ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳ ಅಲೆದಾಟ ತಪ್ಪಿಸಿ: ಡಿಸಿ ಸೂಚನೆ

ವಿಜಯಪುರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್‌
Last Updated 11 ಜುಲೈ 2020, 14:11 IST
ಅಕ್ಷರ ಗಾತ್ರ

ವಿಜಯಪುರ: ನೆಗಡಿ, ಕೆಮ್ಮು, ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಬಳಲುತ್ತಿರುವ ರೋಗಿಗಳಿಗೆ ನಿಗದಿತ ಕೋವಿಡ್‌ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ತಕ್ಷಣ ಚಿಕಿತ್ಸೆ ಒದಗಿಸಬೇಕು. ಯಾವುದೇ ಕಾರಣಕ್ಕೂ ಅಲೆದಾಡುವಂತೆ ಮಾಡಬಾರದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಶನಿವಾರ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ವೈದ್ಯರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಕೋವಿಡ್‌ ಚಿಕಿತ್ಸೆ ನೀಡಲು ಮುಂದೆ ಬಂದಿರುವ ಅಲ್ ಆಮೀನ್, ಬಿಎಲ್‌ಡಿಇ, ಯಶೋಧಾ, ಆಯುಷ್, ಅಶ್ವಿನಿ, ಡಾ.ಬಾಂಗಿ, ಡಾ.ಚೌಧರಿ ಹಾಗೂ ಯಶೋಧರಾ ಆಸ್ಪತ್ರೆಗಳಲ್ಲಿ ಹೈ ಪ್ಲೋವ್ ಆಕ್ಸಿಜನ್‌ವುಳ್ಳ ಬೆಡ್‌ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಚಿಕಿತ್ಸೆ ಒದಗಿಸಲು ಬೇಕಾದ ಸೌಲಭ್ಯಗಳೊಂದಿಗೆ ಸಿದ್ಧತೆಯಲ್ಲಿ ಇರಬೇಕು ಎಂದು ಸೂಚಿಸಿದರು.

ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 144 ಬೆಡ್‌ಗಳು ಸಿದ್ಧವಾಗಿದ್ದು, ಮುಂಬರುವ ಮಂಗಳವಾರದ ವರೆಗೆ 270 ಬೆಡ್‌ಗಳ ವ್ಯವಸ್ಥೆ ಕೂಡ ಸಿದ್ಧವಾಗಲಿದೆ ಎಂದರು.

ಸಾರ್ವಜನಿಕರು ಕೂಡಾ ಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ವಿಳಂಬಮಾಡದೇ ತಕ್ಷಣ ಆಯಾ ಆಸ್ಪತ್ರೆಗಳಿಗೆ ಸಂಪರ್ಕಿಸಬೇಕು ಎಂದು ಹೇಳಿದರು.

ಜಿಲ್ಲೆಯ ಸಾರ್ವಜನಿಕರು, ರೋಗಿಗಳು ತಮಗೆ ಯಾವುದೇ ರೋಗ ಲಕ್ಷಣ ಕಂಡುಬಂದರೂ ಅದು ಕೋವಿಡ್ ಎಂದು ತಿಳಿಯಬಾರದು. ಏಕೆಂದರೆ ಇತ್ತೀಚೆಗೆ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಕಂಡುಬರುತ್ತಿದ್ದು, ಸಾರ್ವಜನಿಕರು ಭಯಭೀತರಾಗಬಾರದು ಎಂದು ಅವರು ಮನವಿ ಮಾಡಿದರು.

ರೋಗಿಗಳು ತಡವಾಗಿ ಆಸ್ಪತ್ರೆಗೆ ದಾಖಲಾದರೆ, ಜೀವ ಉಳಿಸುವುದು ಕಷ್ಟವಾಗುತ್ತದೆ. ಸಾರ್ವಜನಿಕರು ವಿನಾಕಾರಣ ಭಯಭೀತರಾಗದೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ದಾಖಲಾಗುವಂತೆ ಅವರು ತಿಳಿಸಿದರು.

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಂದ್ರ ಕಾಪಸೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಔದ್ರಾಮ್‌ ಮತ್ತು ವೈದ್ಯರು ಉಪಸ್ಥಿತರಿದ್ದರು.

ನಾಳೆಯಿಂದ ಸಲೂನ್‍ ಬಂದ್‌ಗೆ ನಿರ್ಧಾರ

ವಿಜಯಪುರ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಸಲೂನ್‍ಗಳನ್ನು ಜುಲೈ 12 ರಿಂದ 26ರ ವರೆಗೆ ಬಂದ ಮಾಡಲು ಜಿಲ್ಲಾ ಕ್ಷೌರಿಕರ ಒಕ್ಕೂಟ ನಿರ್ಧರಿಸಿದೆ.

ನಗರದ ಮಠಪತಿಗಲ್ಲಿಯ ಸಂತಸೇನ ಭವನ ಹತ್ತಿರ ಸಮಾಜದಿಂದ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಸಂತಸೇನಾ ನಾಭೀಕ ಸಮಾಜದ ಅಧ್ಯಕ್ಷ ನಿತೀನ ಆರ್. ಖಂಡಗಳೆ, ಸವಿತಾ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ್ ಎನ್. ಬಳ್ಳಾರಿ, ಹಡಪದ ಸಮಾಜದ ಅಧ್ಯಕ್ಷ ಬಸವರಾಜ ಶಿವಶರಣರ, ಖಲೀಪಾ ಸಮಾಜದ ಮುಖಂಡ ಹುಸೇನ್‌ ಖಲೀಪಾ, ಬಂಜಾರ ನಾವಿ ಸಮಾಜದ ಯುವಕರಾದ ಸುರೇಶ ಜಾಧವ, ಅಶೋಕ ನಾವಿ, ಸವಿತಾ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಾಪು ಕ್ಷೀರಸಾಗರ, ಗಣೇಶ ಬಳ್ಳಾರಿ, ಪ್ರಕಾಶ ಹಡಪದ, ವಿಠ್ಠಲ ಕಾಸೇದ, ಸುನೀಲ ಕ್ಷೀರಸಾಗರ, ಸಂತೋಷ ವಾಘಮೊರೆ, ಪ್ರಕಾಶ ಸಾಗಾಂವಕರ, ಪ್ರಕಾಶ ಹಡಪದ, ಶಿವಾನಂದ ತೊರವಿ ಸಭೆಯಲ್ಲಿ ಉಪಸ್ಥಿತರಿದ್ದರು.

ವ್ಯಾಪಾರ, ವಹಿವಾಟು ಸಂಜೆ 5ಕ್ಕೆ ಬಂದ್‌

ವಿಜಯಪುರ: ಕೋವಿಡ್-19 ವ್ಯಾಪಕವಾಗಿ ಹರಡುತ್ತಿರುವುದರಿಂದ ಶಹರದ ಎಲ್ಲ ಅಂಗಡಿ, ಮುಂಗಟ್ಟುಗಳನ್ನು ಜುಲೈ 13ರಿಂದ ಸ್ವಯಂ ಪ್ರೇರಿತರಾಗಿ ಸಂಜೆ 5ಕ್ಕೆ ಬಂದ್‌ ಮಾಡಬೇಕು ಎಂದು ಮರ್ಚಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ರವೀಂದ್ರ ಎಸ್.ಬಿಜ್ಜರಗಿ ಮನವಿ ಮಾಡಿದ್ದಾರೆ.

ಈಗಾಗಲೇ ಜವಳಿ, ಸರಾಫ್‌, ಎಲ್‍ಬಿಎಸ್, ಹೋಲ್‌ಸೇಲ್ ಕಿರಾಣಿ, ಸ್ಟೇಷನರಿ, ಟೈರ್‌ ಡೀಲರ್ಸ್‌, ಫರ್ಟಿಲೈಜರ್ಸ್‌, ಲಾರಿ ಮಾಲೀಕರ ಸಂಘ, ರೆಡಿಮೇಡ್, ಅಟೋಮೊಬೈಲ್ ಮತ್ತು ಬಾಗವಾನ ವ್ಯಾಪಾರಿ ಸಂಘಟನೆಗಳು ಸ್ವಯಂಪ್ರೇರಿತರಾಗಿ ಸಂಜೆ 5ಕ್ಕೆ ವ್ಯಾಪಾರ ಬಂದ್‌ ಮಾಡಲು ಸಹಮತ ವ್ಯಕ್ತಪಡಿಸಿರುವದಾಗಿ ಅವರು ತಿಳಿಸಿದ್ದಾರೆ.

ಜವಳಿ ವ್ಯಾಪಾರಸ್ಥರ ಸಂಘ:ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಇನ್ನು ಮುಂದೆ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮಾತ್ರ ವ್ಯಾಪಾರ, ವಹಿವಾಟು ಮಾಡಲು ನಿರ್ಧರಿಸಿರುವುದಾಗಿ ವಿಜಯಪುರ ಜವಳಿ ವ್ಯಾಪಾರಸ್ಥರ ಸಂಘ ತಿಳಿಸಿದೆ.

ಪ್ರತಿ ಭಾನುವಾರ ರಜೆ ಜವಳಿ ವ್ಯಾಪಾರ, ವಹಿವಾಟು ಬಂದ್‌ ಇರಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷ ಗೋಕುಲ್‌ ಮಹಿಂದ್ರಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT