ಸೋಮವಾರ, ನವೆಂಬರ್ 30, 2020
27 °C
ಕರ್ನಾಟಕ ರಾಜ್ಯೋತ್ಸವದಲ್ಲಿ ಭರವಸೆ

ಅತಿವೃಷ್ಟಿ: ಚಡಚಣ, ತಿಕೋಟಾ ಸೇರ್ಪಡೆ ಶೀಘ್ರ ಎಂದ ಸಚಿವೆ ಶಶಿಕಲಾ ಜೊಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನೆರೆ, ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಚಡಚಣ ಮತ್ತು ತಿಕೋಟಾ ತಾಲ್ಲೂಕುಗಳನ್ನು ಸಹ ಅತಿವೃಷ್ಟಿ ಪೀಡಿತ ತಾಲ್ಲೂಕು ಎಂದು ಘೋಷಿಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯ 10 ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ಮಳೆ, ಪ್ರವಾಹದ ನೀರು ಮನೆಗಳಿಗೆ ನುಗ್ಗಿ ಸಂತ್ರಸ್ತರಾದವರಿಗೆ ₹ 10 ಸಾವಿರ, ದಕ್ಷಿಣ ಕರ್ನಾಕದವರಿಗೆ ₹ 25 ಸಾವಿರ ಪರಿಹಾರ ನೀಡುವ ಮೂಲಕ ತಾರತಮ್ಯ ಮಾಡಲಾಗಿದೆ ಎಂಬ ಶಾಸಕ ಬಸನಗೌಡ ಪಾಟೀಲ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪರಿಶೀಲಿಸಿ, ಅನ್ಯಾಯವಾಗಿದ್ದರೆ ತಕ್ಷಣ ಸರಿಪಡಿಸಲಾಗುವುದು ಎಂದು ತಿಳಿಸಿದರು.

ಮನೆಗಳಿಗೆ ಪ್ರವಾಹ, ಮಳೆ ನೀರು ನುಗ್ಗಿ ನಷ್ಟ ಅನುಭವಿಸಿದ ಜಿಲ್ಲೆಯ 4041 ಕುಟುಂಬಗಳಿಗೆ ತಲಾ ₹10 ಸಾವಿರ ಪರಿಹಾರ ಧನ ನೀಡಲಾಗಿದೆ ಎಂದರು.

ಸಮೀಕ್ಷೆಯ ಪ್ರಕಾರ 4 ಸಾವಿರಕ್ಕೂ ಹೆಚ್ಚಿನ ಮನೆಗಳು, ₹ 1311 ಕೋಟಿ ಅಂದಾಜು ಮೌಲ್ಯದ ಬೆಳೆ ಹಾಗೂ ಮೂಲಸೌಲಭ್ಯಗಳು ಅತಿವೃಷ್ಟಿ, ಪ್ರವಾಹದಿಂದಾಗಿ ಹಾನಿಯಾಗಿದೆ ಎಂದು ಹೇಳಿದರು.

₹ 125 ಕೋಟಿ ಮಂಜೂರು: ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ವಿಜಯಪುರ ನಗರಕ್ಕೆ ಮಂಜೂರಾಗಿದ್ದ ₹125 ಕೋಟಿಯನ್ನು ರಾಜ್ಯ ಸರ್ಕಾರ ನೀಡಲು ಒಪ್ಪಿದೆ. ಇದರಿಂದ ನಗರದ ರಸ್ತೆಗಳು ಅಭಿವೃದ್ಧಿಯಾಗಲಿವೆ ಎಂದು ಹೇಳಿದರು. 

‘ಯತ್ನಾಳಣ್ಣಗೆ ಹಾಗೇಕೆ ಅನ್ನಿಸಿತೋ ಗೊತ್ತಿಲ್ಲ’
ವಿಜಯಪುರ: ಬಿ.ಎಸ್‌.ಯಡಿಯೂರಪ್ಪ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ನನಗನಿಸುವುದಿಲ್ಲ’ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ ಜೊಲ್ಲೆ, ‘ಯತ್ನಾಳಣ್ಣಗೆ ಹಾಗೇಕೆ ಅನ್ನಿಸಿತೋ ನನಗೆ ಗೊತ್ತಿಲ್ಲ’ ಎಂದರು.

ಯಡಿಯೂರಪ್ಪ ಮೂರು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಆದರೆ, ಯತ್ನಾಳ ಅವರು ವಿರುದ್ಧ ಹೀಗೆಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು