ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಭರ್ತಿಯಾದ ಆಲಮಟ್ಟಿ ಜಲಾಶಯ

ಒಂದೇ ದಿನ ಹರಿದುಬಂತು ಏಳು ಟಿಎಂಸಿ ಅಡಿ ನೀರು
Last Updated 8 ಜುಲೈ 2022, 15:44 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಿದ್ದರಿಂದ ಆಲಮಟ್ಟಿ ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 75,207 ಕ್ಯುಸೆಕ್ ನೀರು (6.5 ಟಿಎಂಸಿ ಅಡಿ) ನೀರು ಹರಿದು ಬಂದಿದೆ.

123.081 ಟಿಎಂಸಿ ಅಡಿ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 63.844 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯ ಅರ್ಧ(515.08 ಮೀ) ಭರ್ತಿಯಾಗಿದೆ.

ಮಹಾರಾಷ್ಟ್ರ ಮಳೆ:

ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಗುರುವಾರಕ್ಕಿಂತ ಶುಕ್ರವಾರ ಇಳಿಮುಖವಾಗಿದೆ. ಕೊಯ್ನಾ 8.8 ಸೆಂ.ಮೀ, ನವಜಾ 12.2 ಸೆಂ.ಮೀ, ಮಹಾಬಳೇಶ್ವರ 12.1 ಸೆಂ.ಮೀ, ರಾಧಾನಗರಿಯಲ್ಲಿ 6.8 ಸೆಂ.ಮೀ ಮಳೆಯಾಗಿದೆ.

ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 56,333 ಕ್ಯುಸೆಕ್ ಇದ್ದು, ದೂಧಗಂಗಾ ನದಿಯಿಂದ 14,960 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕರ್ನಾಟಕದ ಕಲ್ಲೋಳ ಬ್ಯಾರೇಜ್ ಬಳಿ 71,293 ಕ್ಯುಸೆಕ್ ನೀರು ಕೃಷ್ಣ ನದಿಗೆ ಬಂದು ಸೇರುತ್ತಿದೆ.

ಶುಕ್ರವಾರ ಹಿಪ್ಪರಗಿ ಜಲಾಶಯದಿಂದ 69000 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. ಈ ನೀರು ಶನಿವಾರದೊಳಗೆ ಆಲಮಟ್ಟಿಗೆ ಹರಿದು ಬರಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಕಾಲುವೆಗೆ ನೀರು ಹೆಚ್ಚಿದ ಒತ್ತಡ:

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ತಾತ್ಕಾಲಿಕವಾಗಿ ನೀರು ಬಿಡಬೇಕೆನ್ನುವ ಕೂಗು ಹೆಚ್ಚಾಗಿದೆ.

ಆಲಮಟ್ಟಿಯಲ್ಲಿ ವಿವಿಧ ರೈತ ಸಂಘಟನೆಗಳು ಕಾಲುವೆಗೆ ನೀರು ಹರಿಸುವಂತೆ ನಿತ್ಯವೂ ಮನವಿ, ಪ್ರತಿಭಟನೆ ನಡೆಸುತ್ತಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆ ನಂತರ ನಡೆಸಿ, ಮೊದಲು ಕಾಲುವೆಗೆ ನೀರು ಬಿಡಿ ಎಂಬುದು ಅವರ ಆಗ್ರಹವಾಗಿದೆ.

517 ಮೀ.ವರೆಗೆ ಸಂಗ್ರಹ ಅಗತ್ಯ:

ಮುಂಗಾರು ಹಂಗಾಮಿಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಮುಂದಿನ ನಾಲ್ಕು ತಿಂಗಳ ಕಾಲ ನೀರು ಹರಿಸಬೇಕಿದೆ. ಅದಕ್ಕಾಗಿ ಕನಿಷ್ಠ 67 ಟಿಎಂಸಿ ಅಡಿ ನೀರು ಅಗತ್ಯ. ಕುಡಿಯುವ ನೀರು, ಭಾಷ್ಪಿಭವನ ಎಲ್ಲಾ ಸೇರಿ ಜಲಾಶಯದಲ್ಲಿ ಕನಿಷ್ಠ 85 ರಿಂದ 90 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಅಗತ್ಯ. 519.6 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517 ಮೀ. ವರೆಗಾದರೂ ನೀರು ಸಂಗ್ರಹವಾದ ನಂತರ ಕಾಲುವೆಗೆ ನೀರು ಹರಿಸಲಾಗುತ್ತದೆ.

ರೈತರ ಬೇಡಿಕೆಯ ಬಗ್ಗೆ ಐಸಿಸಿ ಸದಸ್ಯ ಕಾರ್ಯದರ್ಶಿ ಹಾಗೂ ಕೆಬಿಜೆಎನ್ ಎಲ್ ಎಂಡಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ಹೇಳಿದರು.

ಐಸಿಸಿ ರಚನೆ:

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನೀರು ಬಿಡುವ ಮಹತ್ವದ ನೀರಾವರಿ ಸಲಹಾ ಸಮಿತಿಯನ್ನು (ಐಸಿಸಿ) ಪುನರ್ ರಚಿಸಲಾಗಿದ್ದು, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಧ್ಯಕ್ಷರಾಗಿದ್ದಾರೆ. ಈಗ ಅವರ ಅಧ್ಯಕ್ಷತೆಯಲ್ಲಿಯೇ ಸಭೆ ನಡೆದು ಕಾಲುವೆಗೆ ನೀರು ಬಿಡಲು ನಿರ್ಧರಿಸಬೇಕಿದೆ.

ಪೂರ್ಣಗೊಳ್ಳದ ಕಾಮಗಾರಿ:

ಕಾಲುವೆಯ ಹೂಳು ತೆಗೆಯುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ನಾನಾ ಕಡೆ ಕಾಲುವೆಯ ಮೇಲೆ ಬೆಳೆದಿರುವ ಜಂಗಲ್ ಕಟ್ಟಿಂಗ್ ಸೇರಿ ಕೆಲ ಕಾಮಗಾರಿ ಬಾಕಿಯಿದ್ದು, ಇನ್ನೂ 10 ದಿನದೊಳಗೆ ಪೂರ್ಣಗೊಳ್ಳುತ್ತದೆ.

ಬಹುತೇಕ ಕಾಲುವೆಗಳಿಗೆ ಈ ಬಾರಿ ವರ್ಷ ಪೂರ್ತಿ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಇದರಿಂದ ಕಾಲುವೆಯ ನೀರು ಹರಿಯುವಿಕೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೆಬಿಜೆಎನ್ ಎಲ್ ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ. ಬಸವರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT