ಮಂಗಳವಾರ, ಮೇ 18, 2021
30 °C
ಕರ್ತವ್ಯ, ಕುಟುಂಬ ನಿರ್ವಹಣೆ ಸಂಬಾಳಿಸುವ ಹೊಣೆ; ಕೋವಿಡ್‌ನಿಂದ ಪಾರಾಗಲು ಹೆಣಗಾಟ

70 ಪೊಲೀಸರಿಗೆ ಕೋವಿಡ್‌ ಪಾಸಿಟಿವ್‌; ಒಬ್ಬರು ಸಾವು

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಜನ ಸಾಮಾನ್ಯರಿಗಿಂತ ಪೊಲೀಸರಿಗೆ ಕೋವಿಡ್‌ ಅತಿ ಹೆಚ್ಚು ಸಂಕಷ್ಟದ ಕಾಲವಾಗಿ ಪರಿಣಮಿಸಿದೆ. ಕರ್ತವ್ಯದ ಜೊತೆಗೆ ತಮ್ಮ ಮತ್ತು ತಮ್ಮ ಕುಟಂಬದ ಆರೋಗ್ಯದ ರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ.

ಒಂದೆಡೆ ನೆತ್ತಿ ಸುಡುವ ಬಿರು ಬಿಸಿಲು, ಇನ್ನೊಂದೆಡೆ ಕೋವಿಡ್‌ ರೋಗದ ಕಾಟ, ಮತ್ತೊಂದೆಡೆ ಬಂದೋಬಸ್ತ್‌ ಕರ್ತವ್ಯ. ಇವುಗಳ ನಿರ್ವಹಣೆಯಲ್ಲಿ ಪೊಲೀಸ್‌ ಸಿಬ್ಬಂದಿ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗಿದೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಬಂದೋಬಸ್ತ್‌ಗೆ ನಿಯೋಜನೆಯಾಗಿರುವ ಪೊಲೀಸರು, ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರ ಮೇಲೂ ಕಣ್ಣಿಟ್ಟಿರಬೇಕಾಗುತ್ತದೆ. ಅನಗತ್ಯವಾಗಿ ಸಂಚರಿಸುವವರನ್ನು ತಡೆದು ದಾಖಲೆ ಪತ್ರಗಳ ಪರಿಶೀಲನೆ ಮಾಡಬೇಕಾಗುತ್ತದೆ. ಜೊತೆಗೆ ವಿವಿಧ ಅಪರಾಧ ಪ್ರಕರಣಗಳನ್ನು ಭೇದಿಸಲು ಸುತ್ತಾಡಬೇಕಾಗಿದೆ. ಆರೊಪಿಗಳನ್ನು ಬಂಧಿಸಿ, ವಿಚಾರಣೆಗೊಳಪಡಿಸಿ ಕೋರ್ಟ್‌ಗೆ ಹಾಜರು ಪಡಿಸಬೇಕಾಗುತ್ತದೆ. ಈ ಸಂದರ್ಭ ಪೊಲೀಸರಿಗೆ ಕೋವಿಡ್‌ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು.

70 ಸಿಬ್ಬಂದಿಗೆ ಪಾಸಿಟಿವ್‌:

ಜಿಲ್ಲೆಯಲ್ಲಿ ಕರ್ತವ್ಯ ನಿರತ 70 ಜನ ಪೊಲೀಸ್‌ ಸಿಬ್ಬಂದಿಗೆ ಸದ್ಯ ಕೋವಿಡ್‌ ಪಾಸಿಟಿವ್‌ ತಗುಲಿದ್ದು, ಒಬ್ಬರು ಸಾವಿಗೀಡಾಗಿರುವುದು ಆತಂಕಕ್ಕೆ ಎಡೆ ಮಾಡಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಮಪ್‌ ಅಗರವಾಲ್‌, ಕೋವಿಡ್‌ ಪೀಡಿತ ಪೊಲೀಸ್‌ ಸಿಬ್ಬಂದಿಗಳಲ್ಲಿ ಕೆಲವರು ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದು, ಚಿಕಿತ್ಸೆ ಪಡೆಯತ್ತಿದ್ದಾರೆ. ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದವರು ವಿವಿಧ ಆಸ್ಪತ್ರೆ ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

‘ಕೋವಿಡ್‌ನಿಂದ ಬಳಲುತ್ತಿದ್ದ ಬಸವನ ಬಾಗೇವಾಡಿ ಡಿವೈಎಸ್ಪಿ ಕಚೇರಿಯ ಹೆಡ್‌ ಕಾನ್‌ಸ್ಟೆಬಲ್‌ ಶಿವಪುತ್ರಪ್ಪ ಮಡಿವಾಳ ಢವಳಗಿ(49) ಅವರು ಸಾವಿಗೀಡಾಗಿದ್ದು, ಅವರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರವನ್ನು ಈಗಗಾಲೇ ನೀಡಲಾಗಿದೆ’ ಎಂದು ಅವರು ಹೇಳಿದರು.

ಪೊಲೀಸ್‌ ಸಿಬ್ಬಂದಿಗಳಲ್ಲಿ ಕೋವಿಡ್‌ ಕಾಣಿಸಿಕೊಂಡಿರುವುದರಿಂದ ಸಿಬ್ಬಂದಿ ಕೊರತೆಯಾಗದಂತೆ ಸರಿದೂಗಿಸಿಕೊಂಡು ಹೋಗಲು 300 ಹೋಂ ಗಾರ್ಡ್ಸ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಅಂತರ್‌ ಜಿಲ್ಲಾ ಮತ್ತು ಅಂತರರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ 25 ಚೆಕ್‌ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಕೋವಿಡ್‌ ಕರ್ಫ್ಯೂ ಇರುವುದರಿಂದ ಹೆಚ್ಚಿನ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೋವಿಡ್‌ ಹರಡದಂತೆ ತಡೆಯಲು ವಿಧಿಸಿರುವ ನಿಯಮಗಳನ್ನು ಉಲ್ಲಂಘಿಸುವವರ  ವಿರುದ್ಧ ಕ್ರಮಕೈಗೊಳ್ಳಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ರೆಮ್‌ಡಿಸಿವಿರ್‌ ಕಾಳ ಸಂತೆಯಲ್ಲಿ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಲು ಸಿಬ್ಬಂದಿ ಆದ್ಯತೆ ನೀಡಿದ್ದಾರೆ. ಕರ್ಫ್ಯೂ ಸಂದರ್ಭದಲ್ಲಿ ನಮ್ಮ ಕೆಲಸ ಹೆಚ್ಚಿರುತ್ತಿದೆ. ಹೀಗಾಗಿ ಕೋವಿಡ್‌ ಬಹುಬೇಗ ಹರಡುವ ಸಾಧ್ಯತೆ ಇದೆ ಎಂದು ಹೇಳಿದರು.

ಈಗಾಗಲೇ ಎಲ್ಲ ಸಿಬ್ಬಂದಿಗೂ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಕುಟುಂಬದವರಿಗೂ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಕರ್ಫ್ಯೂ ಡ್ಯೂಟಿಯಲ್ಲಿರುವ ಸಿಬ್ಬಂದಿಗೆ ಊಟ, ಉಪಹಾರದ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗಿದೆ. ಮಾಸ್ಕ್‌, ಹ್ಯಾಂಡ್‌ಗ್ಲೌಸ್‌, ಹ್ಯಾಂಡ್‌ ಸ್ಯಾನಿಟೈಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಪೊಲೀಸ್‌ ಠಾಣೆ, ಕ್ವಾಟರ್ಸ್‌ಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ ಎಂದು ತಿಳಿಸಿದರು.

****

ಪೊಲೀಸ್‌ ಸಿಬ್ಬಂದಿ ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ಕರ್ತವ್ಯ ನಿರ್ವಹಿಸುವ ಜೊತೆಗೆ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕು

–ಅನುಪಮ್‌ ಅಗರವಾಲ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ವಿಜಯಪುರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.