ಭಾನುವಾರ, ಜುಲೈ 25, 2021
22 °C

ಬಬಲೇಶ್ವರ | ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ದೇವರಗೆಣ್ಣೂರ, ಸುತಗಂಡಿ, ಬಬಲಾದಿ ಮತ್ತು ನೆರೆಯ ಬಾಗಲಕೋಟೆ ಜಿಲ್ಲೆಯ ಬಿದರಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುಮಾರು 10 ದಿನಗಳಿಂದ ಆತಂಕ ಮೂಡಿಸಿದ್ದ ಚಿರತೆ ಶುಕ್ರವಾರ ಬೆಳಿಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ವಿಜಯಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಶಿಕ್ಕಲಗಾರ, ಸುಮಾರು 3ರಿಂದ 4 ವರ್ಷ ವಯಸ್ಸಿನ ಗಂಡು ಚಿರತೆ ಸೆರೆ ಸಿಕ್ಕಿದ್ದು, ದಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಗುವುದು ಎಂದು ಹೇಳಿದರು.

ಆರಂಭದಲ್ಲಿ ಇದು ಚಿರತೆ ಎಂದು ತಿಳಿದುಬಂದಿರಲಿಲ್ಲ. ತೋಳ ಇರಬಹುದು ಎಂದು ಭಾವಿಸಿದ್ದೆವು. ಆದರೆ, ಅದರ ಹೆಜ್ಜೆ ಗುರುತುಗಳನ್ನು ಪರಿಶೀಲಿಸಿದಾಗ ಚಿರತೆ ಎಂಬುದು ದೃಢಪಟ್ಟಿತು ಎಂದು ಹೇಳಿದರು.

ಚಿರತೆಯ ಚಲನವಲನ ಗಮನಿಸಲು ಎಂಟು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಚಿರತೆ ಸೆರೆಹಿಡಿಯಲು ನಾಲ್ಕು ಸ್ಥಳಗಳಲ್ಲಿ ಬೋನ್ ಇರಸಿ, ಮೇಕೆಗಳನ್ನು ಕಟ್ಟಿಹಾಕಿದ್ದೆವು. ಮೇಕೆ ತಿನ್ನಲು ಹೋಗಿ ಬೋನಿಗೆ ಬಿದ್ದಿದೆ ಎಂದರು.

10 ಕುರಿಗಳ ಮೇಲೆ ದಾಳಿ ಮಾಡಿ, ತಿಂದು ಹಾಕಿದೆ ಮತ್ತು ಎರಡು ಆಕಳ ಮೈಯನ್ನು ಪರಚಿದೆ. ಮನುಷ್ಯರಿಗೆ ತೊಂದರೆ ಮಾಡಿರಲಿಲ್ಲ. ಚಿರತೆ ದಾಳಿಗೆ ಬಲಿಯಾಗಿರುವ ಕುರಿಗಳ ಮಾಲೀಕರಿಗೆ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಲಾಗುವುದು ಎಂದು ಭರವಸೆ ನೀಡಿದರು.

ಖಾನಾಪುರ ಅರಣ್ಯ ಅಥವಾ ಬಾಗಲಕೋಟೆ ಜಿಲ್ಲೆಯ ಯಡಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಬಹುಷ್ಯ ಈ ಚಿರತೆ ಬಂದಿರಬಹುದು ಎಂದು ಅಭಿಪ್ರಾಯಪಟ್ಟರು.

ದೇವರಗೆಣ್ಣೂರ, ಸುತಗಂಡಿ, ಬಬಲಾದಿ, ಬಿದರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಯಾರೂ ಸಂಚರಿಸದಂತೆ ಹಾಗೂ ಜಮೀನುಗಳಿಗೆ ಒಂಟಿಯಾಗಿ ತೆರಳದಂತೆ ಅರಣ್ಯ ಇಲಾಖೆ  ಅಧಿಕಾರಿಗಳು ಡಂಗೂರ ಸಾರಲಾಗಿತ್ತು. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಶಾಸಕ ಎಂ.ಬಿ.ಪಾಟೀಲ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದರು.

ಎಸಿಎಫ್‌ ಬಿ.ಪಿ.ಚವ್ಹಾಣ, ಆರ್‌ಎಫ್‌ಒ ಪ್ರಭುಲಿಂಗ, ವನ್ಯಜೀವಿ ತಜ್ಞ ಪ್ರಶಾಂತ ದೇಸಾಯಿ, ಗಾರ್ಡ್‌ ಮತ್ತು ವಾಚರ್‌ಗಳು ಚಿರತೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು