ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಮಸೀದಿಯಂತಾದ ಮನೆ, ನಮಾಜ್‌ ನಿರಾಳ

ಮನೆಮಂದಿಯಲ್ಲ ಸೇರಿ ನಿತ್ಯ ಐದು ಬಾರಿ ಸಾಮೂಹಿಕ ಪ್ರಾರ್ಥನೆ
Last Updated 7 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ವಿಜಯಪುರ: ಮಾರಕ ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಜನರು ಸೇರದಂತೆ ನಿರ್ಬಂಧ ಇರುವುದರಿಂದ ಬಹುತೇಕ ಧಾರ್ಮಿಕ ಪೂಜಾ, ಪ್ರಾರ್ಥನಾ ಕಾರ್ಯಕ್ರಮಗಳು ಮನೆಗೆ ಸೀಮಿತವಾಗಿವೆ.

ದೇವಸ್ಥಾನ, ಮಸೀದಿ, ಚರ್ಚ್‌ಗಳ ಬಾಗಿಲು ಬಂದ್‌ ಆಗಿದ್ದು, ಅತ್ತ ಯಾರೂ ಸುಳಿಯುತ್ತಿಲ್ಲ. ಅದರಲ್ಲೂ ಮುಸ್ಲಿಮರು ಎಂಥ ಸಂದರ್ಭದಲ್ಲೂ ಮಸೀದಿಯಲ್ಲಿ ನಡೆಯುವ ನಮಾಜ್‌ಗೆ ತಪ್ಪಿಸುತ್ತಿರಲಿಲ್ಲ. ಆದರೆ, ಇದೀಗ ಮುಸ್ಲಿಮರು ಮಸೀದಿಗೆ ಹೋಗುವುದನ್ನು ನಿಲ್ಲಿಸಿ, ಮನೆಯಲ್ಲೇ ಐದು ಹೊತ್ತು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಮಸೀದಿಯಲ್ಲಿ ಆಜಾನ್‌ ಮೊಳಗುತ್ತಿದ್ದಂತೆ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಇಡೀ ಕುಟುಂಬದ ಎಲ್ಲ ಸದಸ್ಯರು ಒಟ್ಟಿಗೆ ಸೇರಿ ತಮ್ಮ, ತಮ್ಮ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ.

‘ಮಸೀದಿಯಲ್ಲಾದರೆ ಪುರುಷರಷ್ಟೇ ಪ್ರಾರ್ಥನೆ ಮಾಡುತ್ತಿದ್ದೆವು. ಆ ಹೊತ್ತಿನಲ್ಲಿ ಮಹಿಳೆಯರು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಇದೀಗ ಯಾವುದೇ ಭೇದವಿಲ್ಲದೇ ಎಲ್ಲರೂ ಕೂಡಿಕೊಂಡು ಪ್ರಾರ್ಥನೆ ಮಾಡುತ್ತಿರುವುದು ಹೊಸ ಅನುಭವ ನೀಡುತ್ತಿದೆ’ ಎನ್ನುತ್ತಾರೆ ಸಕಾಫ್‌ ರೋಜಾ ರಸ್ತೆ ನಿವಾಸಿ ರೆಹಮತ್‌ವುಲ್ಲಾ ಸಾಂಗ್ಲಿಕರ್‌.

‘ಮಕ್ಕಾ–ಮದೀನದತ್ತ ಮುಖಮಾಡಿ ಪ್ರತಿದಿನ ಬೆಳಿಗ್ಗೆ 5.45ಕ್ಕೆ ನಮಾಜ್‌ ಆರಂಭಿಸುತ್ತೇವೆ. ಸುಮಾರು 25 ನಿಮಿಷ ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುತ್ತೇವೆ. ಬಳಿಕ ಮಧ್ಯಾಹ್ನ 1.45ಕ್ಕೆ, ಸಂಜೆ 5.15ಕ್ಕೆ, 6.45ಕ್ಕೆ ಹಾಗೂ ರಾತ್ರಿ 8.30ಕ್ಕೆ ಸುಮಾರು 10ರಿಂದ 15 ನಿಮಿಷ ಪ್ರಾರ್ಥನೆ ಮಾಡುತ್ತೇವೆ’ ಎಂದರು.

‘ಮನೆಯಲ್ಲೇ ಪ್ರಾರ್ಥನೆ ಮಾಡುತ್ತಿರುವುದರಿಂದ ಕೊರೊನಾ ಸೋಂಕಿನ ಭಯವಿಲ್ಲ. ನಿರಾಳವಾಗಿದ್ದೇವೆ. ಸೋಂಕು ಹರಡದಂತೆ ತಡೆಯಲು ಇದು ಉತ್ತಮ ಮಾರ್ಗ’ ಎಂದು ಅವರು ಅಭಿಪ್ರಾಯಪಟ್ಟರು.

‘ಪ್ರಾರ್ಥನೆಯಲ್ಲಿ ಮನೆಯವರಷ್ಟೇ ಪಾಲ್ಗೊಳ್ಳುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಾಗೂ ಮಾಸ್ಕ್‌ ತೊಡುವ ಅಗತ್ಯ ಇಲ್ಲ’ ಎಂದರು.

‘ಶಾಬ್‌–ಇ–ಬರಾತ್ ಮನೆಯಲ್ಲೇ ಆಚರಿಸಿ’
ಏಪ್ರಿಲ್ 9ರಂದು ‘ಶಾಬ್‌–ಇ–ಬರಾತ್’ (ಜಾಗರಣೆ) ಅಂಗವಾಗಿ ಎಲ್ಲರೂ ತಮ್ಮ ಮನೆಯಲ್ಲೇ ನಮಾಜ್‌ ಮಾಡುವ ಮೂಲಕ ದೇಶದ, ರಾಜ್ಯದ, ಉನ್ನತಿ ಹಾಗೂ ಮಾನವ ಕುಲದ ಕಲ್ಯಾಣಕ್ಕಾಗಿ ಕೊರೊನಾ ವೈರಸ್‌ನಿಂದ ಎಲ್ಲರನ್ನೂ ರಕ್ಷಿಸಲು ಅಲ್ಲಾಹುನಲ್ಲಿ ಪ್ರಾರ್ಥನೆ(ದುವಾ) ಮಾಡಬೇಕು ಎಂದುಜಮಾತೆ ಅಹಲೆ ಸುನ್ನತ್‌ ರಾಜ್ಯ ಘಟಕದ ಅಧ್ಯಕ್ಷ ಹಜರತ್ ಸೈಯದ್‌ ತನವೀರ್ ಹಾಶ್ಮಿ ಮನವಿ ಮಾಡಿದ್ದಾರೆ.

ಲಾಕ್‌ಡೌನ್‌ನಿಂದಾಗಿ ದಿನಕೂಲಿ ಕಾರ್ಮಿಕರು, ಬಡವರು, ಸಣ್ಣಪುಟ್ಟ ವ್ಯಾಪಾರಿಗಳು ಕಷ್ಟದಲ್ಲಿ ಇದ್ದಾರೆ. ಕಾರಣ ಎಲ್ಲರೂ ತಮ್ಮ ಕೈಲಾದಷ್ಟು ಸಹಾಯ ಮಾಡಬೇ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT