ಸೋಮವಾರ, ಡಿಸೆಂಬರ್ 9, 2019
20 °C
ಪ್ರತಿ ತಿಂಗಳು ತೂಕ; ಸಾಮಾನ್ಯ ತೂಕದ ಮಕ್ಕಳ ಸಂಖ್ಯೆ ಹೆಚ್ಚು

ವಿಜಯಪುರ | ಜಿಲ್ಲೆಯ 259 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ

ಸುಭಾಸ ಎಸ್.ಮಂಗಳೂರ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯ 2,313 ಅಂಗನವಾಡಿಗಳಿಗೆ ದಾಖಲಾಗಿರುವ ಸುಮಾರು 2.20 ಲಕ್ಷ ಮಕ್ಕಳ ಪೈಕಿ 259 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿವೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಪ್ರತಿ ತಿಂಗಳು 1 ರಿಂದ 10ನೇ ತಾರೀಖಿನವರೆಗೆ ಅಂಗನವಾಡಿಗಳಲ್ಲಿರುವ ಮಕ್ಕಳ ತೂಕವನ್ನು ಮಾಡಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ 2.20 ಲಕ್ಷ ಮಕ್ಕಳನ್ನು ತೂಕ ಮಾಡಲಾಗಿದ್ದು, ಈ ಪೈಕಿ 1.85 ಲಕ್ಷ ಮಕ್ಕಳು ಸಾಮಾನ್ಯ ತೂಕ, 34,550 ಮಕ್ಕಳು ಸಾಧಾರಣ ಕಡಿಮೆ ತೂಕ ಹಾಗೂ 259 ಮಕ್ಕಳು ವಿಪರೀತ ಕಡಿಮೆ ತೂಕ ಹೊಂದಿರುವುದು ಕಂಡು ಬಂದಿದೆ.

‘ಪ್ರತಿ ತಿಂಗಳು ಮಕ್ಕಳ ತೂಕವನ್ನು ದಾಖಲಿಸಲಾಗುತ್ತದೆ. ಈ ಪೈಕಿ ವಿಪರೀತ ಕಡಿಮೆ ತೂಕ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಪುನರ್ವಸತಿ ಕೇಂದ್ರಗಳಿಗೆ ದಾಖಲಿಸಲಾಗುತ್ತದೆ. ವಿಜಯಪುರ ನಗರದಲ್ಲಿ 10 ಹಾಸಿಗೆ ಸಾಮರ್ಥ್ಯದ ಒಂದು ಕೇಂದ್ರ ಹಾಗೂ ಇಂಡಿಯಲ್ಲಿ 5 ಹಾಸಿಗೆ ಸಾಮರ್ಥ್ಯದ ಒಂದು ಕೇಂದ್ರಗಳಿವೆ. ಸಿಂದಗಿಯಲ್ಲಿ ಈಗಷ್ಟೇ ಪುನರ್ವಸತಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಮಕ್ಕಳಿಗೆ ಅಗತ್ಯ ಔಷಧಿ, ಮಾತ್ರೆಗಳನ್ನು ಕೊಡಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಗ್ಯ ಇಲಾಖೆಯು ಎತ್ತರಕ್ಕೆ ತಕ್ಕಂತೆ ತೂಕ ಇರಬೇಕು ಎಂಬ ಮಾನದಂಡವನ್ನು ನಿಗದಿಪಡಿಸಿದೆ. ಆ ಪ್ರಕಾರ ತೂಕ ಮಾಡಿ, ಅಪೌಷ್ಟಿಕ ಮಕ್ಕಳನ್ನು ಗುರುತಿಸಲಾಗುತ್ತಿದೆ. ಸೊನ್ನೆಯಿಂದ ಮೂರು ವರ್ಷದ ಒಳಗಿನ ಮಕ್ಕಳಿಗೆ ಮನೆಯಲ್ಲಿ ಆರೈಕೆ ಮಾಡುವಂತೆ ಸೂಚಿಸಲಾಗುತ್ತದೆ. 3 ರಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಿಸಲಾಗುತ್ತದೆ. ವಾರದಲ್ಲಿ ಐದು ದಿನ ಮೊಟ್ಟೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶುಕ್ರವಾರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಾರೆ. ಆ ಮಕ್ಕಳ ಪಾಲನೆ, ಪೋಷಣೆ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡುತ್ತಾರೆ. ಅಗತ್ಯ ಔಷಧಿ, ಮಾತ್ರೆಗಳನ್ನು ಕೂಡ ವಿತರಿಸುತ್ತಾರೆ’ ಎಂದು ತಿಳಿಸಿದರು.

**

ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಅವರಿಗೆ ಪೂರಕ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. ಅಲ್ಲದೆ, ಅವರ ಆರೈಕೆ ಬಗ್ಗೆ ಪಾಲಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ.
- ಚಂದ್ರಕಾಂತ ಕುಂಬಾರ, ಉಪನಿರ್ದೆಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಲ್ಲೂಕು ತೂಕ ಮಾಡಿದ ಮಕ್ಕಳು ಕಡಿಮೆ ತೂಕದ ಮಕ್ಕಳು
ಇಂಡಿ 39,033 45
ಚಡಚಣ 21,710 15
ಸಿಂದಗಿ 46,608 39
ವಿಜಯಪುರ ಗ್ರಾಮೀಣ 27,585 37
ವಿಜಯಪುರ ನಗರ 21,491 42
ಬಸವನಬಾಗೇವಾಡಿ 32,756 49
ಮುದ್ದೇಬಿಹಾಳ 31,107 32
ಒಟ್ಟು 2,20,290 259

(ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು