ಬುಧವಾರ, ಡಿಸೆಂಬರ್ 2, 2020
23 °C
ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ 1493 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ

ವಿಜಯಪುರಕ್ಕೆ ತಿಂಗಳೊಳಗೆ 2257 ಮನೆ ಮಂಜೂರು: ಸೋಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಗರಕ್ಕೆ 2257 ಮನೆಗಳ ನಿರ್ಮಾಣಕ್ಕೆ ಒಂದು ತಿಂಗಳ ಒಳಗೆ ಅನುಮೋದನೆ ನೀಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ನಗರದ ಅಲ್‌ ಅಮೀನ್‌ ವೈದ್ಯಕೀಯ ಕಾಲೇಜು ಹಿಂಭಾಗ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ₹99 ಕೋಟಿ ಅನುದಾನದಲ್ಲಿ ಜಿ ಪ್ಲಸ್‌ ಒನ್‌ ಮಾದರಿಯ 1493 ಮನೆಗಳ ನಿರ್ಮಾಣಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಆವಾಸ್‌ ಯೋಜನೆಯಡಿ ನಿರ್ಮಾಣವಾಗುತ್ತಿರುವ ‘ನಮೋ’(ನರೇಂದ್ರ ಮೋದಿ) ನಗರಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಹೆಚ್ಚುವರಿಯಾಗಿ ₹10 ಕೋಟಿ ನೀಡಲಾಗುವುದು ಎಂದು ತಿಳಿಸಿದರು.

ಬಡವರಿಗೆ ಸರ್ಕಾರದ ವತಿಯಿಂದ ನಿರ್ಮಿಸಿಕೊಡುವ ಮನೆಗಳನ್ನು ಯಾವುದೇ ಕಾರಣಕ್ಕೂ ಫಲಾನುಭವಿಗಳು ಬೇರೆಯವರಿಗೆ ಮಾರಾಟ ಮಾಡಬಾರದು. ಇನ್ನು 10–15 ವರ್ಷದಲ್ಲಿ ಈ ಜಾಗಕ್ಕೆ ಉತ್ತಮ ಬೆಲೆ ಬರಲಿದೆ ಎಂದು ಹೇಳಿದರು.

ಮನೆಗಳ ನಿರ್ಮಾಣದಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಅವರು ಇದರ ಮೇಲ್ವಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿದರು.

ಐದು ಸಾವಿರ ಮನೆ: ಜಿಲ್ಲೆಯಲ್ಲಿರುವ ಅಲೆಮಾರಿ, ಅರೆ ಅಲೆಮಾರಿ, ಸುಡಗಾಡಸಿದ್ಧ ಸಮಾಜದ ಕುಟುಂಬಗಳ ಸಮೀಕ್ಷೆ ಮಾಡುವಂತೆ ಸೂಚಿಸಿದ ಅವರು, ಈ ಸಮುದಾಯದವರಿಗೆ ಐದು ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯ ಫಲಾನುಭವಿಗಳಿಗೆ ಒಂದು ವರ್ಷದೊಳಗೆ ಹಕ್ಕುಪತ್ರ ಒದಗಿಸಿಕೊಡಲಾಗುವುದು ಎಂದು ಹೇಳಿದರು.

2022ರ ಒಳಗೆ ದೇಶದಲ್ಲಿ ಸರ್ವರಿಗೂ ಸೂರು ಒದಗಿಸುವುದು ಪ್ರಧಾನಿ ಮೋದಿ ಅವರ ಯೋಜನೆಯಾಗಿದೆ. ಆ ಪ್ರಕಾರ ರಾಜ್ಯದಲ್ಲೂ ಸೂರಿಲ್ಲದವರಿಗೆ ಸೂರು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ದಾಖಲೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ವಿಜಯಪುರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಡವರಿಗಾಗಿ 3750 ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ದಾಖಲೆ ಮಾಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ವಿವಿಧ ಸಮಾಜದವರು ವಿವಿಧ ಬಡಾವಣೆಗಳಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಆದರೆ, ಹೊಸದಾಗಿ ನಿರ್ಮಾಣವಾಗುತ್ತಿರುವ ‘ನಮೋ’ ನಗರದಲ್ಲಿ ಇಡೀ ವಿಜಯಪುರದ ಎಲ್ಲ ಸಮಾಜದವರೂ ಒಟ್ಟಿಗೆ ಕೂಡಿ ಬಾಳುವ ಹಿಂದೂಸ್ತಾನವಾಗಿ ರೂಪುಗೊಳ್ಳಲಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಜಾಗವನ್ನು ಹೊಡೆಯಲು ಎಲ್ಲರೂ ಯತ್ನಿಸುತ್ತಾರೆ. ಆದರೆ, ನಾನು ಪಾಲಿಕೆಯ 32 ಎಕರೆ ಬೆಲೆ ಬಾಳುವ ಜಾಗವನ್ನು ನಗರದ ಬಡವರಿಗೆ ಮನೆ ನಿರ್ಮಾಣಕ್ಕೆ ಒದಗಿಸಿದ್ದೇನೆ ಎಂದರು.

ಮನೆಗಳ ಗುಣಮಟ್ಟ ಪರಿಶೀಲನೆಗಾಗಿ ಖಾಸಗಿ ಎಂಜಿನಿಯರ್‌ ಒಬ್ಬರನ್ನು ನಿಯೋಜಿಸುತ್ತೇನೆ. ಗುಣಮಟ್ಟ  ಕಾಯ್ದುಕೊಳ್ಳಲು ಸೂಚಿಸುತ್ತೇನೆ. ಯಾವುದೇ ರೀತಿ ಕಳಂಕ ಬಾರದಂತೆ ಗಮನ ಹರಿಸುತ್ತೇನೆ ಎಂದು ಹೇಳಿದರು.

ಶಾಸಕರಾದ ಎಂ.ಸಿ.ಮನಗೂಳಿ, ಎ.ಎಸ್‌.ಪಾಟೀಲ ನಡಹಳ್ಳಿ, ದೇವಾನಂದ ಚವ್ಹಾಣ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ಹಣಾಧಿಕಾರಿ ಗೋವಿಂದರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ರಾಜೀವ್‌ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ(ತಾಂತ್ರಿಕ) ಎನ್‌.ಎಸ್‌.ಮಹಾದೇವಪ್ರಸಾದ್‌ ಇದ್ದರು.

***

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಮನೆಗಳ ಹಂಚಿಕೆಯಲ್ಲಿ ಶೇ 10ರಷ್ಟು ಮನೆಗಳನ್ನು ಮೇಲ್ಜಾತಿಯ ಬಡವರಿಗೂ ಹಂಚಿಕೆ ಮಾಡಲು ಸಚಿವರು ಕ್ರಮಕೈಗೊಳ್ಳಬೇಕು
–ಬಸನಗೌಡ ಪಾಟೀಲ ಯತ್ನಾಳ, ಶಾಸಕ, ವಿಜಯಪುರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.