ಮುದ್ದೇಬಿಹಾಳ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಬಂದ ಪಟ್ಟಣದ ಯೋಧ ಸದಾಶಿವಯ್ಯ ಮಠ ಅವರನ್ನು ಇಲ್ಲಿನ ಮಾಜಿ ಸೈನಿಕರ ಸಂಘ, ಕುಟುಂಬಸ್ಥರು, ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಿಂದ ಹಳೇ ತಹಶೀಲ್ದಾರ್ ಕಚೇರಿಯ ಆವರಣದಲ್ಲಿರುವ ಕಾರ್ಗಿಲ್ ಸ್ಮಾರಕದ ವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಹುತಾತ್ಮ ಯೋಧ ದಾವಲ್‍ಸಾಬ್ ಕಂಬಾರ ಪುತ್ಥಳಿಗೆ ಹೂಮಾಲೆ ಅರ್ಪಿಸಿ ನಮಿಸಿದರು.
ಗ್ರಾಮ ಲೆಕ್ಕಾಧಿಕಾರಿ ಸಚೀನ ಗೌಡರ ಮಾತನಾಡಿ, ‘ದೇಶದಲ್ಲಿ ವೈರಿಗಳನ್ನು ಹಿಮ್ಮೆಟ್ಟಿಸಿ ನಾವು ನೆಮ್ಮದಿಯಿಂದ ಜೀವನ ನಡೆಸುವುದಕ್ಕೆ ಕಾರಣೀಭೂತವಾಗಿರುವ ಯೋಧರನ್ನು ಗೌರವಿಸಬೇಕು’ ಎಂದರು.
ನಿವೃತ್ತ ಯೋಧ ಸದಾಶಿವಯ್ಯ ಮಠ ಮಾತನಾಡಿ, ‘ದಾವಲಸಾಬ್ ಹುತಾತ್ಮರಾದ ದಿನದಂದೇ ನನಗೆ ಸೇನೆಯಲ್ಲಿ ಕೆಲಸಕ್ಕೆ ಸೇರಲು ಆದೇಶ ಬಂದಿತ್ತು. 1999ರಲ್ಲಿ ಮಹಾರಾಷ್ಟ್ರದ ತರಬೇತಿ ಮುಗಿಸಿಕೊಂಡು ಅಂಬಾಲಾ, ಸೂರತ್‍ಘಡ, ಹೈದ್ರಾಬಾದ್, ಜಮ್ಮು ಕಾಶ್ಮೀರದ ಸಾಂಬಾ, ಉರಿ, ಪಂಜಾಬ್‍ದ ಪಠಾಣಕೋಟ್ ಸೇರಿ 24 ವರ್ಷ ಸೇವೆ ಸಲ್ಲಿಸಿದ್ದೇನೆ. ಅತ್ಯಂತ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸಿದ್ದೇನೆ’ ಎಂದು ತಿಳಿಸಿದರು.
ಕಾರ್ಗಿಲ್ ಸ್ಮಾರಕ ನಿರ್ಮಾಣ ಸಮಿತಿ ಅಧ್ಯಕ್ಷ ಮಹಾಂತೇಶ ಬೂದಿಹಾಳಮಠ, ಉಪಾಧ್ಯಕ್ಷ ಸಿ.ಟಿ.ಕಲಾಲ್, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಚಯ್ಯ ಹಿರೇಮಠ, ನಿವೃತ್ತ ಯೋಧನ ತಂದೆ ಚನ್ನಬಸಯ್ಯ ಮಠ, ತಾಯಿ ಪಾರ್ವತಿ, ಪತ್ನಿ ಜ್ಯೋತಿ, ಶ್ರೀಶೈಲಯ್ಯ ಕಲ್ಯಾಣಮಠ, ಲಕ್ಷ್ಮೀ ಕಲ್ಯಾಣಮಠ, ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.