ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರದ ನಿರೀಕ್ಷೆ ಹುಸಿಗೊಳಿಸಿದ ಬೊಮ್ಮಾಯಿ ಬಜೆಟ್‌

ಯುಕೆಪಿ ಮೂರನೇ ಹಂತ ಅನುಷ್ಠಾನಕ್ಕೆ ಕೇವಲ ₹ 5 ಸಾವಿರ ಕೋಟಿ!
Last Updated 4 ಮಾರ್ಚ್ 2022, 15:02 IST
ಅಕ್ಷರ ಗಾತ್ರ

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಚೊಚ್ಚಲ ಬಜೆಟ್‌ ಕೃಷ್ಣಾ ತೀರದ ಜನರನ್ನು ನಿರಾಶೆಗೊಳಿಸಿದೆ.

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರೂ ಕೃಷ್ಣಾ ತೀರದವರೇ ಆಗಿರುವುದರಿಂದ ಹಾಗೂ ಉತ್ತರ ಕರ್ನಾಟಕದವರೇ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿ ಆಳವಾದ ಅನುಭವ ಮತ್ತು ವಾಸ್ತವದ ಅರಿವಿರುವುದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಅನುಷ್ಠಾನಕ್ಕೆ ದೊಡ್ಡ ಪ್ರಮಾಣದ ಅನುದಾನ ಹರಿದುಬರುವ ನಿರೀಕ್ಷೆ ಹುಸಿಯಾಗಿದೆ.

ಆಲಮಟ್ಟಿ ಜಲಾಶಯವನ್ನು 524 ಮೀಟರ್‌ಗೆ ಎತ್ತರಿಸುವ, 20 ಹಳ್ಳಿಗಳನ್ನು ಸ್ಥಳಾಂತರಿಸುವ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಅಂದಾಜು ₹ 1ಲಕ್ಷ ಕೋಟಿ ಅನುದಾನದ ನಿರೀಕ್ಷೆ ಇದೆ. ಆದರೆ, ಬಜೆಟ್‌ನಲ್ಲಿಯುಕೆಪಿಗೆ ಕೇವಲ ₹ 5 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ₹ 3 ಸಾವಿರ ಕೋಟಿ ಮೊತ್ತದ ಬಾಕಿ ಬಿಲ್‍ಗಳೇ ಇವೆ ಎನ್ನಲಾಗುತ್ತಿದೆ. ಅಲ್ಲದೇ, ಎಸ್‍ಸಿಪಿ, ಟಿಎಸ್‌ಪಿ ಯೋಜನೆಗೆ ಮತ್ತು ಆಡಳಿತಾತ್ಮಕ ಖರ್ಚುಗಳು ವೆಚ್ಚ ಮಾಡಿದರೆ, ಯುಕೆಪಿಗೆ ಸಂಬಂಧಿಸಿದ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಆಗುವುದಿಲ್ಲ. ಅಲ್ಲದೇ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಈ ಅನುದಾನ ಏತಕ್ಕೂ ಸಾಲದಾಗಿದೆ.

ಇಂಡಿ, ಚಡಚಣ ಮತ್ತು ಬಬಲೇಶ್ವರ ತಾಲ್ಲೂಕಿನ ಬಹುನಿರೀಕ್ಷಿತ ರೇವಣ ಸಿದ್ದೇಶ್ವವರ ಏತ ನೀರಾವರಿ ಯೋಜನೆ, ಚಡಚಣ ಏತ ನೀರಾವರಿ ಯೋಜನೆಗೆ ಜಿಲ್ಲೆಯವರೇ ಆದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ವಿಶೇಷ ಆಸಕ್ತಿ ವಹಿಸಿ ಅನುದಾನ ಒದಗಿಸುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ.

ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ನಿರೀಕ್ಷೆ ಇತ್ತು. ಆಲಮೇಲದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆಗೆ ಅನುದಾನ ನಿರೀಕ್ಷಿಸಲಾಗಿತ್ತು. ಅನುದಾನ ಕೊರತೆ ಅನುಭವಿಸುತ್ತಿರುವ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ ನಿರೀಕ್ಷೆ ಇತ್ತು.

ಹೊಸದಾಗಿ ನಿರ್ಮಾಣ ಹಂತದಲ್ಲಿರುವವಿಜಯಪುರ ವಿಮಾನ ನಿಲ್ದಾಣದ ಎರಡನೇ ಹಂತದ ಅನುಷ್ಠಾನಕ್ಕೆ ಮತ್ತಷ್ಟು ಅನುದಾನದ ಅಗತ್ಯವಿತ್ತು. ಕಳೆದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಇಟ್ಟಿಂಗಿಹಾಳ ಫುಡ್‌ ಪಾರ್ಕ್‌ ಆರಂಭಕ್ಕೆ ಅನುದಾನ, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್‌ ನಿರೀಕ್ಷೆ ಇತ್ತು. ಆದರೆ, ಇದಾವುದು ಬಜೆಟ್‌ನಲ್ಲಿ ಪ್ರಸ್ತಾವವೇ ಆಗಿಲ್ಲ.

ಲಿಂಬೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಾಗೂ ದ್ರಾಕ್ಷಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಇವುಗಳಿಗೂ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ.

*****

ವಿಜಯಪುರಕ್ಕೆ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿರುವ ಪ್ರಸಕ್ತ ಆಯವ್ಯಯದಲ್ಲಿ ವಿಜಯಪುರಕ್ಕೆ ಅನೇಕ ಕೊಡುಗೆ ನೀಡಿದ್ದಾರೆ.

*ಕೇಂದ್ರ ಸರ್ಕಾರದ ನೆರವಿನೊಂದಿಗೆ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್ ನಿರ್ಮಾಣ

*ತೊರವಿ ಗ್ರಾಮದಲ್ಲಿ ₹35 ಕೋಟಿ ಅನುದಾನದಲ್ಲಿ ಅತ್ಯಾಧುನಿಕ ಕೋಲ್ಡ್‌ ಸ್ಟೋರೇಜ್‌ ಸ್ಥಾಪನೆಗೆ ಕ್ರಮ

*ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತ(ಸರ್ಕ್ಯೂಟ್‌) ನಿರ್ಮಾಣ

*ವಿಜಯಪುರದಲ್ಲಿ ಸ್ವಯಂಚಾಲಿತ ಚಾಲನಾ ಪರೀಕ್ಷಾ ಪಥಗಳನ್ನು ರಸ್ತೆ ಸುರಕ್ಷತಾ ನಿಧಿಯಡಿ ಸ್ಥಾಪನೆ

*ಕೇಂದ್ರ ಸರ್ಕಾರದ ಪಿಎಂಕೆಎಸ್‌ವೈ/ಎಐಬಿಪಿಗೆ ಜಿಲ್ಲೆಯ ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯನ್ನು ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT