ಚಡಚಣ: ಚಡಚಣ ಎಂಬ ನೂತನ ತಾಲ್ಲೂಕು ಎಲ್ಲ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ ಎಂಬುದಕ್ಕೆ ತಾಲ್ಲೂಕಿನಾದ್ಯಂತ ಇರುವ ರಸ್ತೆಗಳೇ ಸಾಕ್ಷಿ.
ರಾಜ್ಯದ ಗಡಿ ಅಂಚಿಗೆ ಕೇವಲ 3 ಕಿ.ಮೀ ಅಂತರದಲ್ಲಿರುವ ಕರ್ನಾಟಕ -ಮಹಾರಾಷ್ಟ್ರ ರಾಜ್ಯಗಳ ಕೊಂಡಿಯಂತಿರುವ ಪ್ರಮುಖ ವ್ಯಾಪಾರಿ ಕೇಂದ್ರ ಚಡಚಣ. ಜವಳಿ ಉದ್ಯಮಕ್ಕೆ ರಾಜ್ಯ, ಅಂತರ್ ರಾಜ್ಯಗಳಲ್ಲಿ ಹೆಸರು ಮಾಡಿದ ಈ ಪಟ್ಟಣಕ್ಕೆ ಬರಲು ಹಲವು ಮಾರ್ಗಳಿವೆ. ಅವೆಲ್ಲವೂ ಹೆಸರಿಗಷ್ಟೆ, ಡಾಂಬರ್ ಕಾಣದ ಈ ರಸ್ತೆಗಳು ರಾಜ್ಯದ ಮಾನ ಮರ್ಯಾದೆಯನ್ನೆ ಹರಾಜು ಹಾಕುತ್ತಿವೆ.
ಇದಕ್ಕೆ ಸಾಕ್ಷಿ ಚಡಚಣ -ಶಿರಾಡೋಣ (ರಾಜ್ಯದ ಗಡಿ ಅಂಚಿನ ಪುಟ್ಟ ಗ್ರಾಮ) ಹೆದ್ದಾರಿ. ಈ ಹೆದ್ದಾರಿ ಮೂಲಕ ನಿತ್ಯ ಸಾವಿರಾರು ಸಣ್ಣ ಹಾಗೂ ಬೃಹತ್ ಗಾತ್ರದ ವಾಹನಗಳು ಸಂಚರಿಸುತ್ತವೆ. ಆದರೆ, ಸುಮಾರು 10 ವರ್ಷಗಳ ಹಿಂದೆ ಡಾಂಬರ್ ಕಂಡ ಈ ರಸ್ತೆ ಇಲ್ಲಿಯವರೆಗೆ ಡಾಂಬರ್ ಕಂಡಿಲ್ಲ. ಈ ರಸ್ತೆಯ ಮಧ್ಯದಲ್ಲಿ ತಗ್ಗು ಗುಂಡಿಗಳಿಲ್ಲ, ತಗ್ಗು ಗುಂಡಿಗಳ ಮಧ್ಯೆ ರಸ್ತೆ ಇದೆ. ಅದೂ ಸಹ ಕಿತ್ತು ಹೋದ ಕಲ್ಲು, ಮಣ್ಣಿನ ರಸ್ತೆ!
ಈ ಮಾರ್ಗವಾಗಿ ಮಹಾರಾಷ್ಟ್ರದ ಪಂಢರಪುರ, ಪುಣೆ, ಶಿರಡಿ, ಮುಂಬೈ ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸುವ ವಾಹನ ಚಾಲಕರಂತೂ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕು. ದ್ವಿಚಕ್ರ ವಾಹನ ಸವಾರರು ಈ ಬದಿಯಿಂದ ಆ ಬದಿಗೆ ಡೊಂಬರಾಟ ನಡೆಸಿ ಸಾಹಸ ತೋರಬೇಕು.
ಇದೇ ಮಾರ್ಗವಾಗಿ ನಾಗಠಾಣ ಮತಕ್ಷೇತ್ರದ ಹಾಲಳ್ಳಿ, ರೇವತಗಾಂವ, ಉಮರಜ, ದಸೂರ ಸೇರಿದಂತೆ ವಿವಿಧ ಹಳ್ಳಿಗಳಿಗೆ ಸಂಚರಿಸುವ ಜನಪ್ರತಿನಿಧಿಗಳಂತೂ ಜಾಣ ಕುರುಡರಂತೆ ತಮ್ಮ ಕಾರಿನಲ್ಲಿ ಕಿಟಕಿ ಮುಚ್ಚಿಕೊಂಡು ಸಂಚರಿಸುತ್ತಿರುವುದು ದುರ್ದೈವ. ರಸ್ತೆ ದುರಸ್ತಿ ಮಾಡಿ ಎಂದು ಶಿರಾಡೋಣ ಗ್ರಾಮಸ್ಥರು ಕೆಲವು ತಿಂಗಳ ಹಿಂದೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಆಗ ಅಧಿಕಾರಿಗಳು, ಜನಪ್ರಿನಿಧಿಗಳು ಕೊಟ್ಟ ಭರವಸೆ ಭರವಸೆಯಾಗಿಯೇ ಉಳಿದು ಹೋಯಿತು.
ಇನ್ನೂ ಗಡಿ ಅಂಚಿನ ಭೀಮಾ ನದಿ ತೀರದ ಗ್ರಾಮಗಳಿಗೆ ತೆರಳುವ ರಸ್ತೆ ಮಾರ್ಗಗಳಂತೂ ದೇವರಿಗೆ ಪ್ರೀತಿ, ಚಡಚಣ-ಉಮರಾಣಿ ರಸ್ತೆ, ಚಡಚಣ ನಿವರಗಿ ರಸ್ತೆ, ಚಡಚಣ ಉಮರಜ ರಸ್ತೆ, ಚಡಚಣದಿಂದ ಗೋಡಿಯಾಳ ಮಾರ್ಗವಾಗಿ ಹಲಸಂಗಿ, ಹಿಂಗಣಿ ಗ್ರಾಮಗಳಿಗೆ ತಲುಪುವ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಈ ರಸ್ತೆಗೆ ಪರ್ಯಾಯವಾಗಿ ಇರುವ ಮಾರ್ಗಗಳಲ್ಲಿ ಜನರು ಸಂಚರಿಸುತ್ತಿರುವುದು ಆ ರಸ್ತೆಗಳ ಸ್ಥಿತಿಗತಿಗಳಿಗೆ ಹಿಡಿದ ಕನ್ನಡಿಗಳಾಗಿವೆ.
ಚಡಚಣ-ಝಳಕಿ ವರೆಗಿನ ಸುಮಾರು 16 ಕಿ.ಮೀ ವರೆಗಿನ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಗೊಂಡು ಒಂದು ವರ್ಷ ಗತಿಸಿತು. ಆದರೂ ಅದು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಇನ್ನಾದರೂ ಈ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ತಮ್ಮ ಅಧಿಕಾರವಧಿ ಮುಗಿಯುವ ಮುನ್ನ, ಜನ ಸಾಮಾನ್ಯರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ತಾಲ್ಲೂಕಿನಾದ್ಯಂತ ಇರುವ ಹದಗೆಟ್ಟ ರಸ್ತೆಗಳ ದುರಸ್ತಿ, ಡಾಂಬರೀಕರಣಕ್ಕೆ ಮುಂದಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.
ನಮಗೆ ಸೇರಿದ್ದಲ್ಲ: ರಸ್ತೆಗಳ ಅಭಿವೃದ್ಧಿ ಕುರಿತು ಜೆಡಿಎಸ್ ಪಕ್ಷದ ಶಾಸಕರನ್ನು ಕೇಳಿದರೆ ಈ ರಸ್ತೆಗಳು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಹಲವಾರು ರಸ್ತೆಗಳ ಡಾಂಬರೀಕರಣಕ್ಕೆ ಶಾಸಕರು ಮಂಜೂರಾತಿ ಪಡೆದರೂ ಅವುಗಳನ್ನು ತಡೆ ಹಿಡಿಯಲಾಗಿದೆ ಎಂದು ಬಿಜೆಪಿ ಪಕ್ಷದ ಮುಖಂಡರ ಮೇಲೆ ಆಪಾದಿಸುತ್ತಾರೆ.
ಶಾಸಕರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕು. ಅದು ಬಿಟ್ಟು ಸುಮ್ಮನೆ ಬಿಜೆಪಿ ಪಕ್ಷ ಹಾಗೂ ಸರ್ಕಾರದ ಮೇಲೆ ಹರಿಹಾಯುವುದು ಬಿಡಬೇಕು ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ. ಇಬ್ಬರ ಜಗಳದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾತ್ರ ಶೂನ್ಯವಾಗಿರುವುದಂತು ಸತ್ಯ.
****
ಲೋಣಿ(ಬಿ.ಕೆ) ಗ್ರಾಮದಿಂದ ಚಡಚಣ ವರೆಗಿನ ರಸ್ತೆ ಸಂಪೂಣವಾಗಿ ಹದಗೆಟ್ಟು ಹೋಗಿದೆ. ಈ ಬಗ್ಗೆ ಹಲವು ಬಾರಿ ಶಾಸಕ, ಸಂಸದರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೇವಲ 10 ಕಿ.ಮೀ.ಅಂತರದ ಈ ಮಾರ್ಗ ಬಿಟ್ಟು, ಸುಮಾರು 17 ಕಿ.ಮೀ ರಸ್ತೆ ಮಾರ್ಗವಾಗಿ ಸಂಚರಿಸುವುದು ಅನಿವಾರ್ಯವಾಗಿದೆ.
–ಸಿದ್ದುಗೌಡ ಪಾಟೀಲ, ಗ್ರಾಮಸ್ಥ, ಲೋಣಿ (ಬಿ.ಕೆ)
***
ಚಡಚಣ– ಶಿರಾಡೋಣ ವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರ ₹ 15 ಕೋಟಿ ಮುಂಜೂರು ಮಾಡಿದೆ. ಟೆಂಡರ್ ಪ್ರಕ್ರೀಯೆ ನಡೆಯುತ್ತಿದೆ. 15 ದಿನಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
–ದಯಾನಂದ ಮಠ, ಎಇಇ, ಪಿಡಬ್ಲ್ಯುಡಿ, ಇಂಡಿ ಉಪವಿಭಾಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.