ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣೆಯ ಬಾಗಿನಕ್ಕೆ ಶೃಂಗಾರಗೊಂಡ ಆಲಮಟ್ಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಇಂದು
Last Updated 20 ಆಗಸ್ಟ್ 2021, 13:05 IST
ಅಕ್ಷರ ಗಾತ್ರ

ಆಲಮಟ್ಟಿ:ಕೃಷ್ಣೆಯ ಜಲಧಿಗೆ ಬಾಗಿನ ಅರ್ಪಿಸಲು ಶನಿವಾರ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ವಾಗತಕ್ಕೆ ಆಲಮಟ್ಟಿ ಶೃಂಗಾರಗೊಂಡಿದೆ.

ಆಲಮಟ್ಟಿಯ ಡ್ಯಾಂ ವೃತ್ತ, ಪ್ರವಾಸಿ ಮಂದಿರ ಸುತ್ತಮುತ್ತಲೂ ಮುಖ್ಯಮಂತ್ರಿಗಳನ್ನು ಸ್ವಾಗತ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.ಜಲಾಶಯ ವ್ಯಾಪ್ತಿಯ ಕಟ್ಟಡಗಳಿಗೆಕಡೆ ಬಣ್ಣ, ರಸ್ತೆ ದುರಸ್ತಿ ಮಾಡಿ ಹೂವಿನ ಅಲಂಕಾರ, ಲೈಟಿಂಗ್ ವ್ಯವಸ್ಥೆಗೊಳಿಸಲಾಗಿದೆ.

ಮುಖ್ಯಮಂತ್ರಿಗಳು ಕೃಷ್ಣೆಗೆ ಬಾಗಿನ ಅರ್ಪಿಸಿದ ಬಳಿಕ ಕೆಬಿಜೆಎನ್ ಎಲ್ ಎಂಡಿ ಕಚೇರಿಯ ಸಭಾಂಗಣದಲ್ಲಿ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯನ್ನು ನಡೆಸಿ ಕೋವಿಡ್ ಹಾಗೂ ಪ್ರವಾಹ ನಿಯಂತ್ರಣದ ಬಗ್ಗೆ ಚರ್ಚಿಸಲಿದ್ದಾರೆ.

ಆಯ್ದ ಜನರಿಗೆ ಮಾತ್ರ ಅವಕಾಶ:ಕೋವಿಡ್ ಕಾರಣದಿಂದ ಬಾಗಿನ ಅರ್ಪಣೆ ಕಾರ್ಯಕ್ರಮ ಸಂಕ್ಷಿಪ್ತಗೊಳಿಸಲಾಗಿದ್ದು, ಬಾಗಿನ ಅರ್ಪಣೆ ಸ್ಥಳಕ್ಕೆ ಆಯ್ದ ಜನಪ್ರತಿನಿಧಿಗಳು, ಅವಳಿ ಜಿಲ್ಲೆಯ 10 ಜನ ಪತ್ರಕರ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಶುಕ್ರವಾರ ಆಲಮಟ್ಟಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸುನೀಲ್‌ಕುಮಾರ ತಿಳಿಸಿದರು.

ಕೆಬಿಜೆಎನ್‌ಎಲ್ ಎಂ.ಡಿ ಕಚೇರಿಯಲ್ಲಿ ಸುದ್ದಿಗೋಷ್ಠಿ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಎಲ್ಲ ಪತ್ರಕರ್ತರಿಗೆ ಅವಕಾಶ ನೀಡಲಾಗಿದೆ. ಪತ್ರಿಕಾಗೋಷ್ಠಿಯ ನಂತರ ಎಂಡಿ ಕಚೇರಿಯ ಬಲಭಾಗದ ಗೇಟ್ ಬಳಿ ಸಾರ್ವಜನಿಕರಿಗೆ ಮನವಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಭದ್ರತೆ:ಬೆಳಗಾವಿ ಉತ್ತರವಲಯದ ಐಜಿಪಿ ನೇತೃತ್ವದಲ್ಲಿ ಭದ್ರತೆ ಕಲ್ಪಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ ಎಚ್.ಡಿ. ತಿಳಿಸಿದರು.

ಜನಪ್ರತಿನಿಧಿಗಳು, ಸಾರ್ವಜನಿಕರು, ಪತ್ರಕರ್ತರು ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗದರ್ಶಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಬಾಗಿನದ ಸಿದ್ಧತೆ:ಕೃಷ್ಣೆಗೆ ಗಂಗಾಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವ ಕಾರ್ಯಕ್ರಮದ ಸಿದ್ಧತೆಯನ್ನು ಕೆಬಿಜೆಎನ್ಎಲ್ ಅಧಿಕಾರಿಗಳು ಮಾಡಿಕೊಂಡಿದ್ದಾರೆ.

ಜಲಾಶಯದಲ್ಲಿ ಬಾಗಿನ ಅರ್ಪಿಸುವ ಸ್ಥಳದ ಬಳಿ ಪೆಂಡಾಲ್ ಹಾಕಲಾಗಿದ್ದು, ಹೂವಿನ ಅಲಂಕಾರ ಮಾಡಲಾಗಿದೆ. ತಳಿರು ತೋರಣದಿಂದ ಸಿಂಗರಿಸಲಾಗಿದೆ.

67 ಜನರ ಕೋವಿಡ್ ಪರೀಕ್ಷೆ
ತಜ್ಞ ವೈದ್ಯರನ್ನೊಳಗೊಂಡ ಎರಡು ಅಂಬುಲೆನ್ಸ್ ಅನ್ನು ಆಲಮಟ್ಟಿಯಲ್ಲಿಯೇ ಕಾಯ್ದಿರಿಸಲಾಗಿದೆ. ನಾಲ್ಕು ವೈದ್ಯಕೀಯ ತಂಡ ರಚಿಸಲಾಗಿದ್ದು, ಹೆಲಿಪ್ಯಾಡ್, ಪ್ರವಾಸಿ ಮಂದಿರ, ಜಲಾಶಯ, ಸಭೆ ನಡೆಯುವ ಎಂಡಿ ಕಚೇರಿ ಬಳಿ ಬರುವ ವಿಐಪಿ ಸೇರಿದಂತೆ ಪ್ರತಿಯೊಬ್ಬರ ಥರ್ಮಲ್ ಪರೀಕ್ಷೆ, ಸ್ಯಾನಿಟೈಸೇಷನ್ ಮಾಡಿ, ಮಾಸ್ಕ್ ನೀಡಲಾಗುವುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ಎಸ್.ಎಸ್. ಓತಗೇರಿ ಹೇಳಿದರು.

ಪ್ರವಾಸಿ ಮಂದಿರದ 10 ಜನ ಬಾಣಸಿಗರು, ಐವರು ಸಿಬ್ಬಂದಿ, 40 ಜನ ಪೊಲೀಸ್ ಸಿಬ್ಬಂದಿ, ಕೆಬಿಜೆಎನ್ಎಲ್ ನ 8 ಜನ, ಆರೋಗ್ಯ ಇಲಾಖೆಯ ನಾಲ್ವರು ಸೇರಿ ಒಟ್ಟು 67 ಜನರ ಕೋವಿಡ್ (ರ‍್ಯಾಪಿಡ್ ಎಂಟಿಜೆನ್ ಟೆಸ್ಟ್) ಪರೀಕ್ಷೆ ಶುಕ್ರವಾರ ನಡೆಸಲಾಗಿದ್ದು, ಯಾರೊಬ್ಬರಿಗೂ ಪಾಸಿಟಿವ್ ಬಂದಿಲ್ಲ ಎಂದು ಡಾ ಓತಗೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT