ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರು, ತೃತೀಯ ಲಿಂಗಿಗಳಿಗೆ ಜಾಗೃತಿ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ
Last Updated 28 ನವೆಂಬರ್ 2022, 13:26 IST
ಅಕ್ಷರ ಗಾತ್ರ

ವಿಜಯಪುರ:ಮತದಾರ ಪಟ್ಟಿ ಪರಿಷ್ಕರಣೆ ವಿಶೇಷ ಪ್ರಚಾರ ಅಭಿಯಾನದ ಅಂಗವಾಗಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ನಗರದ ಅಫಜಲಪುರ ಟಕ್ಕೆಯಲ್ಲಿರುವ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿ, ಮತದಾನ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ನಿಟ್ಟಿನಲ್ಲಿ ಅರಿವು ಮೂಡಿಸಿದರು.

ನಿರಾಶ್ರಿತರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ವಿ.ಎಚ್.ಎ. ತಂತ್ರಾಶದಲ್ಲಿ ದಾಖಲು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು.

ಮತದಾನ ಪವಿತ್ರ ಕರ್ತವ್ಯ, ಯಾರೊಬ್ಬರು ಈ ಪವಿತ್ರ ಕರ್ತವ್ಯದಿಂದ ವಂಚಿತರಾಗಬಾರದು, ವಯೋವೃದ್ಧರು, ಅಂಗವಿಕಲರು, ತೃತೀಯ ಲಿಂಗಿಗಳು ಸೇರಿದಂತೆ ಎಲ್ಲರೂ ಈ ಪವಿತ್ರ ಕರ್ತವ್ಯ ನಿಭಾಯಿಸಬೇಕು ಎಂಬ ಸದಾಶಯದೊಂದಿಗೆ ಈ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ಹೇಳಿದರು.

ಈ ಅಭಿಯಾನದ ಭಾಗವಾಗಿಯೇ ಆರು ತಿಂಗಳ ಕಾಲ ನಿರಾಶ್ರಿತ ಕೇಂದ್ರದಲ್ಲಿ ಇರುವ ನಿರಾಶ್ರಿತರಿಗೆ ಮೊದಲು ಆಧಾರ್ ಕಾರ್ಡ್ ನೋಂದಾವಣೆ ಮಾಡಿ, ನಂತರ ಅವರ ಹೆಸರುನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಮತದಾನ ದೇಶದ ಪ್ರಗತಿಯನ್ನು ಬರೆಯುವ ಒಂದು ಮುನ್ನುಡಿ. ಹೀಗಾಗಿ ಪವಿತ್ರ ಹಕ್ಕು ಹಾಗೂ ಕರ್ತವ್ಯವಾಗಿರುವ ಮತದಾನದ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯ ಬಗ್ಗೆ ವಿವಿಧ ಸ್ವರೂಪಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ತೃತಿಯ ಲಿಂಗಿಗಳಲ್ಲಿ ಜಾಗೃತಿ:

ಮತದಾರ ಪಟ್ಟಿ ಪರಿಷ್ಕರಣೆ ವಿಶೇಷ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಸುಮಾರು 60 ಜನ ತೃತೀಯ ಲಿಂಗಿಗಳನ್ನು ಜಿಲ್ಲಾಧಿಕಾರಿ ವಿಜಯಮಹಾಂತೇಶ ಖುದ್ದಾಗಿ ಭೇಟಿ ಮಾಡಿ, ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಜಾಗೃತಿ ಮೂಡಿಸಿದರು.

ಯಾವುದೇ ವ್ಯಕ್ತಿ ಪವಿತ್ರವಾದ ಮತದಾನದ ಹಕ್ಕಿನಿಂದ ದೂರ ಉಳಿಯದಂತೆ ನೋಡಿಕೊಳ್ಳಲು ಚುನಾವಣಾ ಆಯೋಗದಿಂದ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಈ ಅವಕಾಶದ ಸದುಪಯೋಗ ಪಡೆದುಕೊಂಡು ಪ್ರತಿಯೊಬ್ಬರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದರು.

ವಿಜಯಪುರ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಶೀಲ್ದಾರ್‌ ಸಿದರಾಯ ಭೋಸಗಿ, ಸ್ಥಳೀಯ ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಬಸವರಾಜ್ ಎಸ್. ನಾಟೀಕಾರ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT