಯಬೇಕು’ ಎಂಬ ನಿರ್ಧಾರಕ್ಕೆ ಬಂತು.

ಪ್ರೊಬೇಷನರಿ ಅವಧಿ ಘೋಷಣೆ ವಿಷಯ ನ್ಯಾಯಾಲಯದಲ್ಲಿದ್ದು, ಅದರ ತೀರ್ಪು ಪಾಲಿಸಲು ನಿರ್ಧರಿಸಲಾಯಿತು. ನಿವೃತ್ತರ ಪಿಂಚಣಿ ನಿಗದಿ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಅಕಾಲಿಕ ನಿಧನ ಹೊಂದಿದವರ ಕುಟುಂಬ ಸದಸ್ಯರಿಗೆ ತಾತ್ಕಾಲಿಕ ನೌಕರಿ ಒದಗಿಸಿ, ನಂತರ ಕಾಯಂ ಹುದ್ದೆಯಾಗಿ ಪರಿವರ್ತಿಸಲಾಗುವುದು. ಸದ್ಯ ಲಭ್ಯವಿರುವ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಹಂಚಿಕೆ ಮಾಡಲಾಗುವುದು. ದೂರಶಿಕ್ಷಣ ನಿರ್ದೇಶನಾಲಯದ ಹಣವನ್ನು ಪಡೆದು, ತಾತ್ಕಾಲಿಕ ಸಿಬ್ಬಂದಿಗೆ ಎರಡು ತಿಂಗಳ ವೇತನ ನೀಡಲು ನಿರ್ಧರಿಸಲಾಯಿತು. ಬೆಳಿಗ್ಗೆ 11ಕ್ಕೆ ಆರಂಭಗೊಂಡ ಸಭೆ ರಾತ್ರಿ 7.30ರ ವರೆಗೆ ನಡೆಯಿತು.

ಪೊಲೀಸ್‌ ಸರ್ಪಗಾವಲು:ಸಿಂಡಿಕೇಟ್‌ ಸಭೆಯ ಹಿನ್ನೆಲೆಯಲ್ಲಿ ಸೋಮವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ವಿ.ವಿ. ಸಿಬ್ಬಂದಿ, ವಿದ್ಯಾರ್ಥಿಗಳನ್ನು ಹೊರತುಪಡಿಸಿದರೆ ಬೇರೆ ಯಾರನ್ನೂ ಒಳಬಿಡಲಿಲ್ಲ. ದಿನವಿಡೀ ಪೊಲೀಸ್‌ ಜೀಪುಗಳು ಕ್ಯಾಂಪಸ್‌ನಲ್ಲಿ ಗಸ್ತು ತಿರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT