ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳಿಯದ ಪ್ರೇಕ್ಷಕ; ಸೊರಗಿದ ಸಿನಿಮಾ ಮಂದಿರ!

ಆಧುನಿಕರಣವಾಗದ ಸಿನಿಮಾ ಮಂದಿರಗಳು; ಪ್ರೇಕ್ಷಕರಿಗೆ ಸೌಲಭ್ಯಗಳ ಕೊರತೆ
Last Updated 5 ನವೆಂಬರ್ 2022, 19:30 IST
ಅಕ್ಷರ ಗಾತ್ರ

ವಿಜಯಪುರ: ದಶಕಗಳ ಹಿಂದೆ ಜನರು ಮನರಂಜನೆಗಾಗಿ ಸಿನಿಮಾ ನೋಡಲು ಪೇಟ, ಪಟ್ಟಣ, ನಗರಗಳಲ್ಲಿರುವ ಚಿತ್ರ ಮಂದಿರಗಳನ್ನು ಹುಡುಕಿಕೊಂಡು ಬರುವುದು ಸಾಮಾನ್ಯವಾಗಿತ್ತು.

ಸಾಧಾರಣ ಸಿನಿಮಾಗಳೂ ಶತಕ ಬಾರಿಸುತ್ತಿದ್ದವು. ಜನಪ್ರಿಯ ನಟ, ನಟಿಯರ ಸಿನಿಮಾಗಳಂತೂ ಶತ ದಿನೋತ್ಸವ ಆಚರಿಸುವುದರಲ್ಲಿ ಯಾವುದೇ ಅನುಮಾನಗಳಿರಲಿಲ್ಲ. ಇದರ ಲಾಭ ಪಡೆದ ಸಿನಿಮಾ ಮಂದಿರಗಳ ಮಾಲೀಕರು ಕೈಯಲ್ಲಿರುವ ಎಲ್ಲ ಬೆರಳಿಗೆಉಂಗುರ ಮಾತ್ರವಲ್ಲದೇ, ಕೊರಳಲ್ಲೂ ಚಿನ್ನದ ಸರ ಹಾಕಿಕೊಂಡು ತಮ್ಮ ಸಿರಿವಂತಿಕೆ ಪ್ರದರ್ಶಿಸುತ್ತಿದ್ದರು.ಹೀಗಾಗಿ, ಜಿಲ್ಲಾ ಕೇಂದ್ರ ವಿಜಯಪುರ ಮಾತ್ರವಲ್ಲದೇ ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟೆ, ಚಡಚಣಗಳಂತ ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಹತ್ತಾರು ಸಿನಿಮಾ ಮಂದಿರಗಳು ತಲೆ ಎತ್ತಿ, ಮಾಲೀಕರಿಗೆ ಲಾಭ ತಂದುಕೊಟ್ಟಿದ್ದವು.

ಆದರೆ, ಪ್ರಸ್ತುತ ದಿನಮಾನ ಬದಲಾಗಿದೆ.ಟಿವಿ, ಮೊಬೈಲ್‌ಗಳ ಹಾವಳಿಯಿಂದಾಗಿ ಜನರಿಗೆ ಬೇಕು, ಬೇಡವಾದ ಎಲ್ಲ ಬಗೆಯ ಮನರಂಜನೆಗಳು ಮನೆಯಲ್ಲೇ, ಅಂಗೈನಲ್ಲೇ ಲಭಿಸುತ್ತಿರುವುದರಿಂದ ಸಿನಿಮಾ ಮಂದಿರಗಳತ್ತ ಪ್ರೇಕ್ಷಕರು ಸುಳಿಯುತ್ತಿಲ್ಲ. ಪರಿಣಾಮ ಸಿನಿಮಾ ಮಂದಿರಗಳು ಸೊರಗಿವೆ. ಅಲ್ಲದೇ, ಮುಚ್ಚುವ ಭೀತಿ ಎದುರಿಸುತ್ತಿವೆ. ಅನೇಕ ಸಿನಿಮಾ ಮಂದಿರಗಳು ಈಗಾಗಲೇ ಮುಚ್ಚಿವೆ!

ದಶಕದ ಹಿಂದೆ ಯಾವುದೇ ಸಿನಿಮಾ ಇದ್ದರೂ ವೀಕ್ಷಿಸಲು ಪ್ರೇಕ್ಷಕರು ಬರುತ್ತಿದ್ದರು. ಆದರೆ, ಈಗ ಅತ್ಯುತ್ತಮ ಸಿನಿಮಾ ನೋಡಲು ಜನ ಬರುತ್ತಿಲ್ಲ. 600 ರಿಂದ 800 ಜನ ಕೂರುವ ಸಾಮಾರ್ಥ್ಯ ಇರುವ ಸಿನಿಮಾ ಮಂದಿರಗಳಲ್ಲಿ ಒಂದು ಪ್ರದರ್ಶನದಲ್ಲಿ ಕೇವಲ 10, 20, 50 ಹೆಚ್ಚೆಂದರೆ 100 ಜನ ಪ್ರೇಕ್ಷಕರು ಬರುತ್ತಿರುವುದು ಸಿನಿಮಾ ಮಂದಿರಗಳ ಮಾಲೀಕರನ್ನು ಆತಂಕಕ್ಕೆ ಈಡು ಮಾಡಿದೆ.ಇತ್ತೀಚೆಗಂತೂ ಹೆಸರಾಂತ ನಾಯಕರ ಸಿನೆಮಾಗಳಿಗೆ ಮಾತ್ರ ಥಿಯೇಟರ್ ವಾರ ತುಂಬಿರುತ್ತದೆ. ನಂತರದಲ್ಲಿ ಬಿಕೋ ಎನ್ನುತ್ತವೆ.

ಈಗ ಸಿನೆಮಾ ವ್ಯವಹಾರಗಳೆಲ್ಲ ಆನ್‌ಲೈನ್ ಆಗಿವೆ. ಲಾಭವಿದ್ದರೆ ಹಂಚಿಕೆದಾರನಿಗೆ ಪಾಲು ಹೆಚ್ಚು, ನಷ್ಠವಾದರೆ ಅದರಲ್ಲಿ ಅರ್ಧ ಮಾತ್ರ ನೀಡುತ್ತಾನೆ.ಸದ್ಯ ಲಾಭಕ್ಕಿಂತ ನಷ್ಟವೇ ಹೆಚ್ಚು.

ಕೋವಿಡ್‌ ಸಂದರ್ಭದಲ್ಲಿ ಒಂದೂವರೆ ವರ್ಷ ಸಿನಿಮಾ ಮಂದಿರಗಳು ಸಂಪೂರ್ಣ ಬಂದ್‌ ಆಗಿತ್ತು. ಸಂಪೂರ್ಣ ನಷ್ಟವಾಗಿದೆ. ಪ್ರತಿ ವರ್ಷ ಮಹಾನಗರ ಪಾಲಿಕೆಗೆ ₹ 2 ಲಕ್ಷ ಕಟ್ಟಡ ತೆರಿಗೆ ಪಾವತಿಸಬೇಕು. ನಿರ್ವಹಣೆ ಮಾಡುವುದದು ಕಷ್ಟ. ಕಲೆಕ್ಷನ್‌ ಆಗುತ್ತಿಲ್ಲ. ಚಿತ್ರಮಂದಿರಗಳಿಗೆ ಭವಿಷ್ಯವಿಲ್ಲ ಎನಿಸುತ್ತದೆ. ವ್ಯವಹಾರ ಬಂದ್‌ ಆಗುವ ಪರಿಸ್ಥಿತಿ ಎದುರಾಗಿದೆ. ಸಿನಿಮಾ ಟಾಕೀಸ್‌ ಮಾರಾಟ ಮಾಡಬೇಕು ಎಂದು ಕೊಂಡಿದ್ದೇನೆ ಎನ್ನುತ್ತಾರೆ ವಿಜಯಪುರದ ಅಮೀರ್‌ ಟಾಕೀಸ್‌ ಮಾಲೀಕತಾಜುದ್ದೀನ್‌ ಬೀಳಗಿ.

ಯಾವ ಸಿನಿಮಾ ಮಂದಿರಗಳಿಗೂ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಬರುತ್ತಿಲ್ಲ. ಚಿತ್ರಮಂದಿರಗಳ ಸುಧಾರಣೆ ಮಾಡಬೇಕು ನಿಜ. ರೊಕ್ಕ ಬಂದರೆ, ಸ್ವಂತ ಚಿತ್ರಮಂದಿರ ಇದ್ದರೆ ಸುಧಾರಣೆ ಮಾಡುತ್ತಾರೆ. ಈಗಾಗಲೇ ನಷ್ಟದಲ್ಲಿ ಇರುವುದರಿಂದ ಸುಧಾರಣೆ ಮಾಡುವುದು ಹೊರೆಯಾಗುತ್ತದೆ. ಬಂಡವಾಳ ಹೂಡಲು ಧೈರ್ಯ ಸಾಲದು ಎನ್ನುತ್ತಾರೆ ಅವರು.

ಪ್ರೇಕ್ಷಕರನ್ನು ಸೆಳೆಯುವ ಮಲ್ಟಿಫ್ಲೆಕ್ಸ್‌
ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂಮಲ್ಟಿಫ್ಲೆಕ್ಸ್‌ ಸಿನಿಮಾ ಮಂದಿರಗಳು ಒಂದೂ ಇಲ್ಲ. ಸದ್ಯ ಇರುವುದು ಹಳೇ ಚಿತ್ರಮಂದಿರಗಳು ಮಾತ್ರ. ಬಾಲ್ಕನಿಗೆ ₹150, ಫಸ್ಟ್‌ ಕ್ಲಾಸ್‌ಗೆ ₹100 ದರ ಇವೆ. ಆದರೆ, ಸೌಲಭ್ಯಗಳು ಮರೀಚಿಕೆಯಾಗಿವೆ. ಹೀಗಾಗಿ ಮಾಲೀಕರುಕೇವಲ ಸಿನಿಮಾ ಚನ್ನಾಗಿಲ್ಲ, ಪ್ರೇಕ್ಷಕರು ಬರುತ್ತಿಲ್ಲ ಎಂದು ಗೊಣಗಿದರೆ ಸಾಲದು. ನೂರಾರು ರೂಪಾಯಿ ಕೊಟ್ಟು ಮನರಂಜನೆಗಾಗಿ ಬರುವಪ್ರೇಕ್ಷಕರಿಗೆ ಮೂರು ತಾಸು ನೆಮ್ಮದಿಯಿಂದ ಕೂರುವಂತಹ ಆಹ್ಲಾದಕರ ವಾತಾವರಣ ಸಿನಿಮಾ ಮಂದಿರಗಳಲ್ಲಿ ಸೃಷ್ಟಿಸಬೇಕಿದೆ.ಆಧುನಿಕತೆ, ನವೀಕರಣಕ್ಕೆ ಆದ್ಯತೆ ನೀಡಬೇಕಿದೆ.

ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಕಲಬುರ್ಗಿ ನಗರಗಳಲ್ಲಿ ಮಲ್ಟಿಫ್ಲೆಕ್ಸ್‌, ಥೇಟರ್‌ಗಳಿಗೆ ಜನ ಮುಗಿ ಬಿದ್ದು ಸಿನಿಮಾ ನೋಡುವುದನ್ನು ಈಗಲೂ ಕಾಣಬಹುದು. ವಿಜಯಪುರದಿಂದ ಪ್ರತಿನಿತ್ಯ ನೂರಾರು ಜನ ಆ ನಗರಗಳಿಗೆ ಹೋಗಿ ಸಿನಿಮಾ ನೋಡಿ ಬರುವುದು ಕಾಣಬಹುದು. ಪ್ರೇಕ್ಷಕರಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಸಿಗುವ ಸೌಲಭ್ಯ, ಅತ್ಯಾಧುನಿಕ ವಾತಾವರಣ ವಿಜಯಪುರದಲ್ಲೂ ಸಿಕ್ಕರೆ ಜನ ಬಾರದೇ ಇರರು. ಸಿನಿಮಾ ಮಂದಿರಗಳ ಮಾಲೀಕರು ಅತ್ತ ಗಮನಹರಿಸುವುದು ಒಳಿತು.

ಸುಣ್ಣ ಬಣ್ಣವಿಲ್ಲದ ಭೂತ ಬಂಗಲೆ!
ವಿಜಯಪುರ:
ಸಿನಿಮಾಗಳು ಚನ್ನಾಗಿದ್ದರೆ ಮಾತ್ರವೇ ಪ್ರೇಕ್ಷಕರು ಸಿನಿಮಾ ಮಂದಿರದತ್ತ ಬರುತ್ತಾರೆ ಎಂಬುದೇನೋ ನಿಜ. ಆದರೆ, ಸಿನಿಮಾಗಳ ಜೊತೆ ಆ ಸಿನಿಮಾ ಪ್ರದರ್ಶನಗೊಳ್ಳುವ ಚಿತ್ರಮಂದಿರಗಳು ಸ್ಥಿತಿಗತಿ ಹೇಗಿದೆ ಎಂಬುದು ಮುಖ್ಯವಾಗುತ್ತದೆ.

ಸುಣ್ಣ ಬಣ್ಣಗಳಿಲ್ಲದ ಹಳೇ ಕಾಲದ, ಭೂತ ಬಂಗಲೆಯಂತ ಸಿನಿಮಾ ಮಂದಿರಗಳು, ಕರ್ಕಶ ಶಬ್ಧ, ಪರದೆ ಮೇಲೆ ಮಸುಕು ಮಸುಕಾಗಿ ಕಾಣವು ಚಿತ್ರ, ಕಿತ್ತು ಹೋಗಿರುವ ಆಸನಗಳು, ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಬಾಟಲಿ, ಪ್ಲಾಸ್ಟಿಕ್‌ ಕವರ್‌, ಸಿಗರೇಟ್‌ ತುಂಡು, ಬಾಟಲಿಗಳು, ಎಲ್ಲೆಂದರಲ್ಲಿ ತಿಂದು ಉಗುಳಿರುವ ಗುಟ್ಕಾ, ಅಡಿಕೆ ಎಂಜಲು, ನೆಮ್ಮದಿಯಿಂದ ಕೂರಲು ಬಿಡದ ಸೊಳ್ಳೆಗಳು, ಉಸಿರಾಡಲು ಅಸಹ್ಯ ಎನಿಸುವ ಶೌಚಾಲಯದ ದುರ್ವಾಸನೆ, ತಿರುಗದ ಫ್ಯಾನ್‌, ಬೆಳಗದ ದೀಪಗಳು, ಬಲೆ ಕಟ್ಟಿಕೊಂಡಿರುವ ಕಿಟಕಿ, ಬಾಗಲುಗಳು, ಪಡ್ಡೆ ಹೈದರ ಅಸಭ್ಯ ವರ್ತನೆ, ಕುಡಿಯಲು ಸಿಗದ ಶುದ್ಧ ನೀರು, ವಾಹನ ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೇ ಇರುವ ಪರಿಣಾಮ ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಮುಖ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿವೆ 17 ಟಾಕೀಸ್‌
ವಿಜಯಪುರ ನಗರ ಸೇರಿದಂತೆಜಿಲ್ಲೆಯಲ್ಲಿ 17ಕ್ಕೂ ಅಧಿಕ ಚಿತ್ರ ಮಂದಿರಗಳಿವೆ.

ವಿಜಯಪುರ ನಗರದಲ್ಲಿ ಜಯಶ್ರೀ, ಲಕ್ಷ್ಮಿ, ಆಲಂಕಾರ್‌, ಡ್ರೀಮ್‌ ಲ್ಯಾಂಡ್‌, ಅಪ್ಸರಾ, ಅಮೀರ್‌ ಹಾಗೂ ಸಿಂದಗಿಯಲ್ಲಿ ಆನಂದ, ವಿನಾಯಕ ಮತ್ತು ಪ್ರಶಾಂತ ಚಿತ್ರ ಮಂದಿರಗಳಿವೆ.

ತಾಳಿಕೋಟೆಯಲ್ಲಿ ಮಹಾವೀರ, ಅಮೀರ,ಬಸವನಬಾಗೇವಾಡಿಯಲ್ಲಿ ಸತ್ಯನಾರಾಯಣ,ಇಂಡಿಯಲ್ಲಿ ಶ್ರೀನಿವಾಸ ಮತ್ತು ಮಹಾವೀರ,ಮುದ್ದೇಬಿಹಾಳದಲ್ಲಿ ಶ್ರೀ ಲಕ್ಷ್ಮಿ ಮತ್ತು ಗಿರಿಜಾಶಂಕರ ಚಿತ್ರಮಂದಿರ ಹಾಗೂ ಚಡಚಣದ ಸಂಗಮೇಶ್ವರ ಚಿತ್ರಮಂದಿರ ಸದ್ಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

****

ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ, ಎ.ಸಿ.ಪಾಟೀಲ, ಶರಣಬಸಪ್ಪ ಗಡೇದ, ಪ್ರಕಾಶ ಮಸಬಿನಾಳ, ಮಹಾಬಲೇಶ್ವರ ಗಡೇದ, ಅಲ್ಲಮಪ್ರಭು ಕರ್ಜಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT