ಮಂಗಳವಾರ, ಮೇ 18, 2021
30 °C

ವಿಜಯನಗರ: ‘ಅಕ್ಷರ ಬಲ್ಲವನು ಜಗತ್ತು ಗೆಲ್ಲಬಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ‘ಅಕ್ಷರ ಜ್ಞಾನ ಬಲ್ಲವನು ಜಗತ್ತು ಗೆಲ್ಲಬಲ್ಲ. ಅದು ಸಾಧ್ಯವಾಗುವುದು ಪುಸ್ತಕ ಓದುವುದರಿಂದ, ಪ್ರೀತಿಸುವುದರಿಂದ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು.

ಪುಸ್ತಕ ದಿನಾಚರಣೆ ಪ್ರಯುಕ್ತ ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆ ಆಗುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ಸಾಧನೆಯ ಪ್ರಮುಖ ಸಾಧನ ಓದು. ಅಕ್ಷರ ಇಲ್ಲದವನು ಏನನ್ನೂ ಸಾಧಿಸಲಾರ. ಅಕ್ಷರ ಜ್ಞಾನ ಹೊಂದಿದ ವ್ಯಕ್ತಿಯ ಚಿಂತನೆಗಳು, ಆಚಾರ-ವಿಚಾರಗಳು ಉತ್ತಮವಾಗಿರುತ್ತವೆ. ಜ್ಞಾನದಿಂದ ಮೌಢ್ಯ ತೊರೆಯಬಹುದು. ವಿದ್ಯಾರ್ಥಿಗಳು ಹೆಚ್ಚೆಚ್ಚು ಗ್ರಂಥಾಲಯಗಳಿಗೆ ಭೇಟಿ ನೀಡಿ ಓದುವ ಅಭಿರುಚಿ‌ ಬೆಳೆಸಿಕೊಳ್ಳಬೇಕು’ ಎಂದರು.

ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿ, ‘ಪುಸ್ತಕಗಳನ್ನು ಸರಿಯಾದ ಕ್ರಮದಲ್ಲಿ ಬಳಸಬೇಕು. ಇದರಿಂದ ಓದುವ ರೂಢಿ ಹೆಚ್ಚು ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಅಕ್ಷರ ಗ್ರಂಥಾಲಯದ ಮೂಲಕ, ನಾಡಿನ ಜ್ಞಾನವನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸ ನಡೆಯುತ್ತಿದೆ’ ಎಂದು ತಿಳಿಸಿದರು.

ಮುಖ್ಯ ಗ್ರಂಥಪಾಲಕ ಸಿ.ಆರ್ ಗೋವಿಂದರಾಜ್ ಮಾತನಾಡಿ, ‘ಯುನೆಸ್ಕೊ, 25ನೇ ವಿಶ್ವ ಪುಸ್ತಕ ದಿನಾಚರಣೆಯನ್ನು ಪ್ರಪಂಚದಾದ್ಯಂತ ಆಚರಣೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪುಸ್ತಕ ಪ್ರೇಮಿಯಾಗಬೇಕು. ಆಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದು ಹೇಳಿದರು.

ಸಹಾಯಕ ಗ್ರಂಥಪಾಲಕರಾದ ಎಸ್‌. ಸುಹಾಸ್, ಯು. ಮಲ್ಲಿಕಾರ್ಜುನ, ಎಂ.ಸಿ.ಗುಡಿಮನಿ, ಹರ್ಷ, ಮೇಘನಾ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.