ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೋಣಿ ನದಿ ಹೂಳೆತ್ತಲು ಕ್ರಮ: ಉಮೇಶ ಕತ್ತಿ

ಮಳೆ, ಪ್ರವಾಹ ಪೀಡಿತ ಪ್ರದೇಶ ವೀಕ್ಷಿಸಿದ ಉಸ್ತುವಾರಿ ಸಚಿವ
Last Updated 9 ಆಗಸ್ಟ್ 2022, 14:56 IST
ಅಕ್ಷರ ಗಾತ್ರ

ವಿಜಯಪುರ: ಡೋಣಿ ನದಿ ಹೂಳೆತ್ತಬೇಕು ಎಂಬುದು ಇಂದು, ನಿನ್ನೆಯ ಬೇಡಿಕೆಯಲ್ಲ. ಮೂರ್ನಾಲ್ಕು ದಶಕದ ಬೇಡಿಕೆಯಾಗಿದೆ.ಪ್ರವಾಹ ತಡೆಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಈಗಾಗಲೇ ಸರ್ವೇ ನಡೆಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎರಡೂ ಸರ್ಕಾರಗಳ ಸಹಭಾಗಿತ್ವದಲ್ಲಿ ಹೂಳೆತ್ತುವ ಕಾರ್ಯ ಮಾಡಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ತಿಳಿಸಿದರು.

ತಿಕೋಟಾ ತಾಲ್ಲೂಕಿನ ಹರನಾಳ, ದಾಸ್ಯಾಳ, ಧನ್ಯಾಳ, ಕೋಟ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ಡೋಣಿ ನದಿ ಪ್ರವಾಹದಿಂದ ಆಗಿರುವ ಬೆಳೆ ಹಾನಿ, ಕಿತ್ತು ಹೋಗಿರುವ ರಸ್ತೆ ಹಾನಿ ಹಾಗೂ ಮನೆ ಹಾನಿ ಅಧಿಕಾರಿಗಳೊಂದಿಗೆ ಖುದ್ದು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡೋಣಿ ನದಿಯಲ್ಲಿ ಎರೆಮಣ್ಣು ಹೆಚ್ಚಿರುವುದರಿಂದ ಹೂಳು ತೆಗೆಯುವುದು ಹೇಗೆ ಎಂಬುದರ ಚಿಂತನೆ ನಡೆದಿದೆ. ಜಲಸಂಪನ್ಮೂಲ ಇಲಾಖೆಯಿಂದ ಅಗತ್ಯ ಮಾಹಿತಿ ಪಡೆದ ಬಳಿಕಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾಮಗಳ ಸ್ಥಳಾಂತರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮೂರು ಗ್ರಾಮಗಳನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಜನರು ಅಲ್ಲಿಗೆ ಹೋಗುತ್ತಿಲ್ಲ. ಮತ್ತಷ್ಟು ಗ್ರಾಮಗಳ ಜನರು ಸ್ಥಳಾಂತರ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಅಧಿಕ ಮಳೆ:ಜೂನ್‌ 1ರಿಂದ ಆಗಸ್ಟ್‌ 9ರ ವರೆಗೆ ಜಿಲ್ಲೆಯಲ್ಲಿ 310 ಎಂ.ಎಂ.ಮಳೆಯಾಗಿದೆ. ವಾಡಿಕೆಗಿಂತ ಶೇ 68 ರಷ್ಟು ಹೆಚ್ಚು ಮಳೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ ಪ್ರಮಾಣ 85 ಎಂಎಂ. ಆದರೆ, ಜಿಲ್ಲೆಯಲ್ಲಿ ಶೇ 283ರಷ್ಟು ಹೆಚ್ಚು ಮಳೆಯಾಗಿದೆ ಎಂದರು.

ಮಳೆ, ಪ್ರವಾಹದಿಂದ 217 ಮನೆಗಳು ಹಾನಿಗೊಳಗಾಗಿವೆ. ಹೊಲದಲ್ಲಿ ನೀರು ಇರುವುದರಿಂದ ಸರ್ವೇ ಕಾರ್ಯಕ್ಕೆ ಅಡಚಣೆಯಾಗಿದೆ. ಹೀಗಾಗಿ ಸರ್ವೇ ಆದ ಬಳಿಕ ಖಚಿತ ಮಾಹಿತಿ ಲಭಿಸಲಿದೆ ಎಂದರು.

ರಾಜ್ಯದಲ್ಲಿ ಅತಿವೃಷ್ಟಿ ನಿಭಾಯಿಸಲು ವಿವಿಧ ಜಿಲ್ಲೆಗಳಿಗೆ ಮುಖ್ಯಮಂತ್ರಿ ₹ 200 ಕೋಟಿ ಬಿಡುಗಡೆ ಮಾಡಿದ್ದಾರೆ. ವಿಜಯಪುರ ಸೇರಿದಂತೆ ಯಾವ ಜಿಲ್ಲೆಯನ್ನು ಕೈಬಿಟ್ಟಿಲ್ಲ. ಕೈಬಿಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ದ್ರಾಕ್ಷಿ, ದಾಳಿಂಬೆಗೆ ಅನುಕೂಲವಾಗಿದೆ. ಬಹಳ ಪ್ರಮಾಣದ ಬೆಳೆ ನಷ್ಠವಾಗಿಲ್ಲ. ಹೆಸರು, ಉದ್ದು, ತೊಗರಿ, ಜೋಳ, ಸೂರ್ಯಪಾನಕ್ಕೆ ಒಂದಷ್ಟು ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲ್‌ಗೌಡ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ‍ಪಾಟೀಲ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ್‌, ಜಿಲ್ಲಾ ಪ‍ಂಚಾಯ್ತಿ ಸಿಇಒ ರಾಹುಲ್‌ ಶಿಂಧೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಹಾಗೂ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

****

ಅತಿವೃಷ್ಟಿಯಿಂದ ಹಾನಿಯಾಗಿರುವ ಹೊಲಗಳಲ್ಲಿ ಮರಳಿ ಬಿತ್ತನೆ ಮಾಡಲು ರೈತರಿಗೆ ಬೀಜಗಳು ಬೇಕಾದರೆ ಸರ್ಕಾರ ಪೂರೈಕೆ ಮಾಡಲು ಕ್ರಮಕೈಗೊಳ್ಳಲಿದೆ
–ಉಮೇಶ ಕತ್ತಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT