ವಿಜಯಪುರ ಡಿಡಿಪಿಐ ಮತ್ತೊಮ್ಮೆ ವರ್ಗ..!

7
ಪದೇ ಪದೇ ಬದಲಾವಣೆ ಬೇಡ; ಕನಿಷ್ಠ ಎರಡು ವರ್ಷವಾದರೂ ಅವಕಾಶವಿರಲಿ...

ವಿಜಯಪುರ ಡಿಡಿಪಿಐ ಮತ್ತೊಮ್ಮೆ ವರ್ಗ..!

Published:
Updated:
Deccan Herald

ವಿಜಯಪುರ: ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ಪದೇ ಪದೇ ಬದಲಾಯಿಸಿ, ವರ್ಗಗೊಳಿಸುತ್ತಿರುವುದಕ್ಕೆ ಶೈಕ್ಷಣಿಕ ವಲಯ ಸೇರಿದಂತೆ, ಪೋಷಕರ ವಲಯದಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಎಂ.ಎಂ.ಸಿಂಧೂರ ಅವರನ್ನು ವರ್ಗಾಯಿಸಿ; ಆ ಜಾಗಕ್ಕೆ ಕೆ.ರಾಯಪ್ಪರೆಡ್ಡಿ ಅವರನ್ನು ನಿಯೋಜಿಸಲಾಗಿತ್ತು. ನಾಲ್ಕು ತಿಂಗಳ ಅವಧಿ ಮುಗಿಯುವುದರೊಳಗಾಗಿ ಮತ್ತೊಮ್ಮೆ ಶಿಕ್ಷಣ ಇಲಾಖೆ ರಾಯಪ್ಪರೆಡ್ಡಿ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

2017–18ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶ್ರೀಶೈಲ ಬಿರಾದಾರ, ಪ್ರಹ್ಲಾದ ಟಿ.ಬೊಂಗಾಳೆ, ಪ್ರಸನ್ನಕುಮಾರ, ಪ್ರಹ್ಲಾದ ಟಿ.ಬೊಂಗಾಳೆ, ಎಂ.ಎಂ.ಸಿಂಧೂರ, ಕೆ.ರಾಯಪ್ಪರೆಡ್ಡಿ ಡಿಡಿಪಿಐಗಳಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

2018–19ನೇ ಸಾಲಿನ ಶೈಕ್ಷಣಿಕ ವರ್ಷದ ಎರಡು ತಿಂಗಳು ಮುಗಿಯುವುದರೊಳಗಾಗಿ ಕೆ.ರಾಯಪ್ಪರೆಡ್ಡಿ ಅವರನ್ನು ವರ್ಗಾಯಿಸಿ, ಈ ಜಾಗಕ್ಕೆ ಮತ್ತೆ ಎಂ.ಎಂ.ಸಿಂಧೂರ ವರ್ಗಾಯಿಸಲಾಗಿದೆ. ಶ್ರೀಶೈಲ ಬಿರಾದಾರ ಹೊರತುಪಡಿಸಿದರೆ ಉಳಿದ ಎಲ್ಲಾ ಡಿಡಿಪಿಐಗಳು ಈ ಎರಡು ಶೈಕ್ಷಣಿಕ ವರ್ಷದಲ್ಲಿ ಅತ್ಯಂತ ಕಡಿಮೆ ಅವಧಿ ಕರ್ತವ್ಯ ನಿರ್ವಹಿಸಿದವರಾಗಿದ್ದಾರೆ.

ಆಡಳಿತ ಯಂತ್ರಕ್ಕೆ ಹಿನ್ನಡೆ:  ‘ಡಿಡಿಪಿಐಗಳನ್ನು ಪದೇ ಪದೇ ಬದಲಾಯಿಸುವುದು ಆಡಳಿತ ಯಂತ್ರಕ್ಕೆ ಹಿನ್ನಡೆಯಾದಂತೆ. ಕನಿಷ್ಠ ಪಕ್ಷ ಶೈಕ್ಷಣಿಕ ವರ್ಷದ ಅವಧಿ ಪೂರೈಸಲಾದರೂ ಅವಕಾಶ ನೀಡಬೇಕು’ ಎಂಬ ಆಗ್ರಹ ಜಿಲ್ಲೆಯ ಎಲ್ಲೆಡೆ ಕೇಳಿ ಬರಲಾರಂಭಿಸಿದೆ.

‘ಶೈಕ್ಷಣಿಕ ವರ್ಷದ ಅವಧಿಯ ನಡುವೆ ಡಿಡಿಪಿಐಗಳ ಬದಲಾವಣೆ ಎಗ್ಗಿಲ್ಲದೇ ನಡೆದರೇ, ಶಿಕ್ಷಣ ಇಲಾಖೆ ಅಕ್ರಮದ ಗೂಡಾಗಲಿದೆ. ಇದಕ್ಕೆ ತಾಜಾ ನಿದರ್ಶನ 2017–18ನೇ ಶೈಕ್ಷಣಿಕ ಸಾಲು.

ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವಲ್ಲಿ ನಿಯಮಾವಳಿ ಉಲ್ಲಂಘನೆಯಾಗಿದೆ ಎಂಬ ಆರೋಪ ಜಿಲ್ಲಾ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಪುಂಖಾನುಪುಂಖವಾಗಿ ಕೇಳಿ ಬಂತು. ಇವುಗಳಿಗೆ ಅನುಮತಿ ನೀಡಿದ ಅಧಿಕಾರಿ ಬೇರೆಡೆ ವರ್ಗವಾಗಿದ್ದರು. ಇವರ ವಿರುದ್ಧ ಯಾವ ಕ್ರಮ ಜರುಗಿಸಲಿಲ್ಲ. ಇದರ ಜತೆಗೆ ಖಾಸಗಿ ಶಾಲೆಗಳನ್ನು ರದ್ದುಪಡಿಸಲಿಲ್ಲ. ಪದೇ ಪದೇ ವರ್ಗಾವಣೆ ನಡೆದರೆ ಇಂತಹ ಹಲ ಹತ್ತಾರು ಅಕ್ರಮಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಕೆ.ಎ.ಪಟೇಲ ದೂರಿದರು.

‘ಶಿಕ್ಷಕರ ನೇಮಕಾತಿ, ವರ್ಗಾವಣೆ, ನಿಯೋಜನೆ, ವೈದ್ಯಕೀಯ ವೆಚ್ಚ ಮರುಪಾವತಿ ಸೇರಿದಂತೆ, ಅಮಾನತು, ಇಲಾಖಾ ವಿಚಾರಣೆ ಇನ್ನಿತರೆ ಎಲ್ಲಾ ಆಡಳಿತಾತ್ಮಕ ಚಟುವಟಿಕೆಗಳ ಮೇಲೆ ಡಿಡಿಪಿಐ ವರ್ಗಾವಣೆ ದುಷ್ಪರಿಣಾಮ ಬೀರಲಿದೆ. ಬಡ್ತಿ ನೀಡಲೂ ಇದು ಅಡ್ಡಿಯಾಗಲಿದೆ’ ಎಂಬುದು ಶಿಕ್ಷಕ ವಲಯದ ಆತಂಕ.

‘ಪದೇ ಪದೇ ಡಿಡಿಪಿಐ ಬದಲಾಗುತ್ತಿದ್ದಂತೆ ಇಲಾಖೆಯಲ್ಲಿ ಬಿಗಿ ಆಡಳಿತವಿರಲ್ಲ. ಯಾರ ನಿಯಂತ್ರಣವೂ ಇಲ್ಲದಾಗುತ್ತೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮದೇ ಗುಂಗಿನಲ್ಲಿರುತ್ತಾರೆ. ಸಭೆ, ಕಚೇರಿ ಕರ್ತವ್ಯಗಳಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ನಿಯೋಜನೆ ದಂಧೆಯಲ್ಲಿ ಮಗ್ನರಾಗಿ ಇಲಾಖೆಗೆ ಮಸಿ ಬಳಿಯುವ ಕೆಲಸ ನಡೆಸುತ್ತಾರೆ.

ಸಿಆರ್‌ಪಿ, ಬಿಆರ್‌ಪಿಗಳ ಕರ್ತವ್ಯವೂ ಬದಲಾಗಿ ಹೋಗುತ್ತದೆ. ಶಿಕ್ಷಕರ ರಾಜಕಾರಣಕ್ಕೆ ಮಿತಿಯೇ ಇರುವುದಿಲ್ಲ. ಇದರ ಪರಿಣಾಮ ಶೈಕ್ಷಣಿಕ ಗುಣಮಟ್ಟ ತೀವ್ರಗತಿಯಲ್ಲಿ ಕುಸಿಯಲಿದೆ’ ಎಂದು ವಿಶ್ರಾಂತ ಪ್ರೊಫೆಸರ್ ಎಸ್‌.ಎಂ.ಹಿರೇಮಠ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !