ಸೋಮವಾರ, ಜುಲೈ 26, 2021
22 °C

ರಕ್ತದಾನ ಶಿಬಿರ ಏರ್ಪಡಿಸಿ: ವೈ.ಎಸ್ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವಾಗಲು ಜಿಲ್ಲೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ರಕ್ತ ಭಂಡಾರ ಸನ್ನದ್ಧತಾ ಪಡೆಯ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ರಕ್ತದಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಜೊತೆಗೆ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ನೆರವಾಗಲು ರಕ್ತದ ಅವಶ್ಯಕತೆ ಬೀಳುವ ಹಿನ್ನಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ರಕ್ತದಾನ ಶಿಬಿರ ಏರ್ಪಡಿಸುವಂತೆ ಅವರು ಸೂಚಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಯಾರಾದರು ರಕ್ತದಾನ ನೀಡಬಯಸಿದ್ದಲ್ಲಿ ಯಾವುದೇ ಸಂಕೋಚವಿಲ್ಲದೆ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿರುವ ರಕ್ತ ನಿಧಿ ಕೇಂದ್ರಕ್ಕೆ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ರಕ್ತದಾನ ಮಾಡಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 5 ರಿಂದ 10 ಜನ ರಕ್ತದಾನಿಗಳು ರಕ್ತದಾನ ಮಾಡಬಯಸಿದಲ್ಲಿ ಅಂತಹವರ ರಕ್ತ ಸಂಗ್ರಹಣೆಗೆ ಆಯಾ ತಾಲ್ಲೂಕುಗಳ ಸಂಬಂಧಿಸಿದ ಪ್ರದೇಶಗಳಿಗೆ ವೈದ್ಯರು ಮತ್ತು ಸಿಬ್ಬಂದಿಯನ್ನು ಒಳಗೊಂಡ ರಕ್ತವಾಹಿನಿ ಬಸ್ (ರಕ್ತ ಸಂಗ್ರಹಣಾ ಮತ್ತು ಸಾಗಾಣಿಕಾ ವಾಹನ) ಮೂಲಕ ರಕ್ತ ಸ್ವೀಕಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಈ ಕುರಿತು ರಕ್ತ ಭಂಡಾರ ಕೇಂದ್ರದ ಅಧಿಕಾರಿಗಳಾದ ಸುಮಾ ಅವರನ್ನು ಮೊ.ಸಂ: 9448679583 ಗೆ ಸಂಪರ್ಕಿಸಬಹುದಾಗಿದೆ ಎಂದು ಅವರು ಹೇಳಿದರು.

ಎನ್.ಎಸ್.ಎಸ್ ಘಟಕದ ವತಿಯಿಂದ ರಕ್ತದಾನ ಶಿಬಿರ ಆಯೋಜನೆಗೆ ಅವಶ್ಯಕ ಸಹಕಾರ ನೀಡುತ್ತಿರುವ ಎನ್.ಎಸ್.ಎಸ್ ಸಮನ್ವಯ ಅಧಿಕಾರಿ ಸಜ್ಜಾದೆ ಮತ್ತು ಬಸವನ ಬಾಗೇವಾಡಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಶಿಧರ ಓತಗೇರಿ ಅವರ ಸಹಕಾರಕ್ಕೆ ಪ್ರಶಂಸೆ ವ್ಯಕ್ತಪಡಿಸಲಾಯಿತು.

ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲಾದ್ಯಂತ ಒಟ್ಟು 7 ರಕ್ತ ನಿಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, 2020-21 ಸಾಲಿನಲ್ಲಿ ಸಾಧಿಸಿದ ಪ್ರಗತಿ ಬಗ್ಗೆ ಪರಿಶೀಲಿಸಲಾಯಿತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷಾ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಂದ್ರ ಕಾಪಸೆ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಬಿ ಬಿರಾದಾರ,  ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಧಾರವಾಡಕರ ಅವಶ್ಯಕ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು