ಶನಿವಾರ, ಡಿಸೆಂಬರ್ 5, 2020
25 °C

ಕುರಿಗಾರರ ಸಮಸ್ಯೆಗೆ ಸ್ಪಂದಿಸದ ಸರ್ಕಾರ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ರಾಜ್ಯದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಕುರಿ, ಮೇಕೆಗಳನ್ನು ಕಳೆದುಕೊಂಡು ಕುರಿಗಾರರು ನಿರಾಶ್ರಿತರಾಗಿದ್ದಾರೆ. ಆದರೆ, ಕುರಿಗಾರರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ವಿಜಯಪುರ ಜಿಲ್ಲಾ ಕುರಿಗಾರರ ಸಂಘ ಆರೋಪಿಸಿದೆ.

ಮಳೆಯಿಂದ ಅನೇಕ ಕುರಿ ಮೇಕೆಗಳು ಪ್ರವಾಹದಲ್ಲಿ ಜೀವ ಕಳೆದುಕೊಂಡವು. ಆದರೆ, ಸರ್ಕಾರದ ಪರಿಹಾರ ದೊರೆತಿಲ್ಲ. ರಸ್ತೆ ಅಪಘಾತ, ರೈಲು ಡಿಕ್ಕಿ, ಕಳವು, ಕಾಡು ನಾಯಿಗಳ ಉಪಟಳ, ಕಳ್ಳತನ, ವಿಷ ಮಿಶ್ರಿತ ನೀರು ಕುಡಿದು, ವಿಷ ಆಹಾರ ತಿಂದು ಕುರಿಗಳು ಜೀವ ಕಳೆದುಕೊಂಡಿವೆ. ಆದರೆ, ಇದುವರೆಗೂ ಒಬ್ಬ ಕುರಿಗಾರನಿಗೂ ಸರ್ಕಾರದ ಸಹಾಯ ಧನ ಸಿಕ್ಕಿಲ್ಲ ಎಂದು ದೂರಿದೆ.

ಕುರಿಗಳು ಕಳುವುದಾರೆ ಅನೇಕ ಕಡೆ ಪೊಲೀಸರು ಕೇಸುಗಳನ್ನು ದಾಖಲಿಸಿಲ್ಲ. ಇಂತಹ ಪ್ರಕರಣದಲ್ಲಿ ಕುರಿಗಾರರು ನಿಸ್ಸಹಾಯಕರಾಗಿದ್ದಾರೆ. ವಿಪರೀತ ಮಳೆಯಿಂದ ಕುರಿಗಳು ನಲುಗಿ, ಅಶಕ್ತವಾಗಿವೆ. ಕಾಲು–ಬಾಯಿ ಬೇನೆ, ಸೀನು, ಕಂದಹಾಕುವುದು, ನೆಗಡಿ ಜೋರಾಗಿದ್ದು ಕೂಡಲೇ ಔಷಧೋಪಚಾರ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದೆ.

ನೆರೆಯಲ್ಲಿ ಕುರಿಗಳನ್ನು ಕಳೆದುಕೊಂಡ ಫಲಾನುಭವಿಗಳಿಗೆ ಕೂಡಲೇ ಒಂದು ಕುರಿ ಮೇಕೆಗೆ ₹15 ಸಾವಿರ  ಪರಿಹಾರ ಕೊಡಬೇಕು. ಇಲ್ಲದಿದ್ದರೆ ಕುರಿಗಾರರು ರಾಜ್ಯದಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಕುರಿಗಾರರ ಸಂಘದ ಅಧ್ಯಕ್ಷ ಭೀರಪ್ಪ ಜುಮನಾಳ, ಜಿಲ್ಲಾ ಮುಖಂಡ ಸೋಮನಾಥ ಕಳ್ಳಿಮನಿ, ನಗರ ಕುರುಬರ ಸಂಘದ ರಾಜು ಕಗ್ಗೋಡ, ಜಿಲ್ಲಾ ಕುರುಬರ ಕುರುಬರ ಸಂಘದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.