ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

112ಕ್ಕೆ ಕರೆ ಮಾಡಿರಿ; ತುರ್ತು ಸೇವೆ ಪಡೆಯಿರಿ

ಜಿಲ್ಲೆಗೆ 14 ಇಆರ್‌ಎಸ್‌ಎಸ್‌ ವಾಹನ; ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌
Last Updated 23 ಜನವರಿ 2021, 13:08 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರದ ‘ಒಂದು ದೇಶ; ಒಂದು ತುರ್ತು ಪೊಲೀಸ್‌ ಸಂಖ್ಯೆ’ ಯೋಜನೆಯಡಿ ಜಿಲ್ಲೆಗೆ ಒದಗಿಸಲಾಗಿರುವ ಇಆರ್‌ಎಸ್‌ಎಸ್ ‌(Emergency Response Support System) ಪೊಲೀಸ್‌ ವಾಹನಗಳ ಕಾರ್ಯಾರಂಭಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಶನಿವಾರ ಹಸಿರು ನಿಶಾನೆ ತೋರಿದರು.

ನಗರದ ಗಾಂಧಿ ಚೌಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಆರ್‌ಎಸ್‌ಎಸ್‌ ವಾಹನಗಳನ್ನು ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ‘ಒಂದು ದೇಶ; ಒಂದು ತುರ್ತು ಪೊಲೀಸ್‌ ಸಂಖ್ಯೆ’ ಎಂಬ ಯೋಜನೆಯಡಿ ಜಿಲ್ಲೆಗೆ 14 ಇಆರ್‌ಎಸ್‌ಎಸ್‌‌ ವಾಹನಗಳನ್ನು ನೀಡಲಾಗಿದೆ ಎಂದರು.

ಅಪಘಾತ, ದರೋಡೆ, ಕಳವು, ಗಲಾಟೆಗಳು ನಡೆದಾಗ ಸಾರ್ವಜನಿಕರು 112 ನಂಬರ್‌ಗೆ ಕರೆ ಮಾಡಿದರೆ ಕೇವಲ 15 ನಿಮಿಷಗಳ ಒಳಗಾಗಿ ಸ್ಥಳಕ್ಕೆ ಇಆರ್‌ಎಸ್‌ಎಸ್‌ ವಾಹನದ ಮೂಲಕ ಪೊಲೀಸರು ಬರಲಿದ್ದಾರೆ ಎಂದು ತಿಳಿಸಿದರು.

ಇಆರ್‌ಎಸ್‌ಎಸ್‌ಗೆ ಕಂಟ್ರೋಲ್‌ ರೂಂ ಬೆಂಗಳೂರಿನಲ್ಲಿದ್ದು,ಕರೆ ಬಂದ ತಕ್ಷಣ ಸಂಬಂಧಿಸಿದ ವ್ಯಾಪ್ತಿಯಲ್ಲಿರುವ ಇಆರ್‌ಎಸ್‌ಎಸ್‌ ವಾಹನಕ್ಕೆ‌ ಕೇವಲ 15 ಸೆಕೆಂಡ್‌ನಲ್ಲಿ‌ ಮಾಹಿತಿ ಲಭಿಸಲಿದೆ. ಅವರು 15 ನಿಮಿಷಗಳ ಒಳಗಾಗಿ ಘಟನಾ ಸ್ಥಳಕ್ಕೆ ಧಾವಿಸಲಿದ್ದಾರೆ ಎಂದು ಹೇಳಿದರು.

ಈ ಸೇವೆಯಿಂದ ಪೊಲೀಸ್‌ ಠಾಣೆಗಳ ಮೇಲಿನ ಒತ್ತಡ ಶೇ 30ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಇದರ ನಿರ್ವಹಣೆಗಾಗಿ ಈಗಾಗಲೇ ಜಿಲ್ಲೆಯಲ್ಲಿ 126 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಒಬ್ಬ ಪಿಎಸ್‌ಐ ಅವರನ್ನು ನಿಯೋಜಿಸಲಾಗಿದೆ ಎಂದರು.

ಒಂದು ವಾಹನದಲ್ಲಿ ಎಎಸ್‌ಐ, ಹೆಡ್‌ ಕಾನ್‌ಸ್ಪೆಬಲ್‌, ಕಾನ್‌ಸ್ಟೆಬಲ್‌, ಚಾಲಕ ಇರಲಿದ್ದಾರೆ. ಒಟ್ಟು ಮೂರು ಸಿಫ್ಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಇಆರ್‌ಎಸ್‌ಎಸ್‌ ಕುರಿತು ಜನರಿಗೆ ಜಾಗೃತಿ ಮೂಡಿಸಲು ಪೋಸ್ಟರ್‌, ಕರಪತ್ರಗಳನ್ನು ಹಂಚಲಾಗುತ್ತಿದೆ. ವಾಟ್ಸ್‌ ಆ್ಯಪ್‌ ಮೂಲಕವೂ ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಇಂಡಿ ಡಿವೈಎಸ್‌ಪಿ ಶ್ರೀಧರ ದೊಡ್ಡಿ, ಬಸವನ ಬಾಗೇವಾಡಿ ಡಿವೈಎಸ್‌ಪಿ ಈ ಶಾಂತವೀರ, ಡಿವೈಎಸ್‌ಎಪಿಗಳಾದ ತುಳಜಪ್ಪ ಎಸ್‌.ಸುಲ್ಫಿ, ಪ್ರಭುಗೌಡ ಪಾಟೀಲ, ಸಿಪಿಐ ರವೀಂದ್ರ ನಾಯ್ಕೊಡಿ, ಜುಟ್ಟಿಲ್‌, ವಾಗ್ಮೋರೆ, ಪಿಎಸ್‌ಐ ಶಂಕರಗೌಡರ, ಆನಂದ ಠಕ್ಕಣ್ಣವರ, ಆರಿಫ್‌ ಮುಶಾಪುರಿ ಇದ್ದರು.

***

ತೊಂದರೆಯಲ್ಲಿರುವವರ ಮನೆ ಬಾಗಿಲಿಗೆ ಪೊಲೀಸ್‌ ಸೇವೆ ಒದಗಿಸಬೇಕು, ಅನಗತ್ಯವಾಗಿ ಠಾಣೆಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಈ ವಾಹನ ನೀಡಲಾಗಿದೆ

- ಅನುಪಮ್‌ ಅಗವರಾಲ್‌, ಎಸ್‌ಪಿ, ವಿಜಯಪುರ

****

112 ಇಆರ್‌ಎಸ್‌ಎಸ್‌ ಸಹಾಯವಾಣಿ ಸಂಖ್ಯೆ

15 ನಿಮಿಷದಲ್ಲಿ ಸ್ಥಳಕ್ಕೆ ಪೊಲೀಸ್‌ ಆಗಮನ

ಒಂದು ದೇಶ; ಒಂದು ತುರ್ತು ಪೊಲೀಸ್‌ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT