ಮಂಗಳವಾರ, ಆಗಸ್ಟ್ 20, 2019
27 °C
13 ದಿನಗಳಲ್ಲಿ 80 ಟಿ.ಎಂ.ಸಿ ಅಡಿ ನೀರು

ಆಲಮಟ್ಟಿ ಜಲಾಶಯಕ್ಕೆ ಒಂದೇ ದಿನ 9.6 ಟಿ.ಎಂ.ಸಿ ಅಡಿ ನೀರು

Published:
Updated:
Prajavani

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಒಂದೇ ದಿನ 9.6 ಟಿಎಂಸಿ ಅಡಿ ನೀರು ಹರಿದು ಬಂದಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಆರಂಭಗೊಂಡಾಗಿನಿಂದ (ಜುಲೈ 3 ರಿಂದ) ಸೋಮವಾರದವರೆಗೆ 80 ಟಿಎಂಸಿ ಅಡಿಗೂ ಹೆಚ್ಚಿನ ನೀರು ಹರಿದು ಬಂದಿದೆ.

ಇದೇ ಅವಧಿಯಲ್ಲಿ ಆಲಮಟ್ಟಿ ಜಲಾಶಯದಿಂದ ಕೃಷ್ಣಾ ನದಿ ತಳಪಾತ್ರದ ನಾರಾಯಣಪುರ ಜಲಾಶಯಕ್ಕೂ 7 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ಹೀಗಾಗಿ ಕೂಡಲಸಂಗಮ ಬಳಿಯ ಕೃಷ್ಣಾ, ಮಲಪ್ರಭಾ ನದಿಯ ಸಂಗಮ ಸ್ಥಳದಲ್ಲಿ ನದಿಯ ಒಡಲು ಸಂಪೂರ್ಣ ತುಂಬಿಕೊಂಡಿದೆ.

ಈ ವರ್ಷದ ಜುಲೈ 2ರವರೆಗೂ ಆಲಮಟ್ಟಿ ಜಲಾಶಯದಲ್ಲಿ 21 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ವರ್ಷ ತಡವಾಗಿ ಒಳಹರಿವು ಆರಂಭಗೊಂಡರೂ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಕಾರಣ ಜಲಾಶಯ ಭರ್ತಿಯತ್ತ ಸಾಗಿದೆ. ಸೋಮವಾರ, ಜಲಾಶಯದ ಒಳಹರಿವು 1,11,560 ಕ್ಯುಸೆಕ್‌ ಇದ್ದು, 33,128 ಕ್ಯುಸೆಕ್‌ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ಇದರಿಂದಾಗಿ ಜಲಾಶಯದ ಆರು ಘಟಕಗಳು ಕಾರ್ಯಾರಂಭಗೊಂಡಿದ್ದು, 250 ಮೆಗಾವಾಟ್‌ ವಿದ್ಯುತ್ ಉತ್ಪಾದನೆಯಾಗುತ್ತಿದೆ.

123.081 ಟಿಎಂಸಿ ಅಡಿ ಗರಿಷ್ಠ ಸಂಗ್ರಹದ ಜಲಾಶಯದಲ್ಲಿ ಈಗ 95.613 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇದೇ ರೀತಿ ಒಳಹರಿವು ಮುಂದುವರಿದರೆ ಎರಡು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದೆ.

Post Comments (+)