ಭಾನುವಾರ, ಅಕ್ಟೋಬರ್ 24, 2021
21 °C

ಅಭ್ಯರ್ಥಿಗಳ ಚುನಾವಣಾ ವೆಚ್ಚ ₹ 30.80 ಲಕ್ಷ ಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಸಿಂದಗಿ ವಿಧಾನಸಭಾ ಉಪಚುನಾವಣೆಗೆ ಸಂಬಂಧಪಟ್ಟಂತೆ ಸ್ಫರ್ಧಿಸುವ ಅಭ್ಯರ್ಥಿಗಳ ಚುನಾವಣಾ ಖರ್ಚು ಒಟ್ಟು ₹ 30.80 ಲಕ್ಷ ಗಳಿಗೆ ಮಿತಿಗೊಳಿಸಿ ಚುನಾವಣಾ ಆಯೋಗವು ನಿರ್ದೇಶನ ನೀಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್ ಹಿನ್ನೆಲೆಯಲ್ಲಿ ಪ್ರಚಾರದ ಸಮಯವನ್ನು ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಮಾತ್ರ ನೀಡಲಾಗಿದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳು, ಚುನಾವಣಾ ಏಜೆಂಟ್, ಪೊಲಿಂಗ್‌ ಏಜೆಂಟ್, ಕೌಂಟಿಂಗ್ ಏಜೆಂಟ್, ವಾಹನ ಚಾಲಕರಿಗೆ ಮತ್ತು ಇತರರಿಗೆ ಕೋವಿಡ್ 19 ಲಸಿಕೆ ಕಡ್ಡಾಯವಾಗಿದೆ. ಇವರೆಲ್ಲರೂ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಸಲ್ಲಿಸಿದರೆ ಮಾತ್ರ ಮತದಾನ ಪ್ರಕ್ರಿಯೆ ಮತ್ತು ಮತ ಎಣಿಕೆ ಪ್ರಕ್ರಿಯೆ ಕೊಠಡಿಯೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.

ವೀಕ್ಷಕರ ನೇಮಕ: 

ಕೇಂದ್ರ ಚುನಾವಣಾ ಆಯೋಗವು ಉಪಚುನಾವಣೆಗಾಗಿ ನೇಮಿಸಿರುವ ಮೂವರು ವೀಕ್ಷಕರು ವಿಜಯಪುರಕ್ಕೆ ಆಗಮಿಸಿದ್ದಾರೆ. ಅನಿಲ್ ಭಂಡಾರಿ (ಮೊ.ಸಂ.94804-40763) ಸಾಮಾನ್ಯ ವೀಕ್ಷಕರಾಗಿದ್ದಾರೆ. ಶಹಾಜಿ ಉಮಾಪ್ (ಮೊ.ಸಂ.94836-31950) ಪೊಲೀಸ್‌ ವೀಕ್ಷಕರಾಗಿದ್ದಾರೆ.  ಅನ್ವರ್ ಅಲಿ (ಮೊ.ಸಂ.94831-51304) ವೆಚ್ಚ ವೀಕ್ಷಕರಾಗಿದ್ದಾರೆ ಎಂದು ತಿಳಿಸಿದರು.

ಈ ಉಪಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದಲ್ಲಿ ಸಂಬಂಧಪಟ್ಟ ರಾಜಕೀಯ ಪಕ್ಷ, ಅಭ್ಯರ್ಥಿಗಳು ಹಾಗೂ ಸಾರ್ವಜನಿಕರು ಮೇಲ್ಕಂಡ ಮೊಬೈಲ್‌ ಸಂಖ್ಯೆಗಳಿಗೆ ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

ಆಯೋಗದಿಂದ ಅನುಮೋದನೆಗೊಂಡಿರುವ ಅಂತಿಮ ಮತಗಟ್ಟೆ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಯಿತು.

ಚುನಾವಣಾ ಅಂಗವಾಗಿ ಸ್ಟಾರ್ ಪ್ರಚಾರಕರ ಪ್ರಚಾರ ಸಂದರ್ಭದಲ್ಲಿ ಒಂದು ಸಾವಿರದೊಳಗೆ ಜನರ ಸೇರ್ಪಡೆಗೆ ಅವಕಾಶ ಕಲ್ಪಿಸಿದ್ದು, ಸ್ಟಾರ್ ಪ್ರಚಾರಕವಲ್ಲದವರ ಸಂದರ್ಭದಲ್ಲಿ ಐದು ನೂರು ಜನರು ಪ್ರಚಾರಕ್ಕೆ ಸೇರಲು ಅವಕಾಶವಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು