ಶುಕ್ರವಾರ, ಜೂನ್ 18, 2021
27 °C
ತೇವಾಂಶ ಹೆಚ್ಚಳ; ಹಳದಿಯಾದ ಬೆಳೆ; ರೈತರ ಆತಂಕ

ಯೂರಿಯಾ ಕೃತಕ ಅಭಾವ; ಅಧಿಕ ದರ ವಸೂಲಿ

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಪ್ರಸಕ್ತ ಮುಂಗಾರು ಮಳೆ ಜಿಲ್ಲೆಯಲ್ಲಿ ಉತ್ತಮವಾಗಿರುವುದರಿಂದ ನಿರೀಕ್ಷೆಗೂ ಮೀರಿ ತೊಗರಿ, ಮೆಕ್ಕೆಜೋಳ, ಸಜ್ಜೆ ಬಿತ್ತನೆಯಾಗಿದೆ.

ಸದ್ಯ ಅಧಿಕ ಮಳೆಯಿಂದ ಹೊಲಗಳಲ್ಲಿ ತೇವಾಂಶ ಹೆಚ್ಚಳವಾಗಿರುವ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಬೆಳೆಗೆ ಚೇತರಿಕೆ ನೀಡಲು ಯೂರಿಯಾ ಗೊಬ್ಬರದ ಅವಶ್ಯಕತೆ ಅಧಿಕವಾಗಿದೆ. ಬೇಡಿಕೆಗೆ ತಕ್ಕಷ್ಟು ಯೂರಿಯಾ ಸಿಗದಿರುವುದರಿಂದ ಜಿಲ್ಲೆಯ ರೈತರು ಆತಂಕಕ್ಕೆ ಒಳಗಾದ್ದಾರೆ.

ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಿರುವ ಖಾಸಗಿ ರಸಗೊಬ್ಬರ, ಔಷಧ ಅಂಗಡಿಗಳ ಮಾಲೀಕರು ಕೃತಕ ಅಭಾವವನ್ನು ಸೃಷ್ಟಿಸಿ, ಅಧಿಕ ದರವನ್ನು ರೈತರಿಂದ ವಸೂಲಿ ಮಾಡತೊಡಗಿದ್ದಾರೆ. ಜೊತೆಗೆ ಇತರೆ ಗೊಬ್ಬರನ್ನು ಕೊಂಡರೆ ಮಾತ್ರ ಯೂರಿಯಾ ಕೊಡುವುದಾಗಿ ಬ್ಲ್ಯಾಕ್‌ಮೇಲ್‌ ತಂತ್ರ ಅನುಸರಿಸತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೃತಕ ಅಭಾವ: ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಬಬಲೇಶ್ವರ ತಾಲ್ಲೂಕಿನ ಸಾರವಾಡದ ರೈತ ವಿ.ಜಿ.ಇನಾಮದಾರ, ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವದಿಂದಾಗಿ ರೈತರು ಕಂಗಾಲಾಗಿದ್ದಾರೆ ಎಂದು ದೂರಿದರು.

ಜಿಲ್ಲೆಯ ಕೃಷಿ ಅಧಿಕಾರಿಗಳನ್ನು ಈ ಸಂಬಂಧ ಕೇಳಿದರೆ ಗೋದಾಮುಗಳಲ್ಲಿ ಗೊಬ್ಬರ ಸಾಕಷ್ಟು ದಾಸ್ತಾನಿದೆ ಎಂದು ಹೇಳುತ್ತಾರೆ. ಆದರೆ, ಗೊಬ್ಬರ ಮಾರಾಟಗಾರರನ್ನು ಕೇಳಿದರೆ ಯೂರಿಯಾ ಸ್ಟಾಕ್ ಇಲ್ಲ ಎಂದು ಹೇಳುತ್ತಾರೆ. ಒತ್ತಾಯ ಮಾಡಿದರೇ ದುಬಾರಿ ಬೆಲೆಯ ಇತರೆ ಗೊಬ್ಬರ ತೆಗೆದು ಕೊಂಡರೇ ಮಾತ್ರ ಯೂರಿಯಾ ಸಿಗುತ್ತದೆ ಎಂಬ ಉತ್ತರ ಬರುತ್ತದೆ ಎಂದು ಆರೋಪಿಸಿದರು.

ನೆರೆಯ ಕಲಬುರ್ಗಿ, ರಾಯಚೂರು, ಬೆಳಗಾವಿ, ಮಹಾರಾಷ್ಟ್ರಗಳಲ್ಲಿ ಸಲೀಸಾಗಿ ಸಿಗುವ ಯೂರಿಯಾ ಗೊಬ್ಬರ ವಿಜಯಪುರ ಜಿಲ್ಲೆಯಲ್ಲಿ ಏಕೆ ಸಿಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ತೊಗರಿ ಬಿತ್ತುವಾಗ ಯೂರಿಯಾ ಹಾಕಿಲ್ಲ. ಈಗ ಭೂಮಿ ಹಸಿಯಾಗಿ ಗಿಡಗಳು ಮೇಲೇಳುತ್ತಿಲ್ಲ. ಸದ್ಯ ಯೂರಿಯಾ ಅತ್ಯಗತ್ಯವಾಗಿದೆ. ಒಂದು ತಿಂಗಳಿಂದ ಯೂರಿಯಾ ರೈತರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿದರು.

‘ಯೂರಿಯಾ ಕೊರತೆಯಾಗಿಲ್ಲ’

ಜಿಲ್ಲೆಯಲ್ಲಿ ಯೂರಿಯಾ ಕೊರತೆಯಾಗಿಲ್ಲ. ಆದರೆ, ಗುರಿ ಮೀರಿ ಬಿತ್ತನೆಯಾಗಿದೆ. ಹೀಗಾಗಿ ರೈತರು ಯೂರಿಯಾಕ್ಕೆ ಮುಗಿಬಿದ್ದಿರುವುದರಿಂದ ತಕ್ಷಣ ಖಾಲಿಯಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಿ.ಡಬ್ಲ್ಯು. ರಾಜಶೇಖರ್ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ತೇವಾಂಶ ಹೆಚ್ಚಳದಿಂದ ಹಳದಿಯಾಗಿರುವ ಬೆಳೆಗಳಿಗೆ ಯೂರಿಯಾವನ್ನೇ ಹಾಕಬೇಕೆಂದಿಲ್ಲ. ಯೂರಿಯಾ ಬದಲಿಗೆ ಅಮೋನಿಯಂ ಸಲ್ಫೆಟ್‌ ಹಾಕಬಹುದು. ಸ್ವಲ್ಪ ದರ ಹೆಚ್ಚಳವಾದರೂ ಯೂರಿಯಾಕ್ಕಿಂತ ಕಡಿಮೆ ಹಾಕಿದರೂ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದರು.

ಯೂರಿಯಾ ಹೆಚ್ಚು ಬಳಸುವುದರಿಂದ ಭೂಮಿಯ ಆರೋಗ್ಯ ಹದಗೆಡುತ್ತಿದೆ ಎಂಬುದನ್ನು ರೈತರು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಯೂರಿಯಾ ಪೂರೈಕೆ ಸಮಸ್ಯೆಯಾಗಿಲ್ಲ. ಜುಲೈನಲ್ಲಿ 15 ಸಾವಿರ ಮೆಟ್ರಿಕ್‌ ಟನ್‌ ಯೂರಿಯಾ ಜಿಲ್ಲೆಗೆ ಅಗತ್ಯವಿತ್ತು. ಆದರೆ, ಜಿಲ್ಲೆಗೆ 17,500 ಮೆಟ್ರಿಕ್ ಟನ್‌ ವಿತರಣೆಯಾಗಿದೆ. ಆಗಸ್ಟ್‌ನಲ್ಲಿ ಒಟ್ಟು 6500 ಟನ್‌ ಯೂರಿಯಾ ಬರಲಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಎರಡು ದಿನಗಳಲ್ಲಿ ಜಿಲ್ಲೆಗೆ 1600 ಟನ್‌ ಯೂರಿಯಾ ಪೂರೈಕೆಯಾಗುತ್ತಿದೆ ಎಂದರು.

ಖಾಸಗಿ ಗೊಬ್ಬರ ಅಂಗಡಿಗಳ ಮಾಲೀಕರು ಅಧಿಕ ದರಕ್ಕೆ ಯೂರಿಯಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ರೈತರು ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಿ.ಡಬ್ಲ್ಯು ರಾಜಶೇಖರ್ ಪ್ರತಿಕ್ರಿಯಿಸಿದರು.

ವರ್ಷದ ಗಂಜಿಗಾಗಿ ಬಡಿದಾಡುವ ರೈತನ ಗೋಳಿಗೆ ಜಿಲ್ಲೆಯ ಜನಪ್ರತಿನಿಧಿಗಳು ನೆರವಿಗೆ ಬಾರದೆ ಇರುವುದು ನೋವಿನ ಸಂಗತಿಯಾಗಿದೆ ಸಾರವಾಡದ ರೈತರಾದ ವಿ.ಜಿ.ಇನಾಮದಾರ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು