ಬುಧವಾರ, ಜೂನ್ 16, 2021
22 °C

ರಾಜ್ಯ ವಿಭಜನೆ ಅಪಾಯ ತಪ್ಪಿಸಿದ ಅರಸು: ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಉಳುವವನೇ ಹೊಲದೊಡೆಯ‘ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಮೂಲಕ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ರಾಜ್ಯ ವಿಭಜನೆಯ ಅಪಾಯವನ್ನು ತಪ್ಪಿಸಿದರು ಎಂದು ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ದಿವಂಗತ ದೇವರಾಜ ಅರಸು ಅವರ 105ನೇ ಜನ್ಮ ದಿನಾಚರಣೆಯ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ‘ದೇವರಾಜ ಅರಸು-ಸಾಮಾಜಿಕ ನ್ಯಾಯ' ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಏಕೀಕರಣಕ್ಕಿಂತ ಮುಂಚೆ ಹಳೇ ಮೈಸೂರಿನ ಪ್ರಬಲ ಸಮುದಯದವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಿದ್ದರು. ಏಕೀಕರಣದ ನಂತರ ಉತ್ತರ ಕರ್ನಾಟಕದ ಒಂದು ಪ್ರಬಲ ಸಮುದಾಯದವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸತೊಡಗಿದರು. ಇದರಿಂದಾಗಿ ಸಹಜವಾಗಿಯೇ ಎರಡು ಸಮುದಾಯಗಳಲ್ಲಿ ಅಧಿಕಾರಕ್ಕಾಗಿ ಭಿನ್ನಾಭಿಪ್ರಾಯ ಶುರುವಾಯಿತು ಎಂದರು.

ಮುಖ್ಯಮಂತ್ರಿ ಹುದ್ದೆ ತಮಗೆ ದಕ್ಕಬೇಕೆಂದರೆ, ಅಧಿಕಾರದಲ್ಲಿ ಹೆಚ್ಚು ಪಾಲು ತಮಗೆ ಸಿಗಬೇಕೆಂದರೆ ವಿಭಜನೆ ಸೂಕ್ತ ಎಂಬ ಅಭಿಪ್ರಾಯಗಳು ಕೇಳಿ ಬರತೊಡಗಿದವು. ಆದರೆ, ದೇವರಾಜ ಅರಸು ಮುಖ್ಯಮಂತ್ರಿಯಾದ ನಂತರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಉಳುವವನೇ ಹೊಲದೊಡೆಯ ಎಂಬ ಕಾರ್ಯಕ್ರಮದಿಂದ ದುರ್ಬಲ ವರ್ಗಗಳಲ್ಲೂ ರಾಜಕೀಯ ಪ್ರಜ್ಞೆ ಹೆಚ್ಚಿಸಿತು ಎಂದು ಹೇಳಿದರು.

ರಾಜಕೀಯ ಪ್ರಜ್ಞೆ ಇರುವ ವರ್ಗ ಸಹಜವಾಗಿಯೇ ತಮ್ಮನ್ನು ಆಳುವವರು ಯಾರಿರಬೇಕು ಎಂಬ ಕಡೆ ಗಮನ ಹರಿಸುತ್ತದೆ. ಅದುವರೆಗೆ ರಾಜಕೀಯ ಪ್ರಜ್ಞೆ ಇಲ್ಲದ ವರ್ಗಗಳು ಯಾವಾಗ ಆ ಪ್ರಜ್ಞೆ ಪಡೆದವೋ?ಅದಾದ ನಂತರ ಅಧಿಕಾರ ಪಡೆಯಲು ವಿಭಜನೆಯ ಬಗ್ಗೆ ಒಲವು ತೋರಿಸುತ್ತಿದ್ದ ನಾಯಕರ ಧ್ವನಿ ಕ್ಷೀಣವಾಯಿತು ಎಂದರು.

ರಾಜಕೀಯ ಪ್ರಜ್ಞೆ ಇಲ್ಲದ ವರ್ಗಗಳನ್ನು ಹಿಡಿತದಲ್ಲಿಟ್ಟುಕೊಂಡು ಅಧಿಕಾರ ಪಡೆಯಬಹುದು. ಆದರೆ, ರಾಜಕೀಯ ಪ್ರಜ್ಞೆ ಬೆಳೆದ ವರ್ಗಗಳನ್ನು ಹಿಡಿತದಲ್ಲಿಟ್ಟುಕೊಂಡು ಆಸೆ ಈಡೇರಿಸಿಕೊಳ್ಳುವುದು ಕಷ್ಟ. ಇದು ಗೊತ್ತಾಗಿದ್ದರಿಂದಲೇ ವಿಭಜನೆಯ ಮೂಲಕ ಅಧಿಕಾರ ಪಡೆಯುವ ನಿರೀಕ್ಷೆ ಇರಿಸಿಕೊಂಡಿದ್ದವರ ಧ್ವನಿ ಕ್ಷೀಣವಾಯಿತು ಎಂದು ವಿಠ್ಠಲಮೂರ್ತಿ ಹೇಳಿದರು.

ಅರಸರ ಉಳುವವನೇ ಹೊಲದೊಡೆಯ ಕಾರ್ಯಕ್ರಮ ದುರ್ಬಲ ವರ್ಗಗಳಿಗೆ ಆರ್ಥಿಕ ಶಕ್ತಿಯನ್ನು ಮಾತ್ರ ನೀಡಲಿಲ್ಲ. ಬದಲಿಗೆ ಇಂತಹ ರಾಜಕೀಯ ಪ್ರಜ್ಞೆಯನ್ನೂ ನೀಡಿತು. ಆ ಮೂಲಕ ಏಕೀಕರಣದ ಉದ್ದೇಶ ಈಡೇರುವಂತೆ ಮಾಡಿತು ಎಂದರು.

ಅರಸರ ಬದುಕಿನ ಮುಖ್ಯ ಗುರಿ ಸಂಪತ್ತಿನ ಕೇಂದ್ರೀಕರಣದ ವಿರುದ್ಧ ಹೋರಾಡುವುದೇ ಆಗಿತ್ತು. ಕೆಲವೇ ಪ್ರಮಾಣದ ಜನ ವ್ಯವಸ್ಥೆಯ ಬಹುಪಾಲು ಸಂಪತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಾಗ ಬಹುಸಂಖ್ಯಾತ ವರ್ಗ ಅಸಹಾಯಕವಾಗುತ್ತದೆ ಎಂದು ಹೇಳಿದರು.

ವಿಪರ್ಯಾಸವೆಂದರೆ ಸಂಪತ್ತನ್ನು ಕೇಂದ್ರೀಕರಿಸಿಕೊಂಡವರಿಗೆ ತಮ್ಮ ವಿರುದ್ಧ ನಿಂತವರನ್ನು ಎದುರಿಸಲು ಸಲಕರಣೆಗಳಿವೆ. ಆದರೆ, ಅವರ ವಿರುದ್ಧ ಹೋರಾಡುವವರ ಕೈಲಿ ಯಾವ ಸಲಕರಣೆಗಳೂ ಇರುವುದಿಲ್ಲ ಎಂದರು.

ಇವತ್ತು ಕೂಡಾ ಸಂಪತ್ರಿನ ಕೇಂದ್ರೀಕರಣದ ಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಬಹುಸಂಖ್ಯಾತರು ಅಸಹಾಯಕರಾಗುತ್ತಿದ್ದಾರೆ. ಹೀಗಾಗಿ ಯಾವ ಉದ್ದೇಶವಿಟ್ಟುಕೊಂಡು ದೇವರಾಜ ಅರಸು ಹೋರಾಡಿದರೋ? ಅಂತಹ ಹೋರಾಟವನ್ನು ನೆನಪಿಸಿಕೊಂಡು ವ್ಯವಸ್ಥೆಯ ಬಹುಪಾಲು ಜನರು ಮೇಲೆದ್ದು ನಿಲ್ಲಬೇಕಾದ ಅಗತ್ಯವಿದೆ ಎಂದು ಹೇಳಿದರು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಓಂಕಾರಗೌಡ ಕಾಕಡೆ, ಕುಲ ಸಚಿವೆ ಪ್ರೊ.ಆರ್.ಸುನಂದಮ್ಮ, ಸಮಾನ ಅವಕಾಶಗಳ ಘಟಕದ ಸಂಯೋಜಕ ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು