ಮಂಗಳವಾರ, ಮಾರ್ಚ್ 2, 2021
31 °C
ಪಿಎಂ ಕೇರ್ಸ್‌, ಸಿಎಂ ನಿಧಿಗೆ ₹ 3 ಕೋಟಿ ದೇಣಿಗೆ ಸಂದಾಯ

ಕೊರೊನಾ ಸಂಕಷ್ಟಕ್ಕೆ ಮಿಡಿದ ವಿಜಯಪುರ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ದೇಶವಾಸಿಗಳಿಗಾಗಿ ತಮ್ಮ ತನು, ಮನ, ಧನವನ್ನು ಅರ್ಪಿಸುವ ಮೂಲಕ ವಿಜಯಪುರ ಜಿಲ್ಲೆಯ ದಾನಿಗಳು, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳು, ಉದ್ಯಮದಾರರು ಮಾನವೀಯತೆ ಮೆರೆದಿದ್ದಾರೆ.

ಹೌದು, ಕೋವಿಡ್‌ 19 ಮುಖ್ಯಮಂತ್ರಿ ಪರಿಹಾರ ನಿಧಿ, ಪಿಎಂ ಕೇರ್ಸ್‌ ಮತ್ತು ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ(ಎಆರ್‌ಎಸ್‌)ಗೆ ಇಲ್ಲಿಯವರೆಗೆ ₹3 ಕೋಟಿಗೂ ಅಧಿಕ ಹಣವನ್ನು ದೇಣಿಗೆ ನೀಡಿದ್ದಾರೆ. ಅಲ್ಲದೇ, ಸಾವಿರಾರು ಕಡುಬಡವರಿಗೆ ಆಹಾರ ಪದಾರ್ಥಗಳಿರುವ ಕಿಟ್‌ಗಳನ್ನು ನೀಡಿ, ಜನರ ಕಣ್ಣೀರನ್ನು ಒರಿಸುವ ಕಾರ್ಯ ಮಾಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಇದುವರೆಗೆ ಕೋವಿಡ್‌ 19 ಮುಖ್ಯಮಂತ್ರಿ ಪರಿಹಾರ ನಿಧಿಗೆ 128 ದಾನಿಗಳು ₹1.52 ಕೋಟಿ, ಪಿಎಂ ಕೇರ್ಸ್‌ಗೆ 35 ದಾನಿಗಳು ₹ 55 ಲಕ್ಷ ಹಾಗೂ ಎಆರ್‌ಎಸ್‌ (ಆರೋಗ್ಯ ರಕ್ಷ ಸಮಿತಿ)ಗೆ ₹ 19 ದಾನಿಗಳು ₹11.52 ಲಕ್ಷ ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದರು.

ವಿಜಯಪುರ ನಗರದ ಸೀಲ್‌ಡೌನ್‌ ಪ್ರದೇಶವೊಂದಕ್ಕೆ ಸುಮಾರು 8 ಸಾವಿರಕ್ಕೂ ಅಧಿಕ ಆಹಾರ ಕಿಟ್‌ಗಳನ್ನು ದಾನಿಗಳು ನೀಡಿದ್ದಾರೆ. ಅಲ್ಲದೇ, ಹಾಲಿ, ಮಾಜಿ ಜನಪ್ರತಿನಿಧಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಹಾರ ಪದಾರ್ಥಗಳ ಕಿಟ್‌ ನೀಡಿದ್ದಾರೆ ಎಂದು ಹೇಳಿದರು.

ಸೇವಾ ಕಾರ್ಯದಲ್ಲೂ ಮುಂದು: ಪ್ರತಿಷ್ಠೆ ಮತ್ತು ರಾಜಕೀಯ ಜಿದ್ದಾಜಿದ್ದಿನ ನಡುವೆಯೂ ಜಿಲ್ಲೆಯ ಮೂವರು ಶಾಸಕರು ಜನಪರ ಕೆಲಸ ಮಾಡುವಲ್ಲೂ ನಾಮುಂದು, ತಾಮುಂದು ಎಂಬಂತೆ ಕೆಲಸ ಮಾಡುತ್ತಿರುವುದು ಗಮನ ಸೆಳೆದಿದೆ. ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಮತ್ತು ಎ.ಎಸ್‌.ಪಾಟೀಲ ನಡಹಳ್ಳಿ ಅವರು ಪರಸ್ಪರ ಪೈಪೋಟಿಗೆ ಬಿದ್ದವರಂತೆ ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಜನರ ನೆರವಿಗೆ ಧಾವಿಸಿದ್ದಾರೆ.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹ 5 ಲಕ್ಷ, ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಅವರು ಪಟ್ಟಣ ಪಂಚಾಯ್ತಿ ಪೌರಕಾರ್ಮಿಕರಿಗೆ ಆಹಾರ ಪದಾರ್ಥಗಳ ಕಿಟ್‌ ವಿತರಿಸಿದ್ದಾರೆ.

ಸಿಂದಗಿ ಶಾಸಕ ಎಂ.ಸಿ.ಮನಗೂಳಿ ಅವರು ಒಂದು ಸಾವಿರ ಆಹಾರ ಪದಾರ್ಥಗಳ ಕಿಟ್‌, ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಸಿದ್ಧಸಿರಿ ಸಂಸ್ಥೆ ಮೂಲಕ ಗೋವುಗಳಿಗೆ ಒಣ ಮೇವು ಒದಗಿಸಿದ್ದಾರೆ. ಜೊತೆಗೆ ತರಕಾರಿ,ಹಣ್ಣು ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ತಮ್ಮ ಬ್ಯಾಂಕಿನಿಂದ ಬಡ್ಡಿ ರಹಿತ ಸಾಲ ಯೋಜನೆ ಘೋಷಿಸಿದ್ದಾರೆ.

ಸಂಘ, ಸಂಸ್ಥೆಗಳು ಬಿಡಾಡಿ ದನಕುರುಗಳಿಗೆ, ನಾಯಿಗಳಿಗೆ ಪಕ್ಷಿಗಳಿಗೆ ಆಹಾರ, ನೀರು ಒದಗಿಸುವ ಮೂಲಕ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿವೆ.

20 ಸಾವಿರ ಕಿಟ್‌ ವಿತರಿಸಿದ ನಡಹಳ್ಳಿ

ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಆಹಾರ ಪದಾರ್ಥಗಳ ಕಿಟ್‌ ಒದಗಿಸಿದ್ದಾರೆ. ಅಲ್ಲದೇ, ಸಂಕಷ್ಟದಲ್ಲಿರುವವರಿಗೆ ಮತ್ತು ತಮ್ಮ ಕ್ಷೇತ್ರದ ವಲಸೆ ಕಾರ್ಮಿಕರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೇ, ಜಿಲ್ಲೆಯಾದ್ಯಂತ ಇರುವ ಪತ್ರಿಕಾ ವಿತರಕರಿಗೆ ಆಹಾರ ಪದಾರ್ಥಗಳ ಕಿಟ್‌, ಮಾಸ್ಕ್‌ ವಿತರಿಸಿದ್ದಾರೆ.

ಡಿಸಿಸಿ ಬ್ಯಾಂಕಿನಿಂದ ₹1ಕೋಟಿ

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 1ಕೋಟಿ ನೀಡುವುದಾಗಿ ಈಗಾಗಲೇ ಬ್ಯಾಂಕಿನ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಈ ವಾರದಲ್ಲಿ ಬೆಂಗಳೂರಿಗೆ ತೆರಳಿ ಚೆಕ್‌ ಅನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.

ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 25 ಸಾವಿರ ಕಡುಬಡವರಿಗೆ ಶಾಸಕ ಶಿವಾನಂದ ಪಾಟೀಲ ಆಹಾರ ಕಿಟ್‌ ಒದಗಿಸುವ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ.

ಬಿಎಲ್‌ಡಿಇ:₹ 50 ಲಕ್ಷ ದೇಣಿಗೆ 

ಶಾಸಕ ಎಂ.ಬಿ.ಪಾಟೀಲ ಅಧ್ಯಕ್ಷರಾಗಿರುವ ವಿಜಯಪುರದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 25 ಲಕ್ಷ ಮತ್ತು ಪಿಎಂ ಕೇರ್ಸ್‌ಗೆ ₹ 25 ಲಕ್ಷ ಈಗಾಗಲೇ ನೀಡಲಾಗಿದೆ. ಜೊತೆಗೆ ಬಿಎಲ್‌ಡಿಇ ವೈದ್ಯಕೀಯ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ 30 ಬೆಡ್‌ ಮೀಸಲಿಟ್ಟಿದೆ. ಅಲ್ಲದೇ, 20 ವೆಂಟಿಲೇಟರ್‌ಗಳನ್ನು ಸೋಂಕಿತರ ಚಿಕಿತ್ಸೆಗೆಗಾಗಿ ಜಿಲ್ಲಾಡಳಿತಕ್ಕೆ ನೀಡಿದೆ.

ಎಂ.ಬಿ.ಪಾಟೀಲ ಫೌಂಡೇಷನ್‌ನಿಂದ ಗೋವಾ ಕನ್ನಡಿಗರಿಗೆ ಮೂರು ಲೋಡ್‌ ಆಹಾರ ಧಾನ್ಯಗಳನ್ನು ಕಳುಹಿಸಿಕೊಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆಗಾಗಿ ಅತ್ಯಾಧುನಿಕ ಕ್ಯಾಬಿನ್‌ ನೀಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.