ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಕ್ಲಸ್ಟರ್‌: ವಿಜಯಪುರದಲ್ಲಿ ನಿರ್ಬಂಧ ಮತ್ತಷ್ಟು ಕಠಿಣ

ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚನೆ
Last Updated 19 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌–19 ದೃಢಪಟ್ಟಿರುವ ಪ್ರದೇಶದ ಸುತ್ತಮುತ್ತಲಿನ ಜನರಲ್ಲಿ ಆತಂಕ, ಭಯ, ಗಾಬರಿ ವ್ಯಾಪಿಸುತ್ತಿರುವುದರಿಂದ ಈ ಪ್ರದೇಶವನ್ನು ಕ್ಲಸ್ಟರ್‌ ಎಂದು ಗುರುತಿಸಿ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀಲ್‌ಡೌನ್‌ ಪ್ರದೇಶದ ಸುತ್ತಳತೆಯ ಒಂದು ಕಿ.ಮೀ. ಪ್ರದೇಶ ಕ್ಲಸ್ಟರ್‌ ವ್ಯಾಪ್ತಿಗೆ ಬರಲಿದ್ದು, ಜನ ಸಂಚಾರ ಮತ್ತು ಚಟುವಟಿಕೆಗಳಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ ಎಂದರು.

ಕ್ಲಸ್ಟರ್‌ ಪ್ರದೇಶದ ವ್ಯಾಪ್ತಿಯಲ್ಲಿ ಯಾರೊಬ್ಬರೂ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ವಸ್ತುಗಳು, ಔಷಧ ಪೂರೈಕೆಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದ್ದು, ಯಾರೂ ಅಂಜುವ ಅಗತ್ಯವಿಲ್ಲ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ 50 ಜನರ ತಂಡ ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದೆ. ಸೀಲ್‌ಡೌನ್‌ ಪ್ರದೇಶದ ಜನರು ಅಗತ್ಯ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಏಳು ಮೊಬೈಲ್‌ ಫೋನ್‌ ನಂಬರ್‌ ನೀಡಲಾಗಿದೆ ಎಂದರು.

ವೈದ್ಯರು, ನರ್ಸ್‌ ಸೇರಿದಂತೆ ಆರೋಗ್ಯ ಕಾರ್ಯಕರ್ತರು ಸೀಲ್‌ಡೌನ್‌ ಪ್ರದೇಶದಲ್ಲಿ ಇದುವರೆಗೆ 7,574 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಸಿದ್ದಾರೆ ಎಂದು ಹೇಳಿದರು.

ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಸೀಲ್‌ಡೌನ್‌ ಪ್ರದೇಶದ ಜನರ ಮೇಲೆ ಡ್ರೋಣ್‌ ಮತ್ತು ಸಿಸಿಟಿವಿ ಕ್ಯಾಮೆರಾ ಮೂಲಕ ಕಣ್ಣಾವಲು ಇಟ್ಟಿದ್ದಾರೆ ಎಂದರು.

ರತ್ನಾಪುರ ಕಂಟೈನ್ಮೆಂಟ್‌:ಕೋವಿಡ್‌–19 ಆಘಾತಕ್ಕೆ ಒಳಗಾಗಿ ರೋಗಿಯೊಬ್ಬರು ಸಾವಿಗೀಡಾಗಿರುವ ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮವನ್ನು ಕಂಟೈನ್ಮೆಂಟ್‌ ಜೋನ್‌ ಗುರುತಿಸಿ, ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಹೇಳಿದರು.

ಪ್ರಯೋಗಾಲಯ ಅಗತ್ಯ:ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ವ್ಯಾಪಕವಾಗಿರುವುದರಿಂದ ಹಾಗೂ ಮಹಾರಾಷ್ಟ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಗೆ ಪ್ರಯೋಗಾಲಯದ ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ತಂದು, ಪ್ರಯೋಗಾಲಯ ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಖಾಸಗಿ ವೈದ್ಯರ ಸಲಹೆ:ಜಿಲ್ಲೆಯ ಖಾಸಗಿ ತಜ್ಞ ವೈದ್ಯರನ್ನು ಒಳಗೊಂಡ ತಂಡವನ್ನು ರಚಿಸಲಾಗಿದ್ದು, ಈ ತಂಡವು ಕೋವಿಡ್‌–19 ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಅಗತ್ಯ ನೆರವು, ಸಲಹೆ ನೀಡುತ್ತಿದ್ದಾರೆ ಎಂದು ಹೇಳಿದರು.

ರೈತರಗೆ ಅವಕಾಶ:ಗ್ರಾಮೀಣ ಭಾಗದಿಂದ ರೈತರು ವಿಜಯಪುರಕ್ಕೆ ತರಕಾರಿಯನ್ನು ತಂದು ಮಾರಾಟ ಮಾಡಲು ಅನುಕೂಲವಾಗುವಂತೆ ಆಯಾ ಪಿಡಿಒಗಳಿಂದ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಗುರುತಿಸಲಾಗಿರುವ ಏಳು ಪ್ರದೇಶಗಳಿಗೆ ರೈತರು ತಾವು ಬೆಳೆದ ತರಕಾರಿಯನ್ನು ತಂದು ಉತ್ತಮ ಬೆಲೆಗೆ ಮಾರಾಟ ಮಾಡಿಹೋಗಬಹುದು ಎಂದು ತಿಳಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ, ಶಾಸಕರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ ಸಾಸನೂರ, ಎಂ.ಸಿ.ಮನಗೂಳಿ, ವಿಧಾನ ಪರಿಷತ್‌ ಸದಸ್ಯ ಅರುಣ ಶಹಾಪುರ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT