ಆಲಮೇಲ: ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಎರಡು ವರ್ಷ ಎಂಟು ತಿಂಗಳಾದರೂ ಹೊಸ ಆಡಳಿತ ಇನ್ನೂ ಅಸ್ತಿತ್ವಕ್ಕೆ ಬಾರದೇ ಅಭಿವೃದ್ದಿ ಕಾರ್ಯಗಳಿಗೆ ತೊಂದರೆಯಾಗಿತ್ತು. ತಹಶೀಲ್ದಾರ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಅಧ್ಯಕ್ಷ ಸ್ಥಾನ ಹಿಂದುಳಿದ(ಅ) ಉಪಾಧ್ಯಕ್ಷ ಸ್ಥಾನ(ಬ) ಮೀಸಲಾಗಿದ್ದು, ಇನ್ನು ಕೆಲವು ದಿನಗಳಲ್ಲಿ ಹೊಸ ಸಾರಥ್ಯಕ್ಕೆ ಆಯ್ಕೆ ನಡೆಯಲಿದೆ.
ಆಲಮೇಲ ಪಟ್ಟಣ ಪಂಚಾಯಿತಿಗೆ ಒಟ್ಟು 19 ಸದಸ್ಯರು ಇದ್ದು, ಅಧಿಕಾರ ಹಿಡಿಯಲು 10 ಸ್ಥಾನಗಳು ಬೇಕು. ಆದರೆ, ಎರಡೂ ಪಕ್ಷಕ್ಕೆ 10 ಸ್ಥಾನಗಳ ಬಲವಿಲ್ಲ. ಬಿಜೆಪಿ 9, ಕಾಂಗ್ರೆಸ್ 7, ಪಕ್ಷೇತರ 3 ಸ್ಥಾನ ಪಡೆದುಕೊಂಡಿವೆ. ಪಕ್ಷೇತರರಲ್ಲಿ ಒಬ್ಬರು ಅಧ್ಯಕ್ಷ ಸ್ಥಾನದ ಮಿಸಲಾತಿಗೆ ಒಳಪಟ್ಟರೂ ಅವರೂ ಪ್ರಯತ್ನದಿಂದ ಹಿಂದೆ ಇದ್ದಾರೆ. ಇಬ್ಬರು ಪಕ್ಷೇತರ ಸದಸ್ಯರು ಮಿಸಲಾತಿಗೆ ಒಳಪಡುವುದಿಲ್ಲ. ಹೀಗಾಗಿ ಇದರ ಲಾಭ ಪಡೆದುಕೊಂಡು ಅಧಿಕಾರ ಹಿಡಿಯಬೇಕು ಎಂದುಕೊಂಡ ಬಿಜೆಪಿ, ಕಾಂಗ್ರೆಸ್ ಪಕ್ಷದ ಮುಖಂಡರು ಪಕ್ಷೇತರ ಸದಸ್ಯರ ಬೆಂಬಲಕ್ಕಾಗಿ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿವೆ.
ಪಕ್ಷೇತರರು ಕಿಂಗ್ ಮೇಕರ್
ಮೂವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಹಾಗೂ ಬಿಜೆಪಿಯವರ ನಿರ್ಣಯದ ದಾರಿ ಕಾಯುತ್ತಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಇಬ್ಬರಲ್ಲಿ ಒಬ್ಬರಿಗೆ ನಮ್ಮ ಬೆಂಬಲ ನೀಡಿದರೆ ನಮ್ಮ ಮೂವರಲ್ಲಿ ಒಬ್ಬರೂ ಉಪಾಧ್ಯಕ್ಷ ಆಗುವುದು ಖಚಿತ ಎಂದು ಪಕ್ಷೇತರ ಸದಸ್ಯರು ಲೆಕ್ಕಾಚಾರ ಹಾಕುತ್ತಿದ್ದಾರೆ.
ಹಿಂದೆ ಇಲ್ಲಿ ಬಿಜೆಪಿ 5 ವರ್ಷ ಅಧಿಕಾರ ನಡೆಸಿದೆ, ಆಗ ಬಿಜೆಪಿಗೆ ಸ್ಪಷ್ಟ ಬಹುಮತ ಇತ್ತು. ಆದರೆ, ಈಗ 9 ಸ್ಥಾನ ಗೆದ್ದುಕೊಂಡ ಬಿಜೆಪಿ ಒಬ್ಬ ಪಕ್ಷೇತರ ಸದಸ್ಯನನ್ನು ಸೆಳೆದುಕೊಂಡು 10 ಸದಸ್ಯರ ಬಲದೊಂದಿಗೆ ಸುಲಭವಾಗಿ ಅಧಿಕಾರದ ಗದ್ದುಗೆ ಹಿಡಿಯಬೇಕು ಎಂದು ಹವಣಿಸುತ್ತಿದೆ. ಆದರೆ, ಪಕ್ಷೇತರ ಸದಸ್ಯರು ಯಾವ ಪಕ್ಷಕ್ಕೆ ಬೆಂಬಲ ಕೊಡುತ್ತಾರೋ ಅವರಿಗೆ ಜಯದ ಹಾದಿ ಸುಲಭವಾಗಲಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷ 7 ಸ್ಥಾನ ಪಡೆದುಕೊಂಡಿದೆ. ಆದರೆ, ಅಧಿಕಾರ ಹಿಡಿಯಲು 10 ಸದಸ್ಯರ ಬೆಂಬಲಬೇಕು. ಅದಕ್ಕಾಗಿ ಮಿಸಲಾತಿ ಪ್ರಕಟಗೊಂಡ ನಂತರ ಪಕ್ಷೇತರ ಸದಸ್ಯರನ್ನು ಸೆಳೆದು ಅಧಿಕಾರ ಗದ್ದುಗೆಗೆ ಹವಣಿಸುತ್ತಿದೆ.
ಸಿಂದಗಿ ಶಾಸಕ ಅಶೋಕ ಮನಗೂಳಿ ಅವರ ಮತವು ಇದ್ದು, ಅವರು ಕಾಂಗೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಧೀಕ್ ಸುಂಬಡ ಹಾಗೂ ವಿಜಯಲಕ್ಷ್ಮೀ ಜರಕರ ಇಬ್ಬರೂ ಪ್ರಯತ್ನದಲ್ಲಿ ತೊಡಗಿದ್ದಾರೆ.
ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಣಮಂತ ಹೂಗಾರ, ಬಿಸ್ಮೀಲ್ಲಾ ಮಸಳಿ ಪೈಪೋಟಿ ಜೋರಾಗಿದೆ. ಮಾಜಿ ಶಾಸಕ ರಮೇಶ ಭೂಸನೂರ ಅವರು ಅವರು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಹುಮ್ಮಸ್ಸನಲ್ಲಿದ್ದಾರೆ.
ಸಮನ್ವಯ ಸಮಿತಿ: ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಸದಸ್ಯ ಅಶೋಕಗೌಡ ಕೊಳಾರಿ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚನೆಯಾಗಿದೆ ಎಂಬ ಮಾಹಿತಿಯಿದ್ದು, ಎರಡೂ ಪಕ್ಷಗಳು ಪಟ್ಟಣದ ಅಭಿವೃದ್ದಿಗೆ ಬದ್ಧರಾಗಿ ತಲಾ 15 ತಿಂಗಳು ಅಧಿಕಾರ ಹಂಚಿಕೆ ಮಾಡಬೇಕು, ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯಬಾರದು ಎಂದು ಚರ್ಚಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಎರಡೂ ಪಕ್ಷದ ಸದಸ್ಯರ ಒಪ್ಪಿಗೆ ಇದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.