ಭಾನುವಾರ, ಜೂನ್ 20, 2021
26 °C
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘಟನೆಯಿಂದ ಆನ್‌ಲೈನ್‌ ಪ್ರತಿಭಟನೆ

ಕಟ್ಟಡ ಕಾರ್ಮಿಕರಿಗೆ ಹಣಕಾಸಿನ ನೆರವು ಒದಗಿಸಲು ಆಗ್ರಹ: ಆನ್‌ಲೈನ್‌ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೋವಿಡ್‌ ಲಾಕ್‌ಡೌನ್‌ ಪರಿಣಾಮ ನಿರುದ್ಯೋಗಿಗಳಾಗಿರುವ ರಾಜ್ಯದ ನೋಂದಾಯಿತ ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಹಣಕಾಸಿನ ನೆರವು  ಘೋಷಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘಟನೆಯಿಂದ ಜಿಲ್ಲೆಯಾದ್ಯಂತ ಕಟ್ಟಡ ಕಾರ್ಮಿಕರು ಶನಿವಾರ ಆನ್‌ಲೈನ್‌ ಪ್ರತಿಭಟನೆ ನಡೆಯಿತು.

ಕೊವೀಡ್ ಎರಡನೇ ಅಲೆಯ ಅಪಾಯವು ಮುಂದಿನ ಕನಿಷ್ಠ ಒಂದು ವರ್ಷದ ವರೆಗೂ ಇರಲಿದೆ ಎಂದು ತಜ್ಞರು ಎಚ್ವರಿಕೆ  ನೀಡಿದ್ದಾರೆ. ಇದರಿಂದಾಗಿ ಬಹುತೇಕ ಕಟ್ಟಡ ಕಾರ್ಮಿಕರಿಗೆ ಇವು ಅತ್ಯಂತ ಸಂಕಷ್ಟದ ದಿನಗಳಾಗಿದ್ದು, ಕಾರ್ಮಿಕರ ಪ್ರಮುಖ  ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತವಾದ ಎಲ್ಲ ಕಾರ್ಮಿಕರಿಗೂ ಕೊವೀಡ್ ಎರಡನೇ ಅಲೆಯ ಪರಿಹಾರವೆಂದು ತಿಂಗಳಿಗೆ ₹10 ಸಾವಿರ ಪರಿಹಾರವನ್ನು ಮುಂದಿನ ಕನಿಷ್ಠ ಮೂರು ತಿಂಗಳು ಹಾಲಿ ಮಂಡಳಿಯಲ್ಲಿ ನೋಂದಾವಣೆಯಾಗಿರುವ ಮತ್ತು ನೋಂದಾವಣೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲ ಕಾರ್ಮಿಕರ ಬ್ಯಾಂಕ್ ಖಾತೆಗೆ ಮೇ 1ರಿಂದಲೇ ಅನ್ವಯವಾಗುವಂತೆ ಹಣ ವರ್ಗಾವಣೆಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ ಘೋಷಿಸಲಾದ ₹ 5 ಸಾವರ ಕೊವೀಡ್ ಪರಿಹಾರ ಹಣ ಬಾಕಿ ಇರುವ 1 ಲಕ್ಷ ಕಾರ್ಮಿಕರಿಗೆ ಕೂಡಲೇ ಹಣ ವರ್ಗಾವಣೆಮಾಡಬೇಕು ಎಂದು ಆಗ್ರಹಿಸಿದರು.

ಕೊವೀಡ್ ಸಮಯದಲ್ಲಿ ಶೈಕ್ಷಣಿಕ ಮತ್ತು ಪಿಂಚಣಿ, ಮದುವೆ, ವೈದ್ಯಕೀಯ ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು ಮೇ 30 ರವರೆಗೆ ವಿಸ್ತರಿಸಲಾದ ಅವಧಿಯನ್ನು ಮುಂದಿನ ಮೂರು ತಿಂಗಳವರೆಗೆ ವಿಸ್ತರಿಸಿ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

ಅರ್ಜಿ ಸಲ್ಲಿಸಿ ಇತ್ಯರ್ಥವಾಗದೇ ಉಳಿದಿರುವ ಎಲ್ಲ ಫಲಾನುಭವಿಗಳ ಸೌಲಭ್ಯಗಳ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಿ  ಅವರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಹೇಳಿದರು.

ಕೊವೀಡ್ ಎರಡನೇ ಅಲೆಯಿಂದ ಮತ್ತೆ ಸಂಕಷ್ಟಕ್ಕೆ ಸಿಲುಕಿರುವ ಅಂತರ ರಾಜ್ಯ ಮತ್ತು ಅಂತರ ಜಿಲ್ಲೆಗಳ ಬಹುತೇಕ ಎಲ್ಲ ವಲಸೆ ಕಾರ್ಮಿಕರು ಈಗಾಗಲೇ ಜೀವ ಭಯದಿಂದ ಬೆಂಗಳೂರು ಮತ್ತು ಕರ್ನಾಟಕವನ್ನು ತೊರೆದು ಹೋಗಿದ್ದಾರೆ. ಆದಾಗ್ಯೂ ಇನ್ನೂ ಯಾರಾದರೂ ಇಲ್ಲಿ ಉಳಿದಿದ್ದರೆ ಅಂತಹ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಉಚಿತ ಊಟ, ವಸತಿ ಮತ್ತು  ಅವರು ತಮ್ಮ ಊರುಗಳಿಗೆ ತೆರಳಲು ಬಯಸಿದರೆ ಅಂತಹವರಿಗೆ ಉಚಿತ ಸಾರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಕಟ್ಟಡ ನಿರ್ಮಾಣ ವಲಯದ ಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಉಚಿತವಾದ ಲಸಿಕೆಯನ್ನು ಕಾಲ ಮಿತಿಯಲ್ಲಿ ಹಾಕಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭನೆಯಲ್ಲಿ ಜಿಲ್ಲಾ ಕಾರ್ಮಿಕ ಮುಖಂಡರಾದ ಮಲ್ಲಿಕಾರ್ಜುನ ಎಚ್.ಟಿ, ಸುನೀಲ ಸಿದ್ರಾಮಶೆಟ್ಟಿ, ಕಾಸಿಬಾಯಿ ತಳವಾರ, ರಸೂಲ್‌ ಮುಜಾವರ, ಕಾಸಿಬಾಯಿ ಜನಗೊಂಡ ಮುಂತಾದವರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು