ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಿ: ಶಾಸಕ ಶಿವಾನಂದ ಪಾಟೀಲ

ಗೋದಾಮು ಉದ್ಘಾಟನೆ: ಶಾಸಕ ಶಿವಾನಂದ ಪಾಟೀಲ
Last Updated 14 ಫೆಬ್ರುವರಿ 2022, 16:57 IST
ಅಕ್ಷರ ಗಾತ್ರ

ತಾಳಿಕೋಟೆ: ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಗಿಂತ ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅನುಸರಿಸಬೇಕು. ಏಕಬೆಳೆಗಿಂತ ವಿವಿಧ ಬೆಳೆ ಬೆಳೆಯುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಸಹಕಾರಿ ಸಂಘಗಳು ಹೆಚ್ಚಿನ ಸಂಖ್ಯೆಯ ರೈತರಿಗೆ ಸಾಲ ರೂಪದಲ್ಲಿ ಆರ್ಥಿಕ ನೆರವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ಅವರು ತಾಲ್ಲೂಕಿನ ಮಿಣಜಗಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ನೂತನ ಗೋದಾಮು ಉದ್ಘಾಟನೆ ನೆರವೇರಿಸಿ ಭಾನುವಾರ ಮಾತನಾಡಿದರು. ಮಿಣಜಗಿ ಸಹಕಾರ ಸಂಘ ಸ್ಥಾಪನೆಯಾಗಿ 10 ವರ್ಷಗಳ ಅವಧಿಯಲ್ಲಿ ಗಣನೀಯ ಅಭಿವೃದ್ಧಿ ಸಾಧಿಸಿದೆ. ತನ್ನ ಸದಸ್ಯರಿಗೆ ಕೃಷಿ ಮತ್ತು ಕೃಷಿಯೇತರ ಸಾಲಸೌಲಭ್ಯಗಳನ್ನು ನೀಡುವುದರೊಂದಿಗೆ ಲಾಭಯುತವಾಗಿ ಮುಂದುವರಿದಿದೆ. ಇಂತಹ ಸಂಘವು ಕೇವಲ 10 ವರ್ಷಗಳಲ್ಲಿ ಸ್ವಂತ ಉಗ್ರಾಣ ನಿರ್ಮಿಸಿ ತನ್ನ ವ್ಯವಹಾರ ಹೆಚ್ಚಿಸುವಲ್ಲಿ ಸಾಧನೆ ಮಾಡಿರುವುದು ವಿಶೇಷ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಾಣಕ್ಕೆ ವೈಯಕ್ತಿಕವಾಗಿ ಎರಡು ಲಕ್ಷ ನೀಡುವುದಲ್ಲದೇ ಅಪೆಕ್ಸ್‌ ಬ್ಯಾಂಕಿನಿಂದ ದೊರೆವ ಸಕಲ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು. 17-18 ಮತ್ತು 18-19ನೆಯ ಸಾಲಿನಲ್ಲಿನ ಒಟ್ಟು ₹ 80 ಲಕ್ಷ ಸಾಲಮನ್ನಾ, ಬೆಳೆಸಾಲ ₹1 ಕೋಟಿ, ಪಂಪಸೆಟ್ ಸಾಲ ₹ 33ಲಕ್ಷ, ಹಾಗೂ ಬಿನ್ ಶೇತ್ಕಿ ಸಾಲವಾಗಿ ₹ 1.80ಕೋಟಿ ಹಣ ನೀಡಿರುವುದು ಮಿಣಜಗಿ ಸಹಕಾರಿಯ ಉತ್ತಮ ಆಡಳಿತದ ಸಂಕೇತವಾಗಿದೆ. ಇದಕ್ಕೆ ಕಾರಣವಾದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

ಇಂಗಳೇಶ್ವರ ವಚನಶಿಲಾ ಮಂಟಪದ ಚನ್ನಬಸವಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಸಿ.ಎಸ್.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಾಲತವಾಡ ಶರಣ ವೀರೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎಸ್.ಪಾಟೀಲ, ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಬಿರಾದಾರ, ಪ್ರಮುಖರಾದ ಜಿ.ಎಸ್.ಕಶೆಟ್ಟಿ, ಎಚ್.ಬಿ.ಬಾಗೇವಾಡಿ, ನಿಂಗನಗೌಡ .ಪಾಟೀಲ ಬಳಗಾನೂರ, ವಿಡಿಸಿಸಿ ಬ್ಯಾಂಕ್ ಡಿಜಿಎಂ ಆರ್.ಎಂ.ಪಾಟೀಲ. ಆರ್.ಎಂ.ಬಣಗಾರ, ಶಶಿಧರ ಬೆಣ್ಣೂರ, ವೈ.ಬಿ.ಪಾಟೀಲ, ಪಿ.ಬಿ.ಪಾಟೀಲ, ಡಿ.ಬಿ.ಯಾಳವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT