ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಕ್ತರಿಂದ ಅಧಿಕಾರ ದುರುಪಯೋಗ, ದೌರ್ಜನ್ಯ: ಸ್ನೇಹಲತಾ ಶೆಟ್ಟಿ ಆರೋಪ

ವಿಜಯಪುರ ಜಿಲ್ಲಾ ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಸ್ನೇಹಲತಾ ಶೆಟ್ಟಿ ಆರೋಪ
Last Updated 22 ಡಿಸೆಂಬರ್ 2021, 16:12 IST
ಅಕ್ಷರ ಗಾತ್ರ

ವಿಜಯಪುರ: ಮಹಾನಗರ ಪಾಲಿಕೆ ಆಯುಕ್ತರು ಅಧಿಕಾರ ದುರುಪಯೋಗಪಡಿಸಿಕೊಂಡು, ಅಮಾಯಕ ಯುವಕರ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ವಿಜಯಪುರ ಜಿಲ್ಲಾ ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ, ಯುವಕ ಸಮರ್ಥ ಸಿಂದಗಿ ಅವರ ತಾಯಿ ಸ್ನೇಹ ಲತಾ ಶೆಟ್ಟಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದ ದಿನ ಪಾಲಿಕೆ ಆಯುಕ್ತರು ತಮ್ಮ ಪತ್ನಿ, ಮಕ್ಕಳ ಜೊತೆ ಖಾಸಗಿ ವಾಹನದಲ್ಲಿ ಬಳಮಕರ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದರೇ ಹೊರತು, ಯಾವುದೇ ಸರ್ಕಾರಿ ಕೆಲಸದ ನಿಮಿತ್ತ ತೆರಳಿರಲಿಲ್ಲ ಎಂದು ಹೇಳಿದರು.

ಕಲ್ಯಾಣ ಮಂಟಪದ ಎದುರಿನ ರಸ್ತೆಯಲ್ಲಿ ಪಾಲಿಕೆ ಆಯುಕ್ತರ ಖಾಸಗಿ ಕಾರು ಮತ್ತು ನನ್ನ ಮಗ ಸಮರ್ಥ ಸಿಂದಗಿ ಸ್ನೇಹಿತ ಸುರೇಶ ಪೂಜಾರಿ ಬೈಕಿನ ನಡುವೆ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಆಯುಕ್ತರು ಸುರೇಶನಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ.ಅವರ ಪತ್ನಿ ಚಪ್ಪಲಿಯಿಂದ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಸಾಕ್ಷಾಧಾರಗಳು ಇದ್ದು, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.

ಸುರೇಶ ಪೂಜಾರಿ ಮೇಲೆ ಹಲ್ಲೆ ನಡೆಯುತ್ತಿರುವ ವಿಷಯ ತಿಳಿದ ತಕ್ಷಣ ನನ್ನ ಪುತ್ರ ಸಮರ್ಥ ಸಿಂದಗಿ, ಸುರೇಶನ ಅಣ್ಣ ಭೀರೇಶ ಪೂಜಾರಿ ಸ್ಥಳಕ್ಕೆ ಹೋಗಿ, ಜಗಳ ಬಿಡಿಸಿದ್ದಾರೆಯೇ ಹೊರತು ಆಯುಕ್ತರ ಮೇಲೆ ಹಲ್ಲೆ ನಡೆಸಿಲ್ಲ. ಇಡೀ ಪ್ರಕರಣ ವೈಯಕ್ತಿಕ ವಿಷಯವಾಗಿದೆಯೇ ಹೊರತು ಇದು ಯಾವುದೇ ಪೂರ್ವ ನಿಯೋಜಿತ ಕೃತ್ಯವಲ್ಲ ಎಂದರು.

ಪ್ರಕರಣ ನಡೆದ ಬಳಿಕ ಯುವಕರನ್ನು ಆದರ್ಶನಗರ ಠಾಣೆಗೆ ಪೊಲೀಸರು ಕರೆದೊಯ್ದು, ವಿಚಾರಣೆ ನಡೆಸುವ ವೇಳೆ ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಆಯುಕ್ತರು ಪೊಲೀಸರ ಎದುರೇ ಖುರ್ಚಿಯಿಂದ ಕಾಲು ಮುರಿಯುವ ರೀತಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆಯೂ ನಮ್ಮ ಬಳಿ ಅಗತ್ಯ ಸಾಕ್ಷಾಧಾರಗಳು ಇದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ತಿಳಿಸಿದರು.

ಆಯುಕ್ತರು ಯುವಕರ ಮೇಲೆ ತಾವೇ ಹಲ್ಲೆ ಮಾಡಿ, ಆಸ್ಪತ್ರೆಗೆ ದಾಖಲಾಗಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ, ನನ್ನ ಕೊಲೆಗೆ ಯತ್ನಿಸಿದ್ದಾರೆ ಎಂದು ಸುಳ್ಳು ದೂರು ದಾಖಲಿಸಿದ್ದಾರೆ. ಮಹಾನಗರ ಪಾಲಿಕೆ ನೌಕರರು, ಸಿಬ್ಬಂದಿಯಿಂದ ಪ್ರತಿದಿನ ತಮ್ಮ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಹಲ್ಲೆ ನಡೆಸಿರುವಆಯುಕ್ತರ ವಿರುದ್ಧ ದೂರು ದಾಖಲಿಸಲು ಆದರ್ಶ ನಗರ ಠಾಣೆಗೆ ಹೋದರೆ ಅವರು ದೂರು ದಾಖಲಿಸಿಕೊಂಡಿಲ್ಲ. ಯಾವುದೋ ಒತ್ತಡಕ್ಕೆ ಒಳಗಾಗಿ ದೂರು ದಾಖಲಿಸಿಕೊಂಡಿಲ್ಲ. ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಕರಣವನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಆಯುಕ್ತರು ಥಳಿಸುವಾಗಯುವಕರು ತಮ್ಮ ಕ್ಷೇತ್ರದ ಶಾಸಕರ ಗಮನಕ್ಕೆ ತರವುದಾಗಿ ಹೇಳಿದ್ದಾರೆಯೇ ಹೊರತು ಬೇರೇನೂ ಇಲ್ಲ. ಅವರ ಹೆಸರು ಹೇಳಿದ್ದರಲ್ಲಿ ತಪ್ಪೇನಿದೆ. ಶಾಸಕ ದೇವಾನಂದ ಚವ್ಹಾಣ ಅವರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಅವರ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ ಎಂದು ಹೇಳಿದರು.

ಶಿವಕುಮಾರ ಸಿಂದಗಿ, ಮಹಾದೇವಿ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT