ಶನಿವಾರ, ಮಾರ್ಚ್ 25, 2023
23 °C

‘ರಕ್ತದಾನದಿಂದ ಇನ್ನೊಬ್ಬರ ಬಾಳಿಗೆ ನೆರವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ರಕ್ತದಾನದಿಂದ ಇನ್ನೊಬ್ಬರ ಆರೋಗ್ಯಕರ ಬಾಳಿಗೆ ನೆರವಾಗುವುದು ಸಾರ್ಥಕ ಮನೋಭಾವ ಮೂಡಿಸಲಿದೆ ಎಂದು ಇಂಡಿ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಹೇಳಿದರು.

ಇಂಡಿ ತಾಲ್ಲೂಕು ಆರೋಗ್ಯ ಇಲಾಖೆ, ವೈದ್ಯಕೀಯ ಸಂಘ, ಜಿಲ್ಲಾ ರಕ್ತನಿಧಿ ಘಟಕ, ನೆಹರು ಯುವ ಕೇಂದ್ರ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಶಾಖೆ, ಶ್ರೀ ಬಸವರಾಜೇಂದ್ರ ಗಜಾನನ ಯುವಕ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ವಿಶ್ವ ವೈದ್ಯರ ದಿನಾಚರಣೆ ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆ ಅಂಗವಾಗಿ ಇಂಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಆದ್ದರಿಂದ ಆರೋಗ್ಯವಾಗಿರುವ ಎಲ್ಲರೂ ರಕ್ತದಾನಕ್ಕೆ ಮುಂದೆ ಬರಬೇಕು ಎಂದರು.

ಇಂಡಿ ತಾಲ್ಲೂಕು ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ ಮಾತನಾಡಿ, 18 ರಿಂದ 60 ವರ್ಷದೊಳಗಿನವರು ರಕ್ತದಾನ ಮಾಡಬಹುದು. ಸಿಸೇರಿಯನ್ ಸೇರಿದಂತೆ ಹಲವು ಶಸ್ತ್ರ ಚಿಕಿತ್ಸೆಗಳಿಗೆ ರಕ್ತದ ಅವಶ್ಯಕತೆಯಿದ್ದು, ಸಾರ್ವಜನಿಕರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವದ ಉಳಿವಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಇಂಡಿ ವೈದ್ಯಕೀಯ ಸಂಘದ ಡಾ.ಪ್ರಶಾಂತ್ ದೊಮ್ಮಗೊಂಡ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಆಂಶವನ್ನು ಹೊರಹಾಕಬಹುದಾಗಿದೆ. ಅಲ್ಲದೆ ದೇಹದಲ್ಲಿ ಚೈತನ್ಯ ವೃದ್ಧಿಯಾಗಿ, ಕ್ರಿಯಾಶೀಲರಾಗಿರಲು ಸಹಕಾರಿಯಾಗಲಿದೆ ಎಂದರು.

ಸಾರ್ವಜನಿಕರು ಸುಳ್ಳು ಹೇಳಿಕೆಗಳಿಗೆ ಕಿವಿಗೊಡದೆ, ಅಂಜಿಕೆ ಮನೋಭಾವವನ್ನು ಬಿಟ್ಟು ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ ಸ್ವತಃ ವೈದ್ಯರು ರಕ್ತದಾನ ಮಾಡಿದರು. ನಂತರ ಯುವಕರು, ಕಾಲೇಜು ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ನೆಹರು ಯುವ ಕೇಂದ್ರದ ಸ್ವಯಂಸೇವಕರು ರಕ್ತದಾನ ಮಾಡಿದರು.

ವೈದ್ಯಾಧಿಕಾರಿ ಡಾ.ಆರ್.ಟಿ.ಕೊಳೇಕರ, ಡಾ.ಮಲ್ಲಿಕಾರ್ಜುನ ಅಂಕಲಗಿ, ರಾಹುಲ್ ಡೋಂಗ್ರೆ, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಂವಹನ ಶಾಖೆ ಸಿ.ಕೆ.ಸುರೇಶ್ ಶಿಬಿರದಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು