ವಿಜಯಪುರ: ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರ ವರ್ತನೆ ಖಂಡಿಸಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ನಗರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಜಾಥಾ ನಡೆಸಲಾಯಿತು.
ನಗರದ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಮಹಾತ್ಮ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ರಾಜ್ಯಪಾಲರು ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರು ಮನಸ್ಸಿಗೆ ಬಂದಂತೆ ಅವಹೇಳನಕಾರಿಯಾಗಿ ಹಾಗೂ ಏಕವಚನ ಪ್ರಯೋಗ ಮಾಡುವ ಮೂಲಕ ಸಂವಿಧಾನ ಹುದ್ದೆಯಲ್ಲಿರುವ ರಾಜ್ಯಪಾಲರನ್ನು ನಿಂದಿಸಿರುವುದು ಖಂಡನೀಯ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಸಿಲುಕಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ಈ ಮೂಲಕ ಸಿದ್ದರಾಮಯ್ಯನವರ ಅಸಲಿ ಮುಖ ಹೊರ ಬಂದಿದೆ. ಕೂಡಲೇ ರಾಜೀನಾಮೆ ನೀಡಿ, ತನಿಖೆಗೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವರ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಅರುಣ ಶಹಾಪುರ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕೋಳಕೂರ, ಈರಣ್ಣ ಪಟ್ಟಣಶೆಟ್ಟಿ, ಶಿವರುದ್ರ ಬಾಗಲಕೋಟ, ಪ್ರಭುಗೌಡ ಅಸ್ಕಿ, ಸಿದ್ದು ಬುಳ್ಳಾ, ಮಂಜುನಾಥ್ ಮೀಸೆ, ಗುರುಲಿಂಗಪ್ಪ ಅಂಗಡಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಕಾಸುಗೌಡ ಬಿರಾದಾರ, ಸಂಜು ಐಹೊಳಿ,ಸಂಜಯ ಪಾಟೀಲ ಕನಮಡಿ, ಮಳುಗೌಡ ಬಿರಾದಾರ, ಮಹೇಂದ್ರ ನಾಯಕ, ಎಂ.ಎಸ್.ಕರಡಿ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟ, ಸ್ವಪ್ನಾ ಕಣಮುಚನಾಳ, ಕುಮಾರ ಗಡಗಿ, ಮಹೇಶ ಒಡೆಯರ, ವಿಕ್ರಮ ಗಾಯಕವಾಡ, ವಿಜಯ ಜೋಶಿ, ರಾಹುಲ ಜಾಧವ, ಲಕ್ಷ್ಮೀ ಕನ್ನೊಳ್ಳಿ ಇದ್ದರು.