ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ, ನಾರಾಯಣಪುರ: ಎಲ್ಲ ಕಾಲುವೆಗಳಿಗೆ ನೀರು

ಸದ್ಯಕ್ಕಿಲ್ಲ ವಾರಾಬಂಧಿ; ನಿರಂತರ ಹರಿಯಲಿದೆ ನೀರು
Last Updated 26 ಜುಲೈ 2022, 13:27 IST
ಅಕ್ಷರ ಗಾತ್ರ

ಆಲಮಟ್ಟಿ(ವಿಜಯಪುರ): ಕೃಷ್ಣಾ ಅಚ್ಚುಕಟ್ಟು ವ್ಯಾಪ್ತಿಯ ಕಾಲುವೆಗಳಿಗೆ ಜುಲೈ 26 ರಿಂದ ನವೆಂಬರ್‌ 24 ರವರೆಗೆ 120 ದಿನಗಳ ಕಾಲ ಮುಂಗಾರು ಹಂಗಾಮಿಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ)ಸಭೆಯಲ್ಲಿ ನಿರ್ಣಯಿಸಲಾಯಿತು.‌

ಆಲಮಟ್ಟಿಯ ಕೆಬಿಜಿಎನ್‌ಎಲ್‌ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರನಡೆದಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಸಿಸಿ ಅಧ್ಯಕ್ಷರೂ ಆದ ಸಚಿವ ಸಿ.ಸಿ. ಪಾಟೀಲ, ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ವ್ಯಾಪ್ತಿಯ ಎಲ್ಲಾ ಕಾಲುವೆಗಳಿಗೂ ಮಂಗಳವಾರದಿಂದಲೇ ನೀರು ಹರಿಸಲಾಗುವುದು ಎಂದು ತಿಳಿಸಿದರು.

ವಾರಾಬಂಧಿ:

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವ ತನಕವೂ ಎಲ್ಲ ಕಾಲುವೆಗಳಿಗೂ ನಿರಂತರ (ದಿನನಿತ್ಯವೂ) ನೀರು ಹರಿಸಲಾಗುವುದು, ಒಳಹರಿವು ಸ್ಥಗಿತಗೊಂಡ ನಂತರ 14 ದಿನ ಚಾಲು ಹಾಗೂ 8 ದಿನ ಬಂದ್ ಪದ್ಧತಿಯ ವಾರಾಬಂಧಿ ಅನುಸರಿಸಿ ನೀರು ಹರಿಸಲಾಗುವುದು ಎಂದರು.

ನವೆಂಬರ್‌ನಲ್ಲಿ ಐಸಿಸಿ ಸಭೆ ಕರೆದು ಹಿಂಗಾರು ಹಂಗಾಮಿಗೆ ಎಲ್ಲಿಯವರೆಗೆ ನೀರು ಹರಿಸಬೇಕೆನ್ನುವುದನ್ನು ತೀರ್ಮಾನಿಸಲಾಗುವುದು ಎಂದರು.

ನೀರಿನ ಸಂಗ್ರಹ:

ಸದ್ಯ ಆಲಮಟ್ಟಿಯಲ್ಲಿ ಬಳಕೆಯೋಗ್ಯ 84.642 ಟಿಎಂಸಿ ಅಡಿ ಹಾಗೂ ನಾರಾಯಣಪುರ ಜಲಾಶಯದಲ್ಲಿ 15.67 ಟಿಎಂಸಿ ಅಡಿ ನೀರು ಸೇರಿ ಮುಂಗಾರು ಹಂಗಾಮಿಗೆ ಜುಲೈ 26ಕ್ಕೆ 100.312 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 40.129 ಟಿಎಂಸಿ ಅಡಿ ಹೆಚ್ಚಿಗೆ ನೀರು ಸಂಗ್ರಹವಿದೆ ಎಂದು ಪಾಟೀಲ ತಿಳಿಸಿದರು.

ಕುಡಿಯುವ ನೀರು, ಕೈಗಾರಿಕೆ, ಭಾಷ್ಪೀಕರಣ ಸೇರಿ ಇನ್ನೀತರ ಬಳಕೆಗೆ ಎರಡು ಜಲಾಶಯದಲ್ಲಿ 13 ಟಿ.ಎಂಸಿ ಅಡಿ, ನೀರಾವರಿಗೆ 67 ಟಿಎಂಸಿ ಅಡಿ ಸೇರಿ 80 ಟಿಎಂಸಿ ಅಡಿ ನೀರು ಅಗತ್ಯವಿದೆ. ಮುಂಗಾರು ಹಂಗಾಮಿಗೆ ನೀರು ಹರಿಸಲು ತೊಂದರೆಯಿಲ್ಲ ಎಂದು ಪಾಟೀಲ ತಿಳಿಸಿದರು.

5.34 ಲಕ್ಷ ಹೆಕ್ಟೇರ್ ಗೆ ನೀರು:

2022-23 ನೇ ಮುಂಗಾರು ಹಂಗಾಮಿಗೆ 6.67 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ ಶೇ 80ರಷ್ಟು ಕ್ಷೇತ್ರಕ್ಕೆ ಅಂದರೇ 5.34 ಲಕ್ಷ ಹೆಕ್ಟೇರ್‌ಗೆ ಹಾಗೂ ದ್ವಿಋತು ಹಂಗಾಮಿನ ಬೆಳೆಗಳನ್ನು ಬೆಳೆಯಲು ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.

ಆಲಮಟ್ಟಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಪ್ರತಿ ದಿನ 0.10 ಟಿಎಂಸಿ ಅಡಿ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 1.06 ಟಿಎಂಸಿ ಅಡಿ ನೀರು ಸೇರಿ ನಿತ್ಯ 1.26 ಟಿಎಂಸಿ ಅಡಿ ನೀರು ಅಗತ್ಯವಿದೆ. ಟೇಲ್ ಎಂಡ್‌ಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಟೆಂಡರ್ ಸದ್ಯಕ್ಕಿಲ್ಲ:

ಕಾಲುವೆಯ ಹೂಳು ತೆಗೆಯುವ ಕ್ಲೋಜರ್ ಕಾಮಗಾರಿ ನಿರ್ವಹಣೆಯ ಬಗ್ಗೆ ದೂರುಗಳ ಬಗ್ಗೆಯೂ ಚರ್ಚಿಸಲಾಗಿದ್ದು, ಸದ್ಯಕ್ಕೆ ಈ ಕಾಮಗಾರಿಯ ಯಾವುದೇ ಟೆಂಡರ್ ಕರೆಯುವುದಿಲ್ಲ. ಮುಂಗಾರು ಹಂಗಾಮಿಗೆ ನೀರು ಹರಿಸುವ ಅವಧಿ ಪೂರ್ಣಗೊಂಡ ನಂತರ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದು ಪಾಟೀಲ ಹೇಳಿದರು.

ಸಚಿವ ಉಮೇಶ ಕತ್ತಿ, ಶಾಸಕರಾದ ಎ.ಎಸ್. ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ವೀರಣ್ಣ ಚರಂತಿಮಠ, ರಾಜುಗೌಡ, ಯಶವಂತರಾಯಗೌಡ ಪಾಟೀಲ, ಕೆ.ಶಿವನಗೌಡ ನಾಯಕ, ಬಸನಗೌಡ ದದ್ದಲ್, ಅಮರೇಗೌಡ ಪಾಟೀಲ ಬಯ್ಯಾಪುರ, ಡಿ.ಎಸ್. ಹೂಲಗೇರಿ, ಕೆಬಿಜೆಎನ್‌ಎಲ್ ಎಂಡಿ ಬಿ.ಎಸ್. ಶಿವಕುಮಾರ, ಮುಖ್ಯ ಎಂಜಿನಿಯರ್ ಪ್ರದೀಪ ಮಿತ್ರ ಮಂಜುನಾಥ, ಎಚ್. ಸುರೇಶ, ಜಿಲ್ಲಾಧಿಕಾರಿ ವಿಜಯಮಹಾಂತೇಶ, ಪಿ.ಸುನೀಲ್‌ಕುಮಾರ್‌ ಇದ್ದರು.

ಗುತ್ತಿ ಬಸವಣ್ಣ: ಆ.15 ರಿಂದ ನೀರು

ಇಂಡಿ ಏತ ನೀರಾವರಿ ಯೋಜನೆ (ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ)ಯಲ್ಲಿ ಒಟ್ಟಾರೇ 8 ಪಂಪಸೆಟ್‌ಗಳಿವೆ. ಅದರಲ್ಲಿ 7 ಪಂಪ್‌ ಸೆಟ್‌ಗಳ ದುರಸ್ತಿ ಕಾರ್ಯವನ್ನು ಜ್ಯೋತಿ ಇಂಡಸ್ಟ್ರೀಸ್‌ಗೆ ವಹಿಸಲಾಗಿದೆ. ಅವುಗಳ ದುರಸ್ತಿಯ ಬಗ್ಗೆ ಮೇಲ್ವಿಚಾರಣೆ ನಡೆಸಲು ಇಬ್ಬರೂ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರಿಗೆ ₹ 7.7 ಕೋಟಿ ಮೊತ್ತದ ಗುತ್ತಿಗೆ ನೀಡಲಾಗಿದ್ದು, ಮುಂದಿನ ಐದು ವರ್ಷಗಳ ನಿರ್ವಹಣೆಯನ್ನು ಅವರಿಗೆ ನೀಡಲಾಗಿದೆ.

ಇದೇ ಆ.2 ಕ್ಕೆ ಮೊದಲ, ಆ.7ಕ್ಕೆ ಎರಡನೇ, ಆ.13 ಕ್ಕೆ ಮೂರನೇಯ ಹಾಗೂ ಆ.15 ಕ್ಕೆ 4 ನೇ ಪಂಪಸೆಟ್ ಜಾಕ್‌ವೆಲ್ ನಲ್ಲಿ ಕೂಡಿಸಲಾಗುತ್ತದೆ. ಈ ನಾಲ್ಕು ಪಂಪಸೆಟ್‌ಗಳ ಸಹಾಯದಿಂದ ಆ ಯೋಜನೆಯ ಕಾಲುವೆಗಳಿಗೆ ಆಗಸ್ಟ್‌ 15 ರಿಂದ ನೀರು ಹರಿಸಲಾಗುತ್ತದೆ. ಎಲ್ಲ 7 ಪಂಪಸೆಟ್ ಗಳು ಅಕ್ಟೋಬರ್ 7 ರೊಳಗೆ ಕೂಡಿಸಿ ಕಾರ್ಯಾರಂಭಗೊಳ್ಳಲಿದೆ ಎಂದು ಸಿ.ಸಿ. ಪಾಟೀಲ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT