ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಕುರಗಳ ನಿಯಂತ್ರಣಕ್ಕೆ ಕ್ರಮ

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೂಚನೆ
Last Updated 29 ಸೆಪ್ಟೆಂಬರ್ 2020, 16:36 IST
ಅಕ್ಷರ ಗಾತ್ರ

ವಿಜಯಪುರ: ರಸ್ತೆ ಅವಘಡ ತಪ್ಪಿಸಲು ಮತ್ತು ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಬೀದಿ ದನಗಳನ್ನು ಸಂಬಂಧಪಟ್ಟ ಮಾಲೀಕರು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳುವ ಜೊತೆಗೆ ಇಂತಹ ದನಗಳನ್ನು ಗೋಶಾಲೆಗೆ ರವಾನಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಡಾಡಿ ದನ ಕರುಗಳ ಮಾಲೀಕರಿಗೆ ಅಂತಿಮ ಗಡವು ಹಾಗೂ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ರಸ್ತೆಗಳಲ್ಲಿ ಅಲೆದಾಡುವಂತಹ ಬಿಡಾಡಿ ದನಗಳನ್ನು ಸರ್ಕಾರದಿಂದ ಸೌಲಭ್ಯ ಪಡೆಯುತ್ತಿರುವ ಗೋಶಾಲೆಗಳಿಗೆ ರವಾನಿಸಲಾಗುತ್ತದೆ ಎಂದು ದನಕರು ಮಾಲೀಕರಿಗೆ ತಿಳಿಹೇಳಬೇಕು. ಈ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳು, ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು, ಪ್ರಾಣಿದಯಾ ಸಂಘದ ಸದಸ್ಯರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪ್ರಾರಂಭಿಕ ಹಂತದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ನಂತರ ವಿವಿಧ ತಾಲ್ಲೂಕು ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ನಗರದಲ್ಲಿನ ಮೂರು ಗೋಶಾಲೆಗಳಿಗೆ ಸರ್ಕಾರದ ಸಹಾಯಧನ ಸೌಲಭ್ಯ ದೊರಕಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದರು.

ಯಶಸ್ವಿಗೆ ಸೂಚನೆ:

ಆಕ್ಟೋಬರ್‌ 1ರಿಂದ 2021ರ ಮೇ ವರೆಗೆ ನಡೆಯಲಿರುವ ಜಾನುವಾರುಗಳ ರಾಷ್ಟ್ರೀಯ ಕೃತಕ ಗರ್ಭಧಾರಣೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಈ ಯೋಜನೆಯಡಿ ಉತ್ಕೃಷ್ಟ ತಳಿಯ ದೇಸಿ ಹಾಗೂ ವಿದೇಶಿ ತಳಿಯ ರಾಸುಗಳ ಕೃತಕ ಗರ್ಭಧಾರಣೆ ಪ್ರಮಾಣವನ್ನು ಮತ್ತು ಉತ್ತಮ ತಳಿಯ ಕರುಗಳ ಜನನದೊಂದಿಗೆ ಜಾನುವಾರುಗಳ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರೈತರ ಆದಾಯ ಹೆಚ್ಚಿಸಲು ಜಿಲ್ಲೆಯಲ್ಲಿ ಒಟ್ಟು 500 ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದರು.

ಪ್ರತಿ ತಾಲ್ಲೂಕಿಗೆ 100 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಆಧಾರ್‌ ಸಂಖ್ಯೆ ಮಾದರಿಯಲ್ಲಿ ಪ್ರತಿ ಆಯ್ದ ಜಾನುವಾರುಗಳಿಗೆ ಕಿವಿಯೋಲೆ ಅಳವಡಿಸಿ, ರೈತರ ಮನೆ ಬಾಗಿಲಿಗೆ ಕೃತಕ ಗರ್ಭಧಾರಣೆ ಸೌಲಭ್ಯ ಕಲ್ಪಿಸುವಂತೆ ಅವರು ಸೂಚಿಸಿದರು.

ಲಸಿಕಾ ಕಾರ್ಯಕ್ರಮ:ಜಾನುವಾರುಗಳಿಗೆ ಕಾಲು, ಬಾಯಿ ಬೇನೆ ಲಸಿಕೆ ಕಾರ್ಯಕ್ರಮವು ಅಕ್ಟೋಬರ್ 2 ರಿಂದ ನವೆಂಬರ್ 15 ರ ವರೆಗೆ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ಒಟ್ಟು 3.70 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದ್ದು, ಯಾವುದೇ ಜಾನುವಾರು ಈ ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಲು ಸೂಚಿಸಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಹಾಗೀರದಾರ, ಜಿಲ್ಲೆಯಲ್ಲಿ ಒಟ್ಟು 49 ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯ್ಸಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಮಹೇಂದ್ರ ಕಾಪಸೆ, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸಂಜೀವ ದಿಕ್ಷೀತ್, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಅಶೋಕ ಅಲ್ಲಾಪೂರ, ಪ್ರಾಣಿ ದಯಾ ಸಂಘದ ಸದಸ್ಯರಾದ ದೀಪಕ್ ತಾಳಿಕೋಟಿ, ಸಿದ್ದು ನ್ಯಾಮಗೊಂಡ, ರಶ್ಮಿ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT