ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಸ್ತಕ ಜ್ಞಾನದ ಜೊತೆ ಸಂಸ್ಕೃತಿ, ಸಂಸ್ಕಾರ ಅಗತ್ಯ’

Last Updated 28 ನವೆಂಬರ್ 2022, 10:33 IST
ಅಕ್ಷರ ಗಾತ್ರ

ವಿಜಯಪುರ:ವಿದ್ಯಾರ್ಥಿಗಳಿಗೆ ಪುಸ್ತಕ ಜ್ಞಾನದ ಜೊತೆಗೆ ಉತ್ತಮ ಸಂಸ್ಕೃತಿ, ಸಂಸ್ಕಾರವು ಅತ್ಯವಶ್ಯಕ ಎಂದು ಎಕ್ಸಲಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.

ನಗರದ ಅಥಣಿ ರಸ್ತೆಯ ಕೆ.ಎಸ್.ಆರ್.ಟಿ.ಸಿ. ಕಾಲೊನಿಯಲ್ಲಿರುವ ಎಕ್ಸಲಂಟ್ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಕನ್ನೂರಿನ ಶಾಂತಿ ಕುಟೀರದ ಭಾರತೀಯ ಸುರಾಜ್ಯ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜ್ಞಾನ ಸಂವರ್ಧಿನಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಸಾಧನೆಯಲ್ಲಿ ರ‍್ಯಾಂಕ್‌ ಬರುವುದರ ಜೊತೆಗೆ ಸರ್ವಾಂಗೀಣ ವಿಕಸನವಾದಾಗ ಸರ್ವೋತ್ತಮ ಸಾಧನೆಗೈಯಲು ಸಾಧ್ಯ. ಸ್ವದೇಶಿ ಚಿಂತನೆ, ಧ್ಯಾನ, ಸತ್ಸಂಗ, ಯೋಗ ಇವೆಲ್ಲ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಾರಣವಾಗಿವೆ ಎಂದರು.

ಕೊರೊನಾ ನಂತರ ಶೈಕ್ಷಣಿಕ ಚಟುವಟಿಕೆಗಳು ಉತ್ತಮಗೊಂಡಿವೆ. ಆದರೆ, ಆನ್‍ಲೈನ್ ಕ್ಲಾಸ್‌ಗಳ ನೆಪದಲ್ಲಿ ಮೊಬೈಲ್ ಪೋನ್‍ಗಳಿಗೆ ದಾಸರಾದ ವಿದ್ಯಾರ್ಥಿ ಸಮೂಹದ ಮನಸ್ಸು ಏಕಾಗ್ರತೆಗೊಳ್ಳಲು ಇಂತಹ ಶಿಬಿರಗಳು ಚೇತೋಹಾರಿಯಾಗಿವೆ ಎಂದು ಹೇಳಿದರು.

ನರ್ಮದಾ ಯೋಗಿ ಕೃಷ್ಣಾ ಗುರು ಮಾತನಾಡಿ, ‘ಹರಿಯುವ ಮನಸ್ಸನ್ನು ಏಕಾಗ್ರತೆಗೊಳಿಸುವುದೇ ಸತ್ಸಂಗ. ಕೈ ಕಾಲುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಅಂಗಶಕ್ತಿ ಹೀನವಾಗತ್ತದೆ. ಹಾಗೆಯೇ ಬುದ್ಧಿ ಬಳಕೆ ಮಾಡಿಕೊಳ್ಳದಿದ್ದರೆ ವ್ಯರ್ಥವಾಗುತ್ತದೆ. ನಮ್ಮಲ್ಲಿ ಎಲ್ಲವೂ ಇದೆ ಬಳಸಿಕೊಳ್ಳುವ ಜಾಣ್ಮೆ ಇರಬೇಕು.ನಮ್ಮನ್ನು ನಮಗೆ ಪರಿಚಯಿಸುವುದೇ ಗುಣಾತ್ಮಕ ಶಿಕ್ಷಣ ಎಂದು ಹೇಳಿದರು.

ಸಂಶೋಧಕ ಡಾ.ಆನಂದ ಕುಲಕರ್ಣಿ, ಸಂಪನ್ಮೂಲ ವ್ಯಕ್ತಿ ಪ್ರಕಾಶ ಪತ್ತಾರ, ವಿಶ್ವನಾಥ ಹೀರೆಮಠ, ಭಾರತೀಯ ಸುರಾಜ್ಯ ಸಂಸ್ಥೆಯ ಉಪಧ್ಯಾಕ್ಷ ಶ್ರೀನಿವಾಸ ಕುಲಕರ್ಣಿ, ಪ್ರಾಚಾರ್ಯ ಡಿ.ಎಲ್.ಬನಸೋಡೆ,ಶರಣಗೌಡ ಪಾಟೀಲ, ರಾಮಾನಂದ, ವಿವೇಕ ಕುಲಕರ್ಣಿ, ಚೈತ್ರಾ ಹೆಬ್ಬಿ, ಸ್ಪೂರ್ತಿ, ಸಾಧನಾ, ಯೋಗ ಗುರು ರಾಜೇಶ ಪೋಳ, ಮಹೇಶ ಮೇತ್ರಿ, ಮಂಜುನಾಥ ಬಾಲಗಾಂವ, ಪ್ರಶಾಂತ, ಗೋಪಾಲ ಇದ್ದರು.

ಶಿಬಿರದಲ್ಲಿ ಧ್ಯಾನ, ಯೋಗಾಸನ, ರಾಷ್ಟ್ರ ಧ್ವಜಾರೋಹಣ, ಸಸಿನೆಡುವ, ಶ್ರಮದಾನ, ಉಪನ್ಯಾಸ, ವಿಭಿನ್ನ ಆಟಗಳು, ಭಜನೆ, ಹಾಡು ವಿವಿಧ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT