ಬುಧವಾರ, ಜೂನ್ 16, 2021
27 °C
ವಿಜಯಪುರದಲ್ಲಿ ಕೋವಿಡ್‌ ಕರ್ಫ್ಯೂನಿಂದ ತೊಂದರೆಗೆ ಒಳಗಾದರಿಗೆ ಅನ್ನ ದಾಸೋಹ

ವಿಜಯಪುರ: ಭಿಕ್ಷುಕರಿಗೆ, ಅನಾಥರಿಗೆ ಆಸರೆಯಾದ ‘ಸ್ನೇಹಿತರು’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೋಟೆಲ್‌, ಕ್ಯಾಂಟಿನ್‌, ಅಂಗಡಿ, ಮಳಿಗೆಗಳು ಮುಚ್ಚಿರುವುದರಿಂದ ಅನ್ನಾಹಾರ ಸಿಗದೇ ಪರಿತಪಿಸುತ್ತಿರುವ ಭಿಕ್ಷುಕರಿಗೆ, ಅನಾಥರಿಗೆ ನಗರದ ಗೌಡರ ಓಣಿ ಗಣಪತಿ ಗುಡಿಯ ಸ್ನೇಹಿತರು(ಕೆಕೆಬಿ ಬಾಯ್ಸ್) ತಮ್ಮ ಸ್ವಂತ ಖರ್ಚಿನಲ್ಲಿ ಉಪಹಾರ ಪೂರೈಸುವ ಮೂಲಕ ಅವರ ಹಸಿವನ್ನು ನೀಗಿಸುತ್ತಿದ್ದಾರೆ.

ನಗರದ ಕೇಂದ್ರ ಬಸ್‌ ನಿಲ್ದಾಣ, ಮಾರುಕಟ್ಟೆ ಪ್ರದೇಶ, ಗಾಂಧಿಚೌಕ, ಮೀನಾಕ್ಷಿ ಚೌಕ, ಗಣಪತಿ ಚೌಕ, ಅಂಬೇಡ್ಕರ್‌ ಕ್ರೀಡಾಂಗಣ ಎದುರು, ರೈಲು ನಿಲ್ದಾಣ, ಬಸವೇಶ್ವರ ವೃತ್ತ, ಜಿಲ್ಲಾಸ್ಪತ್ರೆ ಎದುರು ಕಂಡುಬರುವ ಭಿಕ್ಷುಕರು, ಅನಾಥರಿಗೆ ಪ್ರತಿದಿನ ಫಲಾವ್‌, ಎಗ್‌ರೈಸ್‌, ಮಜ್ಜಿಗೆ, ನೀರನ್ನು ನೀಡುವ ಕಾಯಕದಲ್ಲಿ ಸ್ನೇಹಿತರು ತೊಡಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶ್ರೀಧರ ಮಠಪತಿ, ಕರ್ಫ್ಯೂ ಜಾರಿಯಲ್ಲಿರುವುದರಿಂದ ಭಿಕ್ಷುಕರು, ಆನಾಥರು ಹೊಟ್ಟೆಗೆ ತಿನ್ನಲು ಸಿಗದೆ ಪರದಾಡುವುದನ್ನು ನೋಡಿ ಬೇಸರ ಎನಿಸಿತು. ನಮ್ಮ ಓಣಿಯವರೇ ಆದ ಯಾಸಿನ್‌ ಸಾರವಾಡ, ಆನಂದ ದಳವಾಯಿ, ಶಿವಾನಂದ ಗೌಂಡಿ, ದಿಲೀಪ್‌ ಹಜೇರಿ, ಮತ್ತು ಅರುಣ ನಾನು ಸೇರಿಕೊಂಡು ನಮ್ಮ ಸ್ವಂತ ದುಡಿಮೆಯ ಹಣವನ್ನು ಒಟ್ಟುಗೂಡಿಸಿ ಆಹಾರ ಸಾಮಾಗ್ರಿಗಳನ್ನು ಕೊಂಡು ತಂದು, ನಾವೇ ಆಹಾರವನ್ನು ತಯಾರಿಸಿ, ವಾಹನದಲ್ಲಿ ನಗರದಲ್ಲಿ ಅಡ್ಡಾಡಿ ಎಲ್ಲೆಲ್ಲಿ ಭಿಕ್ಷುಕರು, ಅನಾಥರು ಸಿಗುತ್ತಾರೋ ಅಲ್ಲಿಗೆ ತೆರಳಿ ನೀಡುತ್ತಿದ್ದೇವೆ ಎಂದರು.

ದಿನವೊಂದಕ್ಕೆ 200ರಿಂದ 300 ಜನ ಭಿಕ್ಷುಕ್ಷರು, ಅನಾಥರಿಗೆ ಆಹಾರ ಪೂರೈಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

‘ನಾನು ಸದ್ಯ ಪುಲಕೇಶಿ ನಗರದ ಶ್ರೀ ಜಗಜ್ಯೋತಿ ಬಸವೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದೇನೆ. ಸದ್ಯ ಶಾಲೆ ಇಲ್ಲದ ಕಾರಣ ಅಣ್ಣನೊಂದಿಗೆ ಎಲೆಕ್ಟ್ರಿಕಲ್‌ ಕೆಲಸಕ್ಕೆ ಹೋಗುತ್ತೇನೆ. ದಿನವೊಂದಕ್ಕೆ ₹ 400 ಕೂಲಿ ಹಣ ಸಿಗುತ್ತದೆ. ಈ ಹಣವನ್ನೇ ಭಿಕ್ಷುಕರಿಗೆ, ಅನಾಥರಿಗೆ ಉಪಹಾರ ಮಾಡಿಕೊಡಲು ನೀಡುತ್ತಿದ್ದೇನೆ’ ಎಂದರು.

‘ನನ್ನಂತೆಯೇ ನನ್ನ ಸ್ನೇಹಿತರು ತಾವು ದುಡಿದ ಹಣವನ್ನು ನೀಡುತ್ತಿದ್ದಾರೆ. ಎಲ್ಲರೂ ಒಟ್ಟುಗೂಡಿಸಿ ಅಂಗಡಿಯಿಂದ ಸಾಮಾನು ತಂದು, ನಾವೇ ಸ್ವತಃ ಅಡುಗೆ ತಯಾರಿಸಿ ಹಂಚುತ್ತಿದ್ದೇವೆ’ ಎಂದು ತಿಳಿಸಿದರು.

ಅನಾಥರಿಗೆ, ಭಿಕ್ಷುಕರಿಗೆ ಅನ್ನಾಹಾರ ನೀಡುತ್ತಿರುವುದರಿಂದ ನಮ್ಮ ಮನಸ್ಸಿಗೆ ಖುಷಿಯಾಗಿದೆ. ನಮ್ಮ ಕೈಯಿಂದ ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಮಾಡುತ್ತೇವೆ. ಯಾರಾದರೂ ನಮಗೆ ಸಹಾಯ ಮಾಡಿದರೆ ಲಾಕ್‌ಡೌನ್‌ ಮುಗಿಯುವವರೆಗೂ ಪೂರೈಕೆ ಮಾಡುವ ಯೋಜನೆ ಇದೆ ಎಂದು ಹೇಳಿದರು.

‘ಕೋವಿಡ್‌ ಹಿನ್ನೆಲೆಯಲ್ಲಿ ನಾವು ಸಹ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಕೈಗೆ ಗ್ಲೌಸ್‌, ಮುಖಕ್ಕೆ ಮಾಸ್ಕ್‌, ಸ್ಯಾನಿಟೈಸ್‌ ಬಳಕೆ ಮಾಡುತ್ತಿದ್ದೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು